ADVERTISEMENT

ಬಿಇಒ– ಇಸಿಒ ಅಮಾನತಿಗೆ ಸಿಇಒ ಸೂಚನೆ

ಸರ್ಕಾರಿ– ಅನುದಾನಿತ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ವಿಳಂಬ: ಗೋದಾಮಿನಲ್ಲಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 14:01 IST
Last Updated 30 ಆಗಸ್ಟ್ 2018, 14:01 IST
ಪಠ್ಯಪುಸ್ತಕ ವಿತರಣೆ ವಿಳಂಬವಾಗಿರುವ ಸಂಬಂಧ ಜಿ.ಪಂ ಸಿಇಒ ಕೆ.ಎಸ್‌.ಲತಾಕುಮಾರಿ ಬಿಇಒ ರಘುನಾಥರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಪಠ್ಯಪುಸ್ತಕ ವಿತರಣೆ ವಿಳಂಬವಾಗಿರುವ ಸಂಬಂಧ ಜಿ.ಪಂ ಸಿಇಒ ಕೆ.ಎಸ್‌.ಲತಾಕುಮಾರಿ ಬಿಇಒ ರಘುನಾಥರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.   

ಕೋಲಾರ: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬವಾಗಿರುವ ಸಂಬಂಧ ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮತ್ತು ನಿಕಟಪೂರ್ವ ಶಿಕ್ಷಣ ಸಂಯೋಜಕ (ಇಸಿಒ) ರವಣಪ್ಪ ಅವರ ಅಮಾನತಿಗೆ ಶಿಫಾರಸು ಮಾಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್‌.ಲತಾಕುಮಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಶೈಕ್ಷಣಿಕ ವರ್ಷ ಆರಂಭವಾಗಿ ಅರ್ಧ ವರ್ಷ ಕಳೆದರೂ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆಯಾಗದ ಸಂಬಂಧ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಜಿ.ಪಂ ಅಧಿಕಾರಿಗಳ ತಂಡವು ಬಿಇಒ ಕಚೇರಿ ಆವರಣದಲ್ಲಿನ ಪಠ್ಯಪುಸ್ತಕ ಗೋದಾಮಿಗೆ ಬುಧವಾರ ಸಂಜೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದಾಗ ಪುಸ್ತಕಗಳ ರಾಶಿಯೇ ಪತ್ತೆಯಾಗಿತ್ತು.

ಬಳಿಕ ಅಧಿಕಾರಿಗಳು ಗೋದಾಮಿಗೆ ಬೀಗಮುದ್ರೆ ಹಾಕಿ, ಪಠ್ಯಪುಸ್ತಕಗಳು ವಿತರಣೆಯಾಗದ ಸಂಬಂಧ ಸಿಇಒ ಲತಾಕುಮಾರಿ ಅವರಿಗೆ ವರದಿ ನೀಡಿದ್ದರು. ಈ ವರದಿ ಆಧರಿಸಿ ಸಿಇಒ ಗುರುವಾರ ಬೆಳಿಗ್ಗೆ ಗೋದಾಮಿನ ಬೀಗಮುದ್ರೆ ತೆರೆಸಿ ಪರಿಶೀಲನೆ ಮಾಡಿದರು.

ADVERTISEMENT

ಸಿಇಒ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಭೆ ನಡೆಸಿದ್ದ ಸಂದರ್ಭದಲ್ಲಿ ಬಿಇಒ ರಘುನಾಥರೆಡ್ಡಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಶೇ 100ರಷ್ಟು ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು. ಆ ನಂತರವೂ ಮಕ್ಕಳಿಗೆ ಪಠ್ಯಪುಸ್ತಕ ತಲುಪದ ಸಂಬಂಧ ಜನಪ್ರತಿನಿಧಿಗಳು ಹಾಗೂ ಪೋಷಕರಿಂದ ದೂರು ಬಂದಿದ್ದವು.

ಬಿಇಒಗೆ ತರಾಟೆ: ಗೋದಾಮಿನಲ್ಲಿ ಪುಸ್ತಕಗಳ ರಾಶಿ ಕಂಡು ಕೆಂಡಮಂಡಲರಾದ ಸಿಇಒ, ‘ಪುಸ್ತಕಗಳ ವಿತರಣೆ ಬಾಕಿಯಿದ್ದರೂ ಶೇ 100ರಷ್ಟು ವಿತರಣೆಯಾಗಿದೆ ಎಂದು ಸುಳ್ಳು ವರದಿ ನೀಡಿದ್ದೀರಿ. ಇಸಿಒ ರವಣಪ್ಪ ಹೆಸರಿನಲ್ಲಿ ದಾಖಲೆಪತ್ರಗಳಿಗೆ ನಕಲಿ ಸಹಿ ಮಾಡಿ ಪಠ್ಯಪುಸ್ತಕ ವಿತರಿಸಲಾಗಿದೆ. ಇಷ್ಟಾದರೂ ವಾರದ ಹಿಂದೆಯಷ್ಟೇ ಪಠ್ಯಪುಸ್ತಕ ದಾಸ್ತಾನು ಬಂದಿರುವುದಾಗಿ ಇಸಿಒ ಸುಳ್ಳು ಹೇಳುತ್ತಿದ್ದಾರೆ. ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವೇ?’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಯಾವುದೇ ಶಾಲೆಗೆ ಭೇಟಿ ನೀಡಿದರೂ ಪುಸ್ತಕಗಳು ಸರಬರಾಜಾಗಿಲ್ಲ ಎಂಬ ದೂರು ಕೇಳಿಬರುತ್ತಿದೆ. ಇಷ್ಟಾದರೂ ನೀವು ಜೂನ್‌ನಿಂದ ಆಗಸ್ಟ್‌ವರೆಗೂ ಒಂದೇ ಮಾಹಿತಿ ಹೇಳುತ್ತಾ ನಿರ್ಲಕ್ಷ್ಯ ತೋರಿದ್ದೀರಿ. ಬಿಇಒ ಮತ್ತು ಡಿಡಿಪಿಐ ಕೆಲಸ ನಾನು ಮಾಡಬೇಕಾ? ಎಲ್ಲಾ ಪುಸ್ತಕ ಕೊಟ್ಟಿದ್ದೀವಿ ಎಂದು ಹೇಳುತ್ತೀರಿ. ಹಾಗಾದರೆ ಇಲ್ಲಿರುವ ಪುಸ್ತಕಗಳು ಯಾವುವು?’ ಎಂದು ಪ್ರಶ್ನಿಸಿದರು.

‘ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಬೇಕೆಂಬ ಕನಿಷ್ಠ ಪ್ರಜ್ಞೆಯೂ ಇಲ್ಲ. ಸರ್ಕಾರ ಬಡ ಮಕ್ಕಳಿಗಾಗಿ ಪುಸ್ತಕ ಸರಬರಾಜು ಮಾಡಿದೆ. ಆದರೆ, ನೀವು ಮಕ್ಕಳಿಗೆ ಪುಸ್ತಕ ಕೊಡದೆ ಗೋದಾಮಿನಲ್ಲಿಟ್ಟು ಪೂಜೆ ಮಾಡುತ್ತಿದ್ದೀರಾ?’ ಎಂದು ಅಧಿಕಾರಿಗಳ ಬೆವರಿಳಿಸಿದರು.

ಅಮಾನತಿಗೆ ಸೂಚನೆ: ‘ಶೈಕ್ಷಣಿಕ ವರ್ಷ ಅರ್ಧ ಮುಗಿದಿದೆ. ಆದರೂ ಪುಸ್ತಕಗಳು ಮಕ್ಕಳ ಕೈಸೇರಿಲ್ಲ ಎಂದರೆ ಅವರು ಕಲಿಯುವುದಾದರೂ ಹೇಗೆ? ಪುಸ್ತಕ ವಿತರಣೆ ಎಷ್ಟಾಗಿದೆ, ಎಷ್ಟು ಬಾಕಿಯಿದೆ ಎಂಬ ಬಗ್ಗೆ ಸಮಗ್ರ ವರದಿ ನೀಡಿ. ಪುಸ್ತಕ ವಿತರಣೆಯಲ್ಲಿ ವಿಳಂಬವಾಗಿರುವ ಸಂಬಂಧ ಬಿಇಒ ಹಾಗೂ ಇಸಿಒ ಅವರನ್ನು ಅಮಾನತು ಮಾಡಿ ತನಿಖೆ ನಡೆಸಿ’ ಎಂದು ಡಿಡಿಪಿಐ ಕೆ.ರತ್ನಯ್ಯ ಅವರಿಗೆ ಸೂಚಿಸಿದರು.

ಕಾರ್ಯಭಾರ ವಹಿಸಿಕೊಟ್ಟಿಲ್ಲ: ‘ರವಣಪ್ಪ ಅವರು ಶ್ರೀನಿವಾಸಪುರ ತಾಲ್ಲೂಕಿನ ವೈ.ಹೊಸಕೋಟೆ ಸರ್ಕಾರಿ ಪ್ರೌಢ ಶಾಲೆಗೆ ಜುಲೈ 30ರಂದು ವರ್ಗಾವಣೆಯಾಗಿದ್ದಾರೆ. ಅವರ ಹುದ್ದೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ರವಣಪ್ಪ ಕಾರ್ಯಭಾರ ವಹಿಸಿಕೊಟ್ಟಿಲ್ಲ. ಅಲ್ಲದೇ, ವೈ.ಹೊಸಕೋಟೆ ಶಾಲೆಯಲ್ಲೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಅಲ್ಲಿಗೂ ಹೋಗದೆ ಇಲ್ಲಿಯೂ ಕೆಲಸ ಮಾಡದೆ ಅಡ್ಡಾಡಿಕೊಂಡಿದ್ದಾರೆ’ ಎಂದು ಶಿಕ್ಷಕರೊಬ್ಬರು ಸಿಇಒ ಗಮನಕ್ಕೆ ತಂದರು.

ಈ ವಿಷಯ ತಿಳಿದು ಮತ್ತಷ್ಟು ಕೆರಳಿದ ಸಿಇಒ, ‘ವರ್ಗಾವಣೆಯಾದ ಮೇಲೆ ಬಿಇಒ ಕಚೇರಿಗೂ ನಿಮಗೂ ಏನು ಸಂಬಂಧ? ವರ್ಗಾವಣೆಯಾದ ಶಾಲೆಯಲ್ಲಿ ಏಕೆ ಕಾರ್ಯ ನಿರ್ವಹಿಸುತ್ತಿಲ್ಲ?’ ಎಂದು ರವಣಪ್ಪ ವಿರುದ್ಧ ಹರಿಹಾಯ್ದರು.

ಪ್ರಕರಣ ದಾಖಲಿಸಿ: ‘ಬಿಇಒ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಪಠ್ಯಪುಸ್ತಕ ವಿತರಣೆಯ ದಾಖಲೆಪತ್ರ ನಿರ್ವಹಣೆ ಮಾಡಿಲ್ಲ, ಇಸಿಒ ಸಹಿ ನಕಲಿಯಾಗಿದೆ. ಪಠ್ಯಪುಸ್ತಕ ವಿತರಣೆಯಲ್ಲಿನ ಅಕ್ರಮದ ಸಂಬಂಧ ಪ್ರಕರಣ ದಾಖಲಿಸಿ ಸಮಗ್ರ ವರದಿ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇನೆ’ ಎಂದು ಡಿಡಿಪಿಐಗೆ ಖಡಕ್‌ ಎಚ್ಚರಿಕೆ ನೀಡಿದರು.

***
ಜಿಲ್ಲೆಯಲ್ಲಿ ಶೈಕ್ಷಣಿಕ ವಲಯವಾರು ಪುಠ್ಯಪುಸ್ತಕ ಬೇಡಿಕೆ
ವಲಯ ಬೇಡಿಕೆ
ಬಂಗಾರಪೇಟೆ 2,43,433
ಕೆಜಿಎಫ್‌ 1,78,911
ಕೋಲಾರ 3,78,374
ಮಾಲೂರು 2,21,601
ಮುಳಬಾಗಿಲು 2,33,056
ಶ್ರೀನಿವಾಸಪುರ 1,94,644

ಅಂಕಿ ಅಂಶ.....
* 2,567 ಶಾಲೆಗಳು ಜಿಲ್ಲೆಯಲ್ಲಿವೆ
* 1,267 ಕಿರಿಯ ಪ್ರಾಥಮಿಕ ಶಾಲೆ
* 944 ಹಿರಿಯ ಪ್ರಾಥಮಿಕ ಶಾಲೆ
* 356 ಪ್ರೌಢ ಶಾಲೆಗಳು
* 14,50,019 ಪಠ್ಯಪುಸ್ತಕ ಬೇಡಿಕೆ
* 572 ನಮೂನೆಯ ಪಠ್ಯಪುಸ್ತಕಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.