ADVERTISEMENT

`ಅಭ್ಯರ್ಥಿ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆ'

ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 6:14 IST
Last Updated 25 ಡಿಸೆಂಬರ್ 2012, 6:14 IST

ಬೀದರ್: ಮಹಿಳೆಯರು, ಹಿಂದುಳಿದ ವರ್ಗಗಳ ಪ್ರತಿನಿಧಿಗಳು ಸೇರಿದಂತೆ ಮುಂಬರುವ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯದ ಆಧಾರದಡಿ ಪಕ್ಷ ಟಿಕೆಟ್ ನೀಡಲಿದ್ದು, ಪಕ್ಷದ ಗೆಲುವಿಗೆ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸೋಮವಾರ ಕರೆ ನೀಡಿದರು.

ಬೀದರ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿದ ಮಾತನಾಡಿದ ಅವರು, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಅಧಿಕಾರ ಸಿಗುವಂತೆ ಮೀಸಲಾತಿ ತರುವಲ್ಲಿ ಜೆಡಿಎಸ್‌ನ ಪಾಲು ದೊಡ್ಡದು ಎಂದರು.

ಪ್ರಧಾನಿಯಾಗಿದ್ದಾಗ ಮೀಸಲಾತಿ ತರಲು ಕೈಗೊಂಡ ಕ್ರಮವನ್ನುವಿವರಿಸಿದ ಅವರು, ಇದರ ಪರಿಣಾಮ ಇಂದು ಮುಸಲ್ಮಾನರು, ಪರಿಶಿಷ್ಠರು ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ ಸೇರಿದಂತೆ ಪ್ರಮುಖ  ಸ್ಥಾನಗಳನ್ನು ಅಲಂಕರಿಸುವುದು ಸಾಧ್ಯವಾಗಿದೆ ಎಂದರು.

`ಮಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಬೇಕಾಗಿದೆ. ಈ ದೇವೇಗೌಡ ಸುಮ್ಮನೆ ಕೂರುವುದಿಲ್ಲ. ಒಮ್ಮೆ ದೇವೇಗೌಡರು ಹೋಗಿಯೇ ಬಿಟ್ಟ ಎಂದೂ ಸುದ್ದಿ ಹಬ್ಬಿಸಿದ್ದರು. ನನಗೆ ಎಲ್ಲವೂ ಗೊತ್ತಿದೆ. ನಾನು ಯಾವುದನ್ನು ಮರೆತಿಲ್ಲ. ತಾಲ್ಲೂಕುಗಳಿಗೂ ಭೇಟಿ ನೀಡುತ್ತೇನೆ. ಎಲ್ಲರೂ ಕೈ ಜೋಡಿಸಬೇಕು' ಎಂದು ಕೋರಿದರು.

`ಕಾರ್ಯಕರ್ತರು ಸುಮ್ಮನೆ ಕುಮಾರಣ್ಣ ಎಂದರೆ ಆಗದು. ಪಕ್ಷವನ್ನು ಅಧಿಕಾರಕ್ಕೆ ತರಲು ಅವರೊಂದಿಗೆ ಓಡಾಡಬೇಕು. ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೆ ಹೋಲಿಸಿದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಒಂದು ತೂಕ ಮುಂದೆ ಎಂಬುದನ್ನು ತೋರಿಸಬೇಕು. ಜೆಡಿಎಸ್ ಎಂದೂ ಅಪ್ಪ-ಮಕ್ಕಳ ಪಕ್ಷವಲ್ಲ' ಎಂದರು.

ಬಂಡೆಪ್ಪಾ ಕಾಶೆಂಪುರ ಅವರು ಈ ಭಾಗದ ಮುಖಂಡರಾಗಿದ್ದಾರೆ, ಅವರು ಎಲ್ಲರನ್ನು ಒಟ್ಟಿಗೇ ಕರೆದುಕೊಂಡು ಮುನ್ನಡೆಯುವ ಮೂಲಕ ರಾಜ್ಯದ ಮುಖಂಡರಾಗಿ ಹೊರಹೊಮ್ಮಬೇಕು. ಆ ಮೂಲಕ ಪಕ್ಷದ ಮುನ್ನಡೆಗೆ ಶ್ರಮಿಸಬೇಕು ಎಂದು ಸಲಹೆ ಮಾಡಿದರು. ಶಾಸಕ ಬಂಡೆಪ್ಪಾ ಕಾಶೆಂಪುರ ಅವರು ಮಾತನಾಡಿದ, ದೇವೇಗೌಡರು ಎಲ್ಲರಿಗೂ ನ್ಯಾಯ ಒದಗಿಸಲಿದ್ದು, ಜೆಡಿಎಸ್ ತಂದೆ ಮಕ್ಕಳ ಪಕ್ಷ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು  ಪ್ರತಿಪಾದಿಸಿದರು.

ಮುಖಂಡರಾದ ವಸಂತ ಬಿರಾದಾರ, ಮುರಳೀಧರ ಎಕಲಾರಕರ, ರಾಮಚಂದ್ರ ಗಂದಗೆ, ಸಯ್ಯದ್ ಶಾಹನುಲ್ಲಾ ಹಕ್ ಬುಖಾರಿ, ಈಶ್ವರಪ್ಪ ಚಕೋತೆ, ಶಾಂತಲಿಂಗ ಸಾವಳಗಿ, ಕಾಶೀನಾಥ ಬೇಲೂರೆ, ನಗರಸಭೆ ಅಧ್ಯಕ್ಷೆ ಶ್ರೀದೇವಿ ಕರಂಜೆ ಮತ್ತು ಇತರ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.