ADVERTISEMENT

ಕೆಜೆಪಿ: ಸಿದ್ರಾಮ ಜಿಲ್ಲಾ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 7:08 IST
Last Updated 13 ಸೆಪ್ಟೆಂಬರ್ 2013, 7:08 IST

ಬೀದರ್: ಸೋಲು ಗೆಲುವು ಸಹಜ. ಆದರೆ, ಸೋಲಿನಿಂದ ವಿಚಲಿತರಾಗದೇ ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಕ್ರಿಯರಾಗಿ ತೊಡಗಿಕೊಳ್ಳಬೇಕು ಎಂದು ಶಾಸಕ ಗುರುಪಾದಪ್ಪ ನಾಗ­ಮಾರಪಳ್ಳಿ ಅವರು ಕರೆ ನೀಡಿದರು.

ಕರ್ನಾಟಕ ಜನತಾ ಪಕ್ಷದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಡಿ.ಸಿ.ಸಿದ್ರಾಮ ಅವರು ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮಾತ­ನಾ­ಡಿದ ಅವರು, ಯಾವುದೇ ಪಕ್ಷದಲ್ಲಿ ಬದಲಾವಣೆ ಸಹಜ. ಪಕ್ಷ ಬಲ­ಪಡಿಸಲು ಈಗ ಅಧ್ಯಕ್ಷರಾಗಿ ಸಿದ್ರಾಮ ನೇಮಕವಾಗಿದ್ದಾರೆ. ಇದರಿಂದ ಯಾರೂ ಮನಸ್ತಾಪ ಮಾಡಿಕೊಳ್ಳ­ಬಾರದು ಎಂದು ಸಲಹೆ  ಮಾಡಿದರು.

‘ಪಕ್ಷ ಒಂದು ಕುಟುಂಬ ಇದ್ದಂತೆ. ಎಲ್ಲರೂ ಒಗ್ಗೂಡಿ ಪಕ್ಷದ ಏಳಿಗೆಗೆ ಶ್ರಮಿಸಬೇಕು. ತಾಳಿದವನು ಬಾಳಿ­ಯಾನು ಎಂದು ವಿಶ್ವಗುರು ಬಸವಣ್ಣ ಅವರು ಹೇಳಿದ್ದಾರೆ. ತಾಳ್ಮೆ ಇದ್ದವರಿಗೆ ಯಶಸ್ಸು, ನೆಮ್ಮದಿ, ಸಮಾಧಾನ, ದೊರೆಯುತ್ತದೆ. ಹೀಗಾಗಿ ಒಳ್ಳೆಯ ದಿನಗಳಿಗೆ ತಾಳ್ಮೆಯಿಂದ ಕಾಯಬೇಕು’ ಎಂದರು.

ಮುಖಂಡರಾದವರಿಗೆ ಸಹನ ಶಕ್ತಿ ಇರಬೇಕು. ಮುಖ ಮೇಲೆ ಮಾಡಿ ನಡೆದರೆ ಕಷ್ಟಗಳು ಬರುತ್ತವೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ ಡಿ.ಕೆ. ಸಿದ್ರಾಮ ಬಳಿಯಿದೆ. ಅವರು ಅಧ್ಯಕ್ಷರಾಗಿ ಯಶಸ್ವಿಯಾಗಿ ಪಕ್ಷ ಮುನ್ನಡೆಸುವ ವಿಶ್ವಾಸವಿದೆ ಎಂದು ಹೇಳಿದರು.

ಲೋಕಸಭೆಗೆ ಸ್ಪರ್ಧೆ ಇಲ್ಲ: ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿವುದಿಲ್ಲ  ಎಂದು ಇದೇ ಸಂದರ್ಭದಲ್ಲಿ ಘೋಷಿಸಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಭಾಲ್ಕಿ ಕ್ಷೇತ್ರದಲ್ಲಿ ಸಿದ್ರಾಮ ಸ್ಪರ್ಧೆ ಕುರಿತು ಸಂಸದ ಧರ್ಮಸಿಂಗ್ ಆಡಿದ್ದಾರೆ ಎನ್ನಲಾದ ಮಾತಿಗೂ ಅಸಮಾಧಾನ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷರಾದ ಸಿದ್ರಾಮ ಅವರು, ಜಿಲ್ಲೆಯಲ್ಲಿ  ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತುನೀಡಲಿದ್ದು, ಬರಲಿರುವ ಲೋಕಸಭೆ ಚುನಾವಣೆ ಒಂದು ಸವಾಲಾಗಿದೆ ಎಂದರು. ಪಕ್ಷದ ಅಧ್ಯಕ್ಷ ಯಡಿಯೂರಪ್ಪ ಅವರ ಕೈಬಲ­ಪಡಿಸಲು ಪಕ್ಷ ಸಂಘಟಿಸಬೇಕಿದ್ದು, ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿ  ಕಣಕ್ಕಿಳಿಸುವ ಕಾರ್ಯವೂ ಈಗಿನಿಂದಲೇ ಆರಂಭವಾಗಬೇಕಾಗಿದೆ ಎಂದರು. ಕೆಜೆಪಿ ಉಪಾಧ್ಯಕ್ಷ ಸುಭಾಷ ಕಲ್ಲೂರ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.