ADVERTISEMENT

ಚೆಕ್‌ಡ್ಯಾಂಗೆ ರಾಸಾಯನಿಕ ತ್ಯಾಜ್ಯ: ಆತಂಕ

ಪ್ರಜಾವಾಣಿ ವಿಶೇಷ
Published 1 ಆಗಸ್ಟ್ 2012, 6:20 IST
Last Updated 1 ಆಗಸ್ಟ್ 2012, 6:20 IST
ಚೆಕ್‌ಡ್ಯಾಂಗೆ ರಾಸಾಯನಿಕ ತ್ಯಾಜ್ಯ: ಆತಂಕ
ಚೆಕ್‌ಡ್ಯಾಂಗೆ ರಾಸಾಯನಿಕ ತ್ಯಾಜ್ಯ: ಆತಂಕ   

ಹುಮನಾಬಾದ್: ನಗರದ ಹೊರವಲಯದ ಆರ್.ಟಿ.ಒ ಚೆಕ್‌ಪೋಸ್ಟ್ ಪಕ್ಕದ ಕೈಗಾರಿಕಾ ಪ್ರದೇಶದಲ್ಲಿನ  ಕಾರ್ಖಾನೆಗಳಿಂದ ಪ್ರತಿನಿತ್ಯ ಹರಿಯುವ ವಿಷಪೂರಿತ ರಾಸಾಯನಿಕ ತ್ಯಾಜ್ಯ ಹೆದ್ದಾರಿ ಪಕ್ಕದ ಹಲವು ಚೆಕ್‌ಡ್ಯಾಂ ಸೇರುತ್ತಿರುವುದು ಆ ಭಾಗದ ರೈತರು ಮತ್ತು ಪರಿಸರಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ.

ಗುಲ್ಬರ್ಗ ಮಾರ್ಗದಲ್ಲಿನ ಕೆಲವು ಕಾರ್ಖಾನೆಗಳು ಹಲವು ವರ್ಷಗಳಿಂದ ಕಾರ್ಖಾನೆಯಿಂದ ಹೊರಬರುತ್ತಿರುವ ವಿಷಪೂರಿತ ರಾಸಾಯನಿಕ ತಾಜ್ಯ ಪಕ್ಕದ ಚೆಕ್‌ಡ್ಯಾಂ ಮಾತ್ರವಲ್ಲದೇ ಸುತ್ತಮುತ್ತಲಿನ  ಹೊಲಗಳಲ್ಲಿನ ಬಾವಿಗಳಿಗೂ ಸೇರಿ ನೀರು ಸಂಪೂರ್ಣ ಮಲಿನಗೊಂಡು ಬಳಕೆಗೆ ಬಾರದ ಸ್ಥತಿಗೆ ತಲುಪಿದೆ ಎಂದು ಸಾರ್ವಜನಿಕರು ದೂರಿದರು.

ಆ ನೀರು ಸೇವಿಸಿ ದನಕರುಗಳು ಸಾವನ್ನಪ್ಪಿವೆ. ಈ ನೀರಲ್ಲಿ ಸ್ನಾನ ಮಾಡಿದವರಿಗೆ ಚರ್ಮರೋದ ತಗಲಿದ ನಿದರ್ಶನಗಳಿವೆ. ಬೆಳೆಗೆ ಈ ನೀರು ಬಿಡುವುದಕ್ಕೂ ಭಯ ಆಗುತ್ತಿದೆ ಎಂದು  ಹೊಲದ ವಾರಸುದಾರ ಗಡವಂತಿ ಗ್ರಾಮದ ಹೆಮ್ಮಣ್ಣಿ ಪರಿವಾರ ಸದಸ್ಯರು ಆತಂಕ ವ್ಯಕ್ತಪಡಿಸಿದರು.

ಕಾರ್ಖಾನೆಗಳಿಂದ ದುರ್ನಾತ ಹರಡುತ್ತಿದ್ದು, ಜನರಿಗೆ ಜೀವದ ಭಯ ಮೂಡಿಸಿದೆ ಎಂದು  ಹುಮನಾಬಾದ್‌ನ ಪರಿಸರಪ್ರೇಮಿ ಶಿವಶಂಕರ ತರನಳ್ಳಿ ಮೊಬೈಲ್ ಮೂಲಕ `ಪ್ರಜಾವಾಣಿ~ಗೆ ಸಂಪರ್ಕಿಸಿ ಆತಂಕ ತೋಡಿಕೊಂಡರು.

ಅನೇಕ ಹೋರಾಟ: ವಿಷಪೂರಿತ ದುರ್ನಾತ ತಡೆಗಟ್ಟುವಂತೆ ಒತ್ತಾಯಿಸಿ, ಗಡವಂತಿ, ಮೋಳಕೇರಾ, ಮಾಣಿಕನಗರ, ಬಸಂತಪುರ, ವಾಂಜ್ರಿ ಮೊದಲಾದ ಗ್ರಾಮಗಳ ನೂರಾರು ಮಂದಿ ಕಳೆದ ಹಲವು ವರ್ಷಗಳಿಂದ ರಸ್ತೆತಡೆ ಪ್ರತಿಭಟನೆ ನಡೆಸಿರುವುದು ಈಗ ಇತಿಹಾಸ.  ಈ ಕಾರ್ಖಾನೆಗಳಿಂದ ಬರುವ ದುರ್ನಾತ ಸಹಿಸದೆ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಸ್ಥಳಾಂತರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸಣ್ಣಪುಟ್ಟ ಸಮಸ್ಯೆ ಎತ್ತಿಕೊಂಡು ಧರಣಿ, ಪ್ರತಿಭಟನೆ, ಸತ್ಯಾಗ್ರಹ ಮತ್ತು ರಸ್ತೆತಡೆ ನಡೆಸುವ ವಿವಿಧ ಸಂಘಟನೆಗಳ ಮುಖಂಡರು ಸಾಮಾಜಿಕ ಜವಾಬ್ದಾರಿ ನಿಭಾಯಿಸಿ  ಉತ್ತಮ ಪರಿಸರ ನಿರ್ಮಾಣಕ್ಕಾಗಿ ಮುಂದಾಗಬೇಕು ಎನ್ನುವುದು ಪರಿಸರ ಪ್ರೇಮಿಗಳ ಸಲಹೆ.

ಹೆದ್ದಾರಿ ಉನ್ನತೀಕರಣದಿಂದ ಪರಿಸರ ಹಾಳುಗುವ ಕುರಿತು  ಸಲಹೆ ನೀಡುವಂತೆ ಹೆದ್ದಾರಿ ಅಕ್ಕಪಕ್ಕದ ರೈತರು ಮತ್ತು ಉದ್ಯಮಿಗಳ ಸಲಹೆ ಪಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಆಗಸ್ಟ್ 1ರಂದು ಹುಮನಾಬಾದ್‌ಗೆ ಆಗಮಿಸಿ  ಕಾರ್ಖಾನೆಗಳ ವಿಷಪೂರಿತ ರ‌್ಯಾಜ್ಯದ ವಿಲೆವಾರಿ ಕುರಿತು ಪರಿಶೀಲಿಸಿ ಕ್ರಮ ಜರುಗಿಸುವುದಾಗಿ `ಪ್ರಜಾವಾಣಿ~ಗೆ ತಿಳಿಸಿದ್ದರು. ವಾಸ್ತವ ಸ್ಥಿತಿ ಕುರಿತು ಅವಲೋಕನ ಮಾಡಿದ ನಂತರವಾದರೂ ಅಧಿಕಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿ  ಎನ್ನುವುದು ಸಾರ್ವಜನಿಕರ ಒತ್ತಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.