ADVERTISEMENT

ಬಾಯಾರಿಕೆ ತಣಿಸಲು ಗೋಡಂಬಿ ಜ್ಯೂಸ್‌

ಚಿಟ್ಟಾ ಗ್ರಾಮದ ರೈತ ನಾರಾಯಣರಾವ್ ಪ್ರಯೋಗ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 6:02 IST
Last Updated 15 ಏಪ್ರಿಲ್ 2018, 6:02 IST

ಜನವಾಡ: ಬೀದರ್ ತಾಲ್ಲೂಕಿನ ಚಿಟ್ಟಾ ಗ್ರಾಮದ ಪ್ರಗತಿಪರ ರೈತ ನಾರಾಯಣರಾವ್ ಬರಿದಾಬಾದೆ ಜಿಲ್ಲೆಯ ಮಾರುಕಟ್ಟೆಗೆ ಗೋಡಂಬಿ ಹಣ್ಣಿನ ಜ್ಯೂಸ್‌ ಪರಿಚಯಿಸಿ ಗಮನ ಸೆಳೆದಿದ್ದಾರೆ.

ತಂಪು ಪಾನೀಯಗಳ ಪಟ್ಟಿಗೆ ಸೇರಿರುವ ಗೋಡಂಬಿ ಹಣ್ಣಿನ ಜ್ಯೂಸ್‌ಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಬೀದರ್‌ನ ಕೆಲ ಜ್ಯೂಸ್ ಸೆಂಟರ್‌ಗಳ ಮಾಲೀಕರು ನಾರಾಯಣರಾವ್ ತಯಾರಿಸುತ್ತಿರುವ ಗೋಡಂಬಿ ಹಣ್ಣಿನ ‘ಸಿರಪ್’ ಕೊಂಡುಕೊಳ್ಳುತ್ತಿದ್ದಾರೆ. ಸ್ನೇಹಿತರು, ಪರಿಚಯಸ್ಥರು ಮನೆಗೆ ಬಂದು ಒಯ್ಯುತ್ತಿದ್ದಾರೆ. ಸಿರಪ್‌ನಲ್ಲಿ ನೀರು ಬೆರೆಸಿ ಜ್ಯೂಸ್‌ ಸಿದ್ಧಪಡಿಸಿಕೊಂಡು ಸವಿಯುತ್ತಿದ್ದಾರೆ.

ನಿತ್ಯ 10 ಲೀಟರ್ ಗೋಡಂಬಿ ಹಣ್ಣಿನ ಸಿರಪ್ ಸಿದ್ಧಪಡಿಸುತ್ತಿದ್ದಾರೆ. ಬರುವ ದಿನಗಳಲ್ಲಿ 50 ಲೀಟರ್‌ ವರೆಗೂ ವಿಸ್ತರಿಸುವ ಆಲೋಚನೆ ಹೊಂದಿದ್ದಾರೆ. 1 ಲೀಟರ್ ಗೋಡಂಬಿ ಹಣ್ಣಿನ ಸಿರಪ್ ಬಾಟಲಿ ₹150 ಇದೆ. 500 ಎಂಎಲ್ ದರ ₹75 ಹಾಗೂ 250 ಎಂಎಲ್ ಬಾಟಲಿ ₹40ಕ್ಕೆ ಮಾರಾಟ ಮಾಡುತ್ತಿದ್ದಾರೆ.

ADVERTISEMENT

‘ಗೋಡಂಬಿ ಹಣ್ಣಿನ ರಸಕ್ಕೆ ಜಿಲ್ಲೆಯ ಮಾರುಕಟ್ಟೆಯಲ್ಲಿ ವಿಫುಲ ಅವಕಾಶಗಳಿವೆ. ಅದನ್ನು ಆಧರಿಸಿ ಮಾರುಕಟ್ಟೆಗೆ ಗೋಡಂಬಿ ಹಣ್ಣಿನ ಸಿರಪ್ ಅನ್ನು ಪರಿಚಯಿಸಿದ್ದೇನೆ. ಬೇಡಿಕೆ ಹೆಚ್ಚುತ್ತಿರುವುದು ಸಂತಸ ಉಂಟು ಮಾಡಿದೆ’ ಎಂದು ಹೇಳುತ್ತಾರೆ ನಾರಾಯಣರಾವ್ ಬರಿದಾಬಾದೆ.

‘4 ಎಕರೆ 21 ಗುಂಟೆ ಜಮೀನಿನ ಪೈಕಿ 2 ಎಕರೆ 28 ಗುಂಟೆಯಲ್ಲಿ ಗೋಡಂಬಿ ಬೆಳೆದಿದ್ದೇನೆ. ಮೊದಲು ಗೋಡಂಬಿ ಬೀಜ ಬೇರ್ಪಡಿಸಿದ ನಂತರ ಹಣ್ಣು ವ್ಯರ್ಥವಾಗಿ ಹೋಗುತ್ತಿತ್ತು. ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಜ್ಞಾನಿಗಳಿಂದ ಗೋಡಂಬಿ ಹಣ್ಣಿನ ರಸ ತಯಾರಿಸುವ ಬಗೆಯನ್ನು ಅರಿತೆ. ಈಗ ಬೀಜ ಪ್ರತ್ಯೇಕಿಸಿದ ಗೋಡಂಬಿ ಹಣ್ಣಿನಿಂದ ಸಿರಪ್ ತಯಾರಿಸಿ ಮಾರಾಟ ಮಾಡಿ ಅದರಿಂದಲೂ ಆದಾಯ ಪಡೆಯುತ್ತಿದ್ದೇನೆ’ ಎಂದು ತಿಳಿಸಿದರು.

‘ಉಡುಪಿ, ಮಂಗಳೂರು, ಕಾರವಾರ ಜಿಲ್ಲೆಗಳಲ್ಲಿ ಗೋಡಂಬಿ ಹಣ್ಣಿನ ಜ್ಯೂಸ್‌ಗೆ ಹೆಚ್ಚು ಬೇಡಿಕೆ ಇದೆ. ಆದರೆ, ಈ ಭಾಗದಲ್ಲಿ ಇದನ್ನು ಮೊದಲ ಬಾರಿಗೆ ಪರಿಚಯಿಸಿದ ಹೆಮ್ಮೆ ನನ್ನದು’ ಎಂದು ನುಡಿದರು.

‘ಹಿತಕರ ಅನುಭವ ನೀಡುವ ಗೋಡಂಬಿ ಹಣ್ಣಿನ ಜ್ಯೂಸ್‌ ಕಬ್ಬಿಣಾಂಶ, ಕ್ಯಾಲ್ಸಿಯಂ, ಕೊಬ್ಬನ್ನು ಹೊಂದಿದೆ. ‘ಸಿ’ ಜೀವಸತ್ವ ಕೊರತೆಯನ್ನೂ ನಿವಾರಿಸುತ್ತದೆ. ಹೀಗಾಗಿ ಅನೇಕರು ಮನೆವರೆಗೆ ಬಂದು ಸಿರಪ್ ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ’ ಎಂದು ಹೇಳುತ್ತಾರೆ.

ಸಿರಪ್ ತಯಾರಿ ವಿಧಾನ: ಮಾಗಿದ ಗೋಡಂಬಿ ಹಣ್ಣುಗಳನ್ನು ತಂದು ಬೀಜದಿಂದ ಬೇರ್ಪಡಿಸಲಾಗುತ್ತದೆ. ನಂತರ ಹಣ್ಣುಗಳನ್ನು ಚೆನ್ನಾಗಿ ತೊಳೆದು ರಸ ಹಿಂಡಲಾಗುತ್ತದೆ. ಒಂದು ತಿಂಗಳವರೆಗೂ ಬಾಳಿಕೆ ಬರಲು 1 ಲೀಟರ್ ರಸದಲ್ಲಿ ಒಂದು ನಿಂಬೆ ಹಣ್ಣಿನ ರಸ ಬೆರೆಸಲಾಗುತ್ತದೆ. ಬಳಿಕ ರಸದಲ್ಲಿನ ಒಗರಿನ ಅಂಶ ತೆಗೆಯಲು ಎರಡು ಚಮಚ ಸಾಬುದಾಣಿ ಗಂಜಿ ಹಾಕಿ ಬೆರೆಸಿ 5 ರಿಂದ 10 ನಿಮಿಷ ಇಡಲಾಗುತ್ತದೆ. ಒಗರಿನ ಅಂಶ ತಳ ಸೇರಿದ ನಂತರ ಮೇಲಿನ ರಸವನ್ನು ಸೋಸಲಾಗುತ್ತದೆ. ಅದಕ್ಕೆ 1 ಕೆ.ಜಿ. ಸಕ್ಕರೆಯನ್ನು ಸೇರಿಸಲಾಗುತ್ತದೆ. ನಂತರ ಗೋಡಂಬಿ ಹಣ್ಣಿನ ಸಿರಪ್ ಸಿದ್ಧವಾಗುತ್ತದೆ. 1 ಗ್ಲಾಸ್ ಸೀರಪ್‌ಗೆ 4 ಗ್ಲಾಸ್ ಅನುಪಾತದಲ್ಲಿ ನೀರು ಸೇರಿಸಿ ಗೋಡಂಬಿ ಹಣ್ಣಿನ ಜ್ಯೂಸ್‌ ಮಾಡಿಕೊಂಡು ಕುಡಿಯಬಹುದು.

‘ಗೋಡಂಬಿ ಹಣ್ಣಿನ ರಸ ತುಂಬಾ ಚೆನ್ನಾಗಿದೆ. ಔಷಧೀಯ ಗುಣಗಳನ್ನೂ ಹೊಂದಿರುವ ಕಾರಣ ಗ್ರಾಹಕರಿಗೆ ಇಷ್ಟವಾಗುತ್ತಿದೆ’ ಎಂದು ಹೇಳಿದರು ಗ್ರಾಹಕರಾದ ಟಿ.ಮರ್ಜಾಪುರದ ವಿಠ್ಠಲ ರೆಡ್ಡಿ ಹಾಗೂ ಗಾದಗಿಯ ಶ್ರೀನಿವಾಸ ರೆಡ್ಡಿ.

‘ವ್ಯರ್ಥವಾಗಿ ಹೋಗುತ್ತಿದ್ದ ಹಣ್ಣಿಗಳಿಂದ ರಸ ತೆಗೆದು ಸಿರಪ್‌ ತಯಾರಿಸಿ ಮಾರಾಟ ಮಾಡುವ ಮೂಲಕ ನಾರಾಯಣರಾವ್ ಇತರ ರೈತರಿಗೆ ಮಾದರಿಯಾಗಿದ್ದಾರೆ’ ಎಂದು ಹೇಳುತ್ತಾರೆ ಅವರು.

ನಾರಾಯಣರಾವ್ ಅವರ ಮೊಬೈಲ್ ಸಂಖ್ಯೆ: 89709 20103.

**

ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ಗೋಡಂಬಿ ಹಣ್ಣಿನ ರಸ ಸೂಕ್ತವಾಗಿದೆ. ಔಷಧೀಯ ಗುಣಗಳನ್ನೂ ಹೊಂದಿರುವ ಕಾರಣ ಆರೋಗ್ಯಕ್ಕೆ ಒಳ್ಳೆಯದ್ದಾಗಿದೆ – ನಾರಾಯಣರಾವ್ ಬರಿದಾಬಾದೆ, ಪ್ರಗತಿಪರ ರೈತ

**

- ನಾಗೇಶ ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.