ಬಸವಕಲ್ಯಾಣ: ತಾಲ್ಲೂಕಿನ ಈಶ್ವರನಗರ, ಕೈಕಾಡಿ ಗಲ್ಲಿ ಮತ್ತು ಪಾರಧಿ ಓಣಿಗಳಿಗೆ ಶಾಸಕ ಮಲ್ಲಿಕಾರ್ಜುನ ಖೂಬಾ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಪಾರಧಿಗಲ್ಲಿ ಇಳಿಜಾರು ಪ್ರದೇಶದಲ್ಲಿ ಇರುವ ಕಾರಣ ನಗರದ ಚರಂಡಿ ನೀರು ನಿಲ್ಲುತ್ತಿದೆ. ಹೀಗಾಗಿ ಎಲ್ಲೆಡೆ ಹೊಲಸು ವಾತಾವರಣ ಇದೆ. ಆದರೂ ನಗರಸಭೆಯವರು ಸ್ವಚ್ಛತೆಗಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ದೂರಿದರು.
ಸಮರ್ಪಕ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ನಲ್ಲಿಯ ಬಳಿ ಚರಂಡಿಯ ಹೊಲಸು ನೀರು ಹರಿಯುತ್ತಿದೆ. ಈ ಬಗ್ಗೆ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಗಮನ ನೀಡುತ್ತಿಲ್ಲ ಎಂದು ಓಣಿ ನಿವಾಸಿಗಳು ದೂರಿದರು. ಇಲ್ಲಿನ ವ್ಯವಸ್ಥೆಯನ್ನು ಶೀಘ್ರ ಬಗೆಹರಿಸಬೇಕು ಎಂದು ಸಿಕಂದರ ಪಾರಧಿ ಒತ್ತಾಯಿಸಿದರು.
ವಾರ್ಡ್ ಅಭಿವೃದ್ಧಿಗಾಗಿ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ₨20 ಲಕ್ಷ ಮಂಜೂರು ಮಾಡಲಾಗಿದೆ. ಈ ಹಣದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಮಲ್ಲಿಕಾರ್ಜುನ ಖೂಬಾ ಭರವಸೆ ನೀಡಿದರು.
ಕೈಕಾಡಿ ಮಹಾರಾಜ ಭವನ ಮತ್ತು ಪಾರಧಿ ಗಲ್ಲಿಯಲ್ಲಿ ಭವಾನಿ ಮಂದಿರ ನಿರ್ಮಾಣಕ್ಕೆ ₨50 ಸಾವಿರ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ತಹಶೀಲ್ದಾರ್ ಡಿ.ಎಂ.ಪಾಣಿ, ಮುಖಂಡರಾದ ಕೇಶಪ್ಪ ಬಿರಾದಾರ, ಶಬ್ಬೀರಪಾಶಾ ಮುಜಾವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.