ADVERTISEMENT

‘ಅಡೆತಡೆ ಇದ್ದರೂ ಸ್ಪರ್ಧೆ ಖಂಡಿತ’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 10:24 IST
Last Updated 21 ಮಾರ್ಚ್ 2014, 10:24 IST

ಬೀದರ್: ‘ನನಗೆ  ಹಣ ಬಲ ಇಲ್ಲ ತೋಳ್ಬಲ ಇಲ್ಲ, ರಾಜಕೀಯದ ಹಿನ್ನೆಲೆಯಿಲ್ಲ, ನಾನು ಆಮ್‌ ಅದ್ಮಿ. ಚುನಾವಣೆಗೆ ನಿಂತುಕೊಳ್ಳಬೇಕು ಎಂದು ಬಯಸಿದೆ. ಆದರೆ, ನಾನು ಕೆಲಸ ಮಾಡುತ್ತಿರುವ ಸಂಸ್ಥೆಯಿಂದಲೇ ಅಸಹಕಾರ ಪ್ರಾರಂಭವಾಗಿದೆ. ಚುನಾವಣೆಗೆ ನಿಲ್ಲಬಾರದು ಎಂದು ನೋಟಿಸ್ ನೀಡಿದ್ದಾರೆ’.

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಆಮ್‌ ಅದ್ಮಿ ಪಕ್ಷದ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಚಂದ್ರಕಾಂತ್‌ ಕುಲಕರ್ಣಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಅಳಲು ತೋಡಿಕೊಂಡರು.

ಆದರೆ ಚುನಾವಣೆಗೆ ನಿಲ್ಲುವುದು ಶತಸಿದ್ಧ. ಇದಕ್ಕಾಗಿ ಯಾವುದೇ ಅಡೆತಡೆ ಬಂದರೂ ಎದುರಿಸುತ್ತೇನೆ ಎಂದರು. ಆದರೆ ಕೆಲಸ ಮಾಡುವ ಸಂಸ್ಥೆಯಿಂದಲೇ ಬಂದಿರುವ ಸಂಸ್ಥೆ­ಯಿಂದಲೇ ಬಂದಿರುವ ಅಡೆತಡೆ ಎದುರಿಸುವ ಬಗೆ ಹೇಗೆ ಎಂಬ ಪ್ರಶ್ನೆಗೆ ಸ್ಪಷ್ಟ ನೀಡಲಿಲ್ಲ.
ಚುನಾವಣೆಗೆ ನಿಲ್ಲಬಾರದು ಎಂದು ನೋಟಿಸ್ ನೀಡಿದ್ದಾರೆ. ಆದರೆ, ಚುನಾವಣೆಗೆ ನಿಲ್ಲುವ ಅವಕಾಶ ಸಂವಿಧಾನದತ್ತವಾಗಿ ಎಲ್ಲರಿಗೂ ಇದೆ. ನಾನು ಪಕ್ಷದ ಕಾನೂನು ಸಲಹೆ ಪಡೆಯುತ್ತಿದ್ದೇನೆ. ಅದರಂತೆ ಮುಂದಿನ­ಕ್ರಮ ಕೈಗೊಳ್ಳಲಿದ್ದೇನೆ ಎಂದರು.

ಒಂದು ಹಂತದಲ್ಲಿ ರಾಜಿನಾಮೆ ನೀಡಿ ಹೊರಬರಲು ಚಿಂತಿಸುವುದಿಲ್ಲ ಎಂದರಾದರೂ, ಇನ್ನೊಂದು ಹಂತದಲ್ಲಿ ಕಾನೂನು ಸಲಹೆ ಪಡೆಯುತ್ತೇನೆ. ಬೇಕಿದ್ದರೆ ಅವರೇ ತೆಗೆಯಲಿ ಎಂಬ ಮಾತನ್ನೂ ಹೇಳಿದರು. ಕುಲಕರ್ಣಿ ಅವರು ಜೆಎಎನ್‌ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್ ಆಗಿದ್ದಾರೆ.

ಪ್ರಸ್ತುತ ಕ್ಷೇತ್ರದಲ್ಲಿ 1,600 ಮಂದಿ ಸದಸ್ಯರಿದ್ದಾರೆ. ಸಾಮಾನ್ಯರೂ ಚುನಾವಣೆಗೆ ನಿಲ್ಲಬಹುದು ಎಂಬುದನ್ನು ತೋರಿಸಬೇಕಾಗಿದೆ. ಸಮಾಜದಲ್ಲಿ ಇರುವ ಎಲ್ಲ ಸಾಮಾನ್ಯರ ಪ್ರತಿನಿಧಿಯಾಗಿದ್ದೇನೆ ಎಂದು ಹೇಳಿದರು.

ಎಂದು ನಾಮಪತ್ರ ಸಲ್ಲಿಸುತ್ತೀರಿ ಎಂಬ ಪ್ರಶ್ನೆಗೆ, ಅದಕ್ಕಾಗಿ ಸಿದ್ದತೆ ನಡೆದಿದೆ. ಬಹುತೇಕ 25ರಂದು ಸಲ್ಲಿಸಬಹುದು. 26ರಂದು ಕಡೆಯ ದಿನ. ಖಂಡಿತವಾಗಿ ಸಲ್ಲಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.