ADVERTISEMENT

112 ತುರ್ತು ಸ್ಪಂದನೆ: 12 ಸಾವಿರ ದಾಟಿದ ಕರೆಗಳು...

ಚಂದ್ರಕಾಂತ ಮಸಾನಿ
Published 12 ಜೂನ್ 2022, 21:00 IST
Last Updated 12 ಜೂನ್ 2022, 21:00 IST
ಬೀದರ್‌ನ ಪೊಲೀಸ್‌ ಮುಖ್ಯಾಲಯದ ಮೈದಾನದಲ್ಲಿ ಸಾಲುಗಟ್ಟಿ ನಿಂತ ಇಆರ್‌ಎಸ್‌ಎಸ್‌ ವಾಹನಗಳು/ ಚಿತ್ರ: ಗುರುಪಾದಪ್ಪ ಸಿರ್ಸಿ
ಬೀದರ್‌ನ ಪೊಲೀಸ್‌ ಮುಖ್ಯಾಲಯದ ಮೈದಾನದಲ್ಲಿ ಸಾಲುಗಟ್ಟಿ ನಿಂತ ಇಆರ್‌ಎಸ್‌ಎಸ್‌ ವಾಹನಗಳು/ ಚಿತ್ರ: ಗುರುಪಾದಪ್ಪ ಸಿರ್ಸಿ   

ಬೀದರ್‌: ಯುವತಿಯರನ್ನು ಚುಡಾಯಿಸುವುದು, ಮಹಿಳೆಯರಿಗೆ ಕಣ್ಣು ಹೊಡೆಯುವುದು, ಮೊಬೈಲ್‌, ಚಿನ್ನದ ಸರ ಲೂಟಿ, ಅಪಘಾತ, ದರೋಡೆ, ಅಪಹರಣ ಸೇರಿದಂತೆ ಸಾರ್ವಜನಿಕರು ರಕ್ಷಣೆ ಕೋರಿ ಇಆರ್‌ಎಸ್‌ಎಸ್‌ 112ಗೆ ಕರೆ ಮಾಡಿದ ಸರಾಸರಿ 20 ನಿಮಿಷಗಳಲ್ಲೇ ಸೇವೆ ಕೊಡುತ್ತಿರುವ ಕಾರಣ ಬೀದರ್ ಜಿಲ್ಲೆ ರಾಜ್ಯದ ಗಮನ ಸೆಳೆದಿದೆ.

ಇಆರ್‌ಎಸ್‌ಎಸ್‌ 112ಗೆ ಕರೆ ಮಾಡುವವರ ಸಂಖ್ಯೆ ಆರು ತಿಂಗಳ ಅವಧಿಯಲ್ಲಿ ದುಪ್ಪಟ್ಟಾಗಿದೆ. ಇಆರ್‌ಎಸ್‌ಎಸ್‌ ಬಂದ ನಂತರ ಅಪಘಾತದಲ್ಲಿ ಗಾಯಗೊಂಡವರಿಗೆ ತ್ವರಿತ ಸೇವೆ ಒದಗಿಸಲು ಸಾಧ್ಯವಾಗಿದೆ. ಮಹಿಳೆಯರಲ್ಲಿ ಇಆರ್‌ಎಸ್‌ಎಸ್‌ ಬಗ್ಗೆ ಹೆಚ್ಚು ವಿಶ್ವಾಸ ಮೂಡುತ್ತಿದೆ.

ಮೇ 7ರಂದು ಚಿಟಗುಪ್ಪ ತಾಲ್ಲೂಕಿನ ಹಳ್ಳಿಖೇಡವಾಡಿ ಸಮೀಪ ಅಪಘಾತ ಸಂಭವಿಸಿ ಪತಿ,ಪತ್ನಿ ಹಾಗೂ ಅವರ ಇಬ್ಬರು ಮಕ್ಕಳು ಗಾಯಗೊಂಡಿದ್ದರು. ಸಾರ್ವಜನಿಕರು 112ಗೆ ಕರೆ ಮಾಡಿದ 13 ನಿಮಿಷಗಳಲ್ಲೇ ಇಆರ್‌ಎಸ್‌ಎಸ್‌ ವಾಹನ ಸ್ಥಳಕ್ಕೆ ತಲುಪಿ ಎಲ್ಲರನ್ನೂ ಹುಮನಾಬಾದ್‌ ಆಸ್ಪತ್ರೆಗೆ ದಾಖಲಿಸಿ, ಚಿಟಗುಪ್ಪ ಠಾಣೆಗೆ ಮಾಹಿತಿ ಒದಗಿಸಿತ್ತು.

ADVERTISEMENT

ಮೇ 27ರಂದು ಹುಮನಾಬಾದ್‌ನ ಶಿವಪುರಗಲ್ಲಿಯಲ್ಲಿ ಎರಡು ಸಮುದಾಯದ ಜನರ ಮಧ್ಯೆ ಜಗಳ ಆರಂಭವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತದಲ್ಲಿದ್ದಾಗ ಇಆರ್‌ಎಸ್‌ಎಸ್‌ ವಾಹನ ಐದು ನಿಮಿಷಗಳಲ್ಲೇ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿತ್ತು. ಐದು ತಿಂಗಳ ಅವಧಿಯಲ್ಲಿ ಒಟ್ಟು 35 ಬಗೆಯ ಪ್ರಕರಣಗಳ 11,778 ಕರೆಗಳು ಬಂದಿದ್ದು, ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ.

ಸಾರ್ವಜನಿಕರು ಕರೆ ಮಾಡಿದ ಸರಾಸರಿ 20 ನಿಮಿಷಗಳಲ್ಲೇ ಇಆರ್‌ಎಸ್‌ಎಸ್‌ ವಾಹನ ಸ್ಥಳಕ್ಕೆ ತಲುಪುತ್ತಿದೆ. ಪೊಲೀಸ್‌ ಇಲಾಖೆ ಇಆರ್‌ಎಸ್‌ಎಸ್‌ ಸೇವೆ ಆರಂಭಿಸಿದ ಮೊದಲ ತಿಂಗಳಲ್ಲೇ 633 ಕರೆಗಳು ಬಂದಿದ್ದವು. ಈಗ ಅದು ಒಂದು ಸಾವಿರ ದಾಟಿದೆ. ಇಆರ್‌ಎಸ್‌ಎಸ್‌ 112 ಬಗ್ಗೆ ಜನರಲ್ಲಿ ನಿಧಾನವಾಗಿ ವಿಶ್ವಾಸ ಹೆಚ್ಚುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರ್‌ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆ ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಗಳಿಗೆ ಹೊಂದಿಕೊಂಡಿರುವ ಕಾರಣ ಗಡಿಗಳಲ್ಲೇ ನಾಲ್ಕು ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ಈ ವಾಹನಗಳು ಗಡಿಯಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಿರುವ ಕಾರಣ ಅಪರಾಧ ಸಂಖ್ಯೆಯಲ್ಲಿ ಸಹಜವಾಗಿ ಇಳಿಕೆ ಕಂಡು ಬರುತ್ತಿದೆ.

ಬೀದರ್‌ ಜಿಲ್ಲೆಗೆ 2021ರ ಜನವರಿ 26ರಂದು 17 ತುರ್ತು ಸ್ಪಂದನೆ ಸಹಾಯ ವಾಹನ (ಇಆರ್‌ಎಸ್‌ಎಸ್‌ 112)ಗಳು ಬಂದಿವೆ. ಇದರಲ್ಲಿ 12 ಹೊಸ ಹಾಗೂ ಐದು ಹಳೆಯ ವಾಹನಗಳು ಇವೆ. ಜಿಲ್ಲೆಯಲ್ಲಿ ಇಆರ್‌ಎಸ್‌ಎಸ್‌ 112ಗೆ ಜನವರಿಯಲ್ಲಿ 633, ಫೆಬ್ರುವರಿಯಲ್ಲಿ 688, ಮಾರ್ಚ್‌ನಲ್ಲಿ 852, ಏಪ್ರಿಲ್‌ನಲ್ಲಿ 878 ಹಾಗೂ ಮೇನಲ್ಲಿ 1,018 ಕರೆಗಳು ಸೇರಿ ಈವರೆಗೆ ಒಟ್ಟು 11,778 ಕರೆಗಳು ಬಂದಿವೆ. ಜೂನ್‌ ಎರಡನೇ ವಾರದಲ್ಲಿ ಕರೆಗಳ ಸಂಖ್ಯೆ 12 ಸಾವಿರ ದಾಟಿದೆ.

ಎಂತಹ ಪ್ರಕರಣಗಳು ಅಧಿಕ

ದಾಯಾದಿ ಕಲಹ, ಅಪಘಾತ, ಜೂಜಾಟ, ಧ್ವನಿವರ್ಧಕ ಬಳಕೆ, ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲು ಕರೆ ಮಾಡಿದವರೇ ಅಧಿಕ. ಎರಡು ಸಮುದಾಯಗಳ ಮಧ್ಯೆ ಕಲಹ ಆರಂಭವಾದಾಗ ಪರಿಸ್ಥಿತಿಯ ಗಂಭೀರತೆ ಅರಿತು ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಿದ್ದಾರೆ. ಇಆರ್‌ಎಸ್‌ಎಸ್‌ 20 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಕಾರಣ ಕೋಮು ಗಲಭೆ ತಡೆಯಲು ಸಾಧ್ಯವಾಗಿದೆ.

ಇಆರ್‌ಎಸ್‌ಎಸ್‌ 112 ಜಾಗೃತಿ

ಪೊಲೀಸ್‌ ಇಲಾಖೆಯು ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಜನರಿಗೆ ಇಆರ್‌ಎಸ್‌ಎಸ್‌ ಬಗ್ಗೆ ತಿಳಿವಳಿಕೆ ನೀಡುತ್ತಿದೆ. ಹೀಗಾಗಿ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಆಸ್ಪತ್ರೆಗೆ ಸಾಗಿಸಿ ತ್ವರಿತವಾಗಿ ಚಿಕಿತ್ಸೆ ಕೊಡಿಸಲು ಹಾಗೂ ಅನೇಕ ಜೀವಗಳನ್ನು ಉಳಿಸಲು ನೆರವಾಗಿದೆ.

ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಸಾಮಾನ್ಯ. ಅಪಘಾತವಾದಾಗ ಪೊಲೀಸ್‌ ಠಾಣೆ ನಂಬರ್‌ ಹುಡುಕುವುದರಲ್ಲಿ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಇದೀಗ ಯಾವ ಸಮಸ್ಯೆಯೂ ಇಲ್ಲ. ಯಾರು ಎಲ್ಲೇ ಇದ್ದರೂ ಕರೆ ಮಾಡಿ ತಿಳಿಸಬಹುದು. ಸಹಾಯವಾಣಿಯಲ್ಲಿ ಕುಳಿತ ಸಿಬ್ಬಂದಿ ಒಂದೆರಡು ನಿಮಿಷದಲ್ಲೇ ಸಂಬಂಧಪಟ್ಟವರನ್ನು ಸಂಪರ್ಕಿಸಿ ಮಾಹಿತಿ ರವಾನಿಸುತ್ತಾರೆ. ಇದೇ ವೇಳೆಗೆ ಇಆರ್‌ಎಸ್‌ಎಸ್‌ ವಾಹನವೂ ಸ್ಥಳಕ್ಕೆ ತಲುಪಿ ಸಹಾಯ ಒದಗಿಸುತ್ತದೆ.

ಮಾದಕ ವಸ್ತು ಕಳ್ಳಸಾಗಣೆ ಇನ್ನಿತರ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ತಾಂಡಾಗಳು ಸೇರಿ ಗಡಿ ಗ್ರಾಮಗಳಲ್ಲಿ ಇಆರ್‌ಎಸ್‌ಎಸ್‌ 112 ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತೆಲಂಗಾಣ ಹಾಗೂ ಮಹಾರಾಷ್ಟ್ರದ ಪೊಲೀಸ್‌ ಅಧಿಕಾರಿಗಳೊಂದಿಗೆ ಜೂನ್‌ 14ರಂದು ಸಭೆ ನಡೆಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ‍ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

ಬೀದಿ ಕಾಮಣ್ಣರನ್ನು ನಿಯಂತ್ರಿಸಲು ನೆರವಾದ ಸಹಾಯವಾಣಿ:

ಇಆರ್‌ಎಸ್‌ಎಸ್‌ 112 ಬೀದಿ ಕಾಮಣ್ಣರನ್ನು ನಿಯಂತ್ರಿಸಲು ಹೆಚ್ಚು ನೆರವಾಗುತ್ತಿದೆ. ಕಾಲೇಜು ವಿದ್ಯಾರ್ಥಿನಿಯರು ನೇರವಾಗಿ 112 ಕರೆ ಮಾಡುತ್ತಿರುವ ಕಾರಣ ಕಾಲೇಜು ಬಳಿ ಕಂಡು ಬರುತ್ತಿದ್ದ ಬೀದಿ ಕಾಮಣ್ಣರ ಹಾವಳಿ ಕಡಿಮೆಯಾಗಿದೆ.

ಅತ್ಯಾಚಾರದ3, ಅತ್ಯಾಚಾರಕ್ಕೆ ಯತ್ನದ 4, ಮಹಿಳೆಯರೊಂದಿಗೆ ಅಸಭ್ಯ ವರ್ತನೆಯ 29, ಕಣ್ಣು ಹೊಡೆದ 8, ಬ್ಲ್ಯಾಕ್‌ ಮೇಲ್‌ ಮಾಡಿದ 13, ಅಪಹರಣಕ್ಕೆ ಯತ್ನಿಸಿದ 4, ಅವಾಚ್ಯ ಶಬ್ದಗಳಿಂದ ನಿಂದಿಸಿದ 5 ಹಾಗೂ ಮನೆಯಲ್ಲಿ ವರದಕ್ಷಿಣೆಗಾಗಿ ಪೀಡಿಸಿದ್ದಕ್ಕೆ ಸಹಾಯ ಕೋರಿ 24 ಮಂದಿ ಮಹಿಳೆಯರು ಇಆರ್‌ಎಸ್‌ಎಸ್‌ಗೆ ಕರೆ ಮಾಡಿದ್ದಾರೆ.

ಮೊಬೈಲ್‌, ಚಿನ್ನದ ಸರ, ಹ್ಯಾಂಡ್‌ ಬ್ಯಾಗ್‌ ಕಿತ್ತು ಕೊಂಡು ಹೋದ ಸಂದರ್ಭದಲ್ಲಿ 30, ಕೌಟುಂಬಿಕ ಕಲಹದ 4,039, ನೆರೆಹೊರೆಯವರೊಂದಿಗೆ ಜಗಳ 843, ಸಾರ್ವಜನಿಕ ಸ್ಥಳದಲ್ಲಿ ಜಗಳ ಮಾಡುತ್ತಿದ್ದ ಸಂದರ್ಭದಲ್ಲಿ ಸಹಾಯ ಕೋರಿ 1,447 ಕರೆಗಳು ಬಂದಿವೆ.

ಇಆರ್‌ಎಸ್‌ಎಸ್‌ ಕಾರ್ಯನಿರ್ವಹಣೆ ಹೇಗೆ?

ಅಪಘಾತ, ದರೋಡೆ, ಲೂಟಿಯಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಸಾರ್ವಜನಿಕರು ನೇರವಾಗಿ 112 ಸಂಖ್ಯೆಗೆ ಕರೆ ಮಾಡಬೇಕು. ತುರ್ತು ಇದ್ದರೆ ಮತ್ತೆ ಫೋನ್‌ನಲ್ಲಿ 8 ಅಂಕಿಯ ಬಟನ್‌ ಒತ್ತಬೇಕು.

ಕರೆ ಸ್ವೀಕರಿಸುವ ಕೇಂದ್ರದ ಸಿಬ್ಬಂದಿ ಅಗತ್ಯ ವಿವರಗಳನ್ನು ಪಡೆದು ಫೋನ್‌ ಮಾಡಿದವರ ಸ್ಥಳಕ್ಕೆ ತಕ್ಷಣ ವಾಹನ ಕಳಿಸುವ ವ್ಯವಸ್ಥೆ ಮಾಡುತ್ತಾರೆ.

ಇಆರ್‌ಎಸ್‌ಎಸ್‌ನ ಎಲ್ಲ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಇದೆ. ನಿಯಂತ್ರಣ ಕೊಠಡಿ ಸಿಬ್ಬಂದಿ ಕರೆಯನ್ನು ಸ್ವೀಕರಿಸಿದ ಸ್ಥಳಕ್ಕೆ ಹತ್ತಿರದಲ್ಲಿರುವ ತುರ್ತು ಸೇವಾ ವಾಹನಕ್ಕೆ ಸಂದೇಶವನ್ನು ರವಾನಿಸಿ ಘಟನಾ ಸ್ಥಳಕ್ಕೆ ಕಳುಹಿಸುತ್ತಾರೆ. ವಾಹನ ಬರುತ್ತಿರುವ ಮಾಹಿತಿಯನ್ನು ದೂರವಾಣಿ ಮಾಡಿದವರಿಗೆ ಎಸ್‍ಎಂಎಸ್ ಮೂಲಕ ಕಳಿಸುತ್ತಾರೆ.

ಪ್ರತಿ ವಾಹನದಲ್ಲಿ ಒಬ್ಬರು ಅಧಿಕಾರಿ ಮತ್ತು ಸಿಬ್ಬಂದಿ ಇರುತ್ತಾರೆ. ಯಾವುದೇ ರೀತಿಯ ಅಪರಾಧ ಕೃತ್ಯ ನಡೆದರೂ ಸಾರ್ವಜನಿಕರು ಇನ್ನು ಮುಂದೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಇ-ಮೇಲ್, 112 ಪೋರ್ಟಲ್ ಮತ್ತು ಪ್ಯಾನಿಕ್ ಆಪ್ ಮೂಲಕ ತುರ್ತು ವಿನಂತಿ ಮಾಡಲಾಗುತ್ತದೆ. ರಾಜ್ಯ ತುರ್ತು ಪ್ರತಿಕ್ರಿಯೆ ಕೇಂದ್ರ ದಿನದ 24 ಗಂಟೆಯೂ (24×7) ಸೇವೆ ಒದಗಿಸುತ್ತಿದೆ. ಎಲ್ಲ ವಾಹನಗಳಿಗೂ ಜಿಪಿಎಸ್‌ ಅಳವಡಿಸಿರುವ ಕಾರಣ ವಾಹನ ನಿಂತಿರುವ, ಚಲಿಸುತ್ತಿರುವ ಮಾಹಿತಿ ದೊರಕುತ್ತದೆ. ಕರ್ತವ್ಯ ನಿರತ ಸಿಬ್ಬಂದಿ ವಿಳಂಬ ಮಾಡಿದರೂ ಗೊತ್ತಾಗುತ್ತದೆ.

ವಿನಂತಿದಾರರ ಸ್ವಯಂಚಾಲಿತ ಸ್ಥಳ ಗುರುತಿಸುವಿಕೆ, ಪೊಲೀಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ಸೇವೆಗಳಿಂದ ತ್ವರಿತ ಸಹಾಯ ಮಾಡುವ ಹತ್ತಿರದ ತುರ್ತು ಸ್ಪಂದನ ವಾಹನಗಳ ಮೂಲಕ ವೇಗವಾಗಿ ಸಂಪರ್ಕಿಸುವ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.