ಹುಮನಾಬಾದ್ ಪಟ್ಟಣದಲ್ಲಿ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 11ನೇ ಜಿಲ್ಲಾ ಸಮ್ಮೇಳನದಲ್ಲಿ ಕೆ.ನೀಲಾ ಮಾತನಾಡಿದರು
ಹುಮನಾಬಾದ್: ‘ನೊಂದ ಮಹಿಳೆರ ಧ್ವನಿಯಾಗಿ ಜನವಾದಿ ಮಹಿಳಾ ಸಂಘಟನೆ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 11ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಕಳೆದ 36 ವರ್ಷಗಳಿಂದ ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಕೇಲಸ ಮಾಡುತ್ತಿದೆ. 1981ರಲ್ಲಿ ಸ್ಥಾಪನೆಯಾದ ಈ ಸಂಘಟನೆಯು ದೇಶಾದ್ಯಂತ ಸುಮಾರು 1 ಕೋಟಿ 20 ಲಕ್ಷಕ್ಕೂ ಹೆಚ್ಚು ಮಹಿಳಾ ಸದಸ್ಯರನ್ನು ಹೊಂದಿದ ಅತಿ ದೊಡ್ಡ ಮಹಿಳಾ ಸಂಘಟನೆಯಾಗಿ ಹೊರಹೊಮ್ಮಿದೆ’ ಎಂದರು.
‘ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಎಲ್ಲ ಬಗೆಯ ಶೋಷಣೆಗಳು ನಡೆಯುತ್ತಿರುವುದು ಖಂಡನೀಯವಾಗಿದೆ. ಕೋಮು ಸಾಮರಸ್ಯ, ಜನಾಂಗೀಯ ನಿಂದನೆ, ಧಾರ್ಮಿಕ ಅಸಹನೆ ಹುಟ್ಟು ಹಾಕಲಾಗುತ್ತಿದೆ. ಇದರಿಂದಾಗಿ ಎಲ್ಲ ಧರ್ಮಗಳ ಮಹಿಳೆಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಜನಾಂಗೀಯ ದ್ವೇಷ ಹರಡದಂತೆ ನೋಡಿಕೊಳ್ಳಬೇಕಾಗಿದೆ’ ಎಂದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ‘ವಿಶ್ವದಲ್ಲಿನ ಮಹಿಳೆಯರೆಲ್ಲ ಒಂದೇ. ದುಡಿಯುವ ಮಂದಿ ಎಲ್ಲವೂ ಒಂದೇ. ನಮ್ಮ ಮೇಲಿನ ಅತ್ಯಾಚಾರ, ಹಿಂಸೆ, ದೌರ್ಜನ್ಯ ತಡೆಯಬೇಕಾದರೆ, ನಾವೆಲ್ಲ ಸಂಘಟಿತರಾಗಬೇಕು. ಜನವಾದಿ ಸಂಘಟನೆಯ ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರತಿ ಗ್ರಾಮ, ಪಟ್ಟಣ, ತಾಲ್ಲೂಕುಗಳಲ್ಲಿ ಜನವಾದಿ ಸಂಘಟನೆ ಕಟ್ಟಬೇಕಿದೆ’ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ ಗಡ್ಡೆ, ಹುಮನಾಬಾದ್ ಪುರಸಭೆ ಸಮುದಾಯದ ಸಂಘಟನಾಧಿಕಾರಿ ಮೀನಾಕುಮಾರಿ ಬೋರಾಳಕರ್, ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ರೇಷ್ಮಾ ಹಂಸರಾಜ, ಸಿ.ಐ.ಟಿ.ಯು. ಜಿಲ್ಲಾ ಸಂಚಾಲಕಿ ಶ್ರೀದೇವಿ ಚಿವುಡೆ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ರೇಖಾ ಹಮೀಲಪೂರಕರ್, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ಮೆಂಡೋಳೆ, ಶೀಲಾ ರಡ್ಡಿ, ಸುನೀತಾ ಭೋಲಾ, ಮಹೇಶ್ವರಿ ಪೋಚಂಪಳ್ಳಿ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.