ADVERTISEMENT

ನಿಗದಿತ ಸಮಯದಲ್ಲಿ 1.20 ಲಕ್ಷ ಸದಸ್ಯತ್ವ: ಶಾಸಕ ಪ್ರಭು ಚವಾಣ್ ವಿಶ್ವಾಸ 

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:22 IST
Last Updated 9 ಸೆಪ್ಟೆಂಬರ್ 2024, 15:22 IST
ಔರಾದ್ ಪಟ್ಟಣದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ ಅವರು ಶಾಸಕ ಪ್ರಭು ಚವಾಣ್ ಅವರಿಗೆ ಸದಸ್ಯತ್ವ ಪ್ರಮಾಣಪತ್ರ ನೀಡಿದರು
ಔರಾದ್ ಪಟ್ಟಣದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ ಅವರು ಶಾಸಕ ಪ್ರಭು ಚವಾಣ್ ಅವರಿಗೆ ಸದಸ್ಯತ್ವ ಪ್ರಮಾಣಪತ್ರ ನೀಡಿದರು   

ಔರಾದ್: ಬಿಜೆಪಿ ಪಕ್ಷ ನಮಗೆ ನೀಡಿದ 1.20 ಲಕ್ಷ ಸದಸ್ಯರ ನೋಂದಣಿ ನಿಗದಿತ ಅವಧಿಯಲ್ಲಿ ಕಾರ್ಯಕರ್ತರು ಮಾಡಿ ತೋರಿಸಲಿದ್ದಾರೆ ಎಂದು ಶಾಸಕ ಪ್ರಭು ಚವಾಣ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಔರಾದ್ ಮಂಡಲದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ಬಾರಿ ನಾವು 86 ಸಾವಿರ ಸದಸ್ಯರ ನೋಂದಣಿ ಮಾಡಿದ್ದೇವೆ. ಈ ಬಾರಿ ನಮ್ಮ ಗುರಿ ಜಾಸ್ತಿಯಾಗಿದ್ದು, ಇಂದಿನಿಂದಲೇ ಚುರುಕಿನಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಪಕ್ಷದ ಸದಸ್ಯತ್ವ ಪಡೆದವರಿಗೆ ಮಾತ್ರ ಸೂಕ್ತ ಸ್ಥಾನಮಾನ ಮತ್ತು ಪ್ರಾತಿನಿಧ್ಯ ಸಿಗುತ್ತದೆ. ಇದನ್ನು ಎಲ್ಲರಿಗೂ ತಿಳಿಸಬೇಕು. ಪ್ರತಿ ಬೂತ್‌ನಿಂದ ಗರಿಷ್ಠ ಮಟ್ಟದಲ್ಲಿ ಸದಸ್ಯರನ್ನು ನೋಂದಣಿಯಾಗಬೇಕು. ಪ್ರತಿ ಗ್ರಾಮ, ತಾಂಡಾ, ವಾಡಿ ಹೀಗೆ ಕ್ಷೇತ್ರದ ಯಾವೊಂದು ಪ್ರದೇಶವು ಸದಸ್ಯತ್ವ ಅಭಿಯಾನದಿಂದ ಹೊರಗೆ ಉಳಿಯಬಾರದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಈ ಬಾರಿ ಆನ್‌ಲೈನ್ ಮುಖಾಂತರ ಸದಸ್ಯತ್ವ ನೋಂದಣಿ ಮಾಡಲಾಗುತ್ತಿದ್ದು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹುರುಪಿನಿಂದ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಪ್ರತಿ ಬೂತ್‌ನಿಂದ ಕನಿಷ್ಠ 400 ಸದಸ್ಯರಾದರು ಸೇರ್ಪಡೆಯಾಗಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಗುಂಡಪ್ಪ ಬಿರಾದಾರ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸರುಬಾಯಿ ಘುಳೆ, ಉಪಾಧ್ಯಕ್ಷೆ ರಾಧಾಬಾಯಿ ನರೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಖಂಡೋಬಾ ಕಂಗಟೆ, ವಿಜಯಲಕ್ಷ್ಮಿ, ಶಿವರಾಜ ಅಲ್ಮಾಜೆ, ಅಶೋಕ ಅಲ್ಮಾಜೆ, ಬಸವರಾಜ ಹಳ್ಳೆ, ಸಂತೋಷ ಪೋಕಲವಾರ, ಸುಜಿತ್‌ ರಾಠೋಡ ಇದ್ದರು.

ಸಭೆ ನಂತರ ಶಾಸಕರು ಪಕ್ಷದ ಮುಖಂಡರೊಂದಿಗೆ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಪಕ್ಷದ ಅಭಿಮಾನಿಗಳಿಗೆ ಸದಸ್ಯತ್ವ ನೀಡಿದರು.

‘ಕಾಂಗ್ರೆಸ್ ಸರ್ಕಾರ ಶೀಘ್ರ ಪತನ’

ಔರಾದ್: ಮುಡಾ ಸೇರಿದಂತೆ ವಿವಿಧ ಹಗರಣಗಳಲ್ಲಿ ಸಿಲುಕೊಂಡ ಕಾಂಗ್ರೆಸ್ ಸರ್ಕಾರ ಬಹು ದಿನ ಉಳಿಯುವುದಿಲ್ಲ ಎಂದು ಶಾಸಕ ಪ್ರಭು ಚವಾಣ್ ಹೇಳಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲೇ ಅನೇಕರು ಆ ಹುದ್ದೆ ಪಡೆಯಲು ಕಸರುತ್ತು ನಡೆಸುತ್ತಿದ್ದಾರೆ. ನೀವು ನೋಡುತ್ತಾ ಇರಿ. ಈ ಸರ್ಕಾರ ಆದಷ್ಟು ಬೇಗ ಅಧಿಕಾರದಿಂದ ಕೆಳಗೆ ಇಳಿಯಲಿದೆ. ಒಂದೂವರೆ ವರ್ಷದಲ್ಲಿ ಇವರ ಭ್ರಷ್ಟಾಚಾರಕ್ಕೆ ಲೆಕ್ಕವೇ ಇಲ್ಲವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತವರು ಎಸಿಎಸ್ಟಿ ಬಡ ಜನರಿಗೆ ಸಿಗಬೇಕಾದ ಸರ್ಕಾರಿ ಜಮೀನು ಪಡೆದಿದ್ದು ಯಾವ ನ್ಯಾಯ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.