ADVERTISEMENT

ಕುಷ್ಠ ರೋಗ: ಜಿಲ್ಲೆಯಲ್ಲಿ 17 ಪ್ರಕರಣ ಪತ್ತೆ

ನವೆಂಬರ್ 25ರಿಂದ ಡಿಸೆಂಬರ್ 10 ರವರೆಗೆ ನಡೆದ ಆಂದೋಲನ

ಬಿ.ಜಿ.ಪ್ರವೀಣಕುಮಾರ
Published 29 ಡಿಸೆಂಬರ್ 2019, 10:24 IST
Last Updated 29 ಡಿಸೆಂಬರ್ 2019, 10:24 IST
ಕುಷ್ಠರೋಗ ಪತ್ತೆ ಆಂದೋಲನದಚಿತ್ರ
ಕುಷ್ಠರೋಗ ಪತ್ತೆ ಆಂದೋಲನದಚಿತ್ರ   

ಯಾದಗಿರಿ: ಜಿಲ್ಲೆಯಾದ್ಯಂತ ಕುಷ್ಠರೋಗ ಪತ್ತೆ ಹಚ್ಚುವ ಹಾಗೂ ಚಿಕಿತ್ಸೆ ಆಂದೋಲನವು ನವೆಂಬರ್ 25 ರಿಂದ ಡಿಸೆಂಬರ್ 10ರ ವರೆಗೆ ನಡೆದಿದ್ದು, 17 ಪ್ರಕರಣಗಳು ಪತ್ತೆಯಾಗಿವೆ.

ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನ (ಎಲ್‌ಸಿಡಿಸಿ)ದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂ ಸೇವಕರು ಮನೆ–ಮನೆಗೆ ಭೇಟಿ ನೀಡಿ 1,903 ಸಂಶಯಾಸ್ಪದ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಯಾದಗಿರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 8 ಪ್ರಕರಣಗಳು ಪತ್ತೆಯಾಗಿವೆ. ಶಹಾಪುರದಲ್ಲಿ ಅತಿ ಕಡಿಮೆ ಪ್ರಕರಣಗಳು ಕಂಡುಬಂದಿವೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 201 ಕುಷ್ಠ ರೋಗಿಗಳು ಪತ್ತೆಯಾಗಿದ್ದಾರೆ.

ಕುಷ್ಠರೋಗವು ಮೈಕೊಬ್ಯಾಕ್ಟೀರಿಯಂ ಲೆಪ್ರೆ ಎನ್ನುವ ರೋಗಾಣುವಿನಿಂದ ಬರುತ್ತದೆ.ಮೈಕೊಬ್ಯಾಕ್ಟೀರಿಯಂ ಲೆಪ್ರೆ ರೋಗಾಣು ಹರಡಿದ ವ್ಯಕ್ತಿಯು ಪ್ರಾರಂಭಿಕ ಹಂತ (ಪಿಬಿ-ಪಾಸಿಬೆಸಿಲ್ಲರಿ ಹಂತ)ದಲ್ಲಿ ಚಿಕಿತ್ಸೆ ಪಡೆಯದಿದ್ದರೆ 18 ತಿಂಗಳ ನಂತರ ಅದು ಕುಷ್ಠರೋಗ (ಎಂಬಿ-ಮಲ್ಟಿಬೆಸಿಲ್ಲರಿ)ವಾಗಿ ಪರಿವರ್ತನೆಗೊಳ್ಳುತ್ತದೆ. ನಂತರ ವ್ಯಕ್ತಿಯಲ್ಲಿ 15 ದಿನದಿಂದ 1 ತಿಂಗಳಲ್ಲಿ ಅಂಗವಿಕಲತೆ ಉಂಟಾಗಬಹುದು.ಜಿಲ್ಲೆಯಲ್ಲಿ 43 ಜನ ಕುಷ್ಠರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. 27 ಜನ ಗುಣ ಹೊಂದಿದ್ದಾರೆ ಎಂದುಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಭಗವಂತ ಅನವಾರ ಹೇಳುತ್ತಾರೆ.

ADVERTISEMENT

ರೋಗ ಲಕ್ಷಣಗಳು: ದೇಹದ ಯಾವುದೇ ಭಾಗದ ಮೇಲೆ ತಿಳಿ ಬಿಳಿ ಅಥವಾ ತಾಮ್ರಬಣ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಉಂಟಾಗುವುದು, ಕೈ ಕಾಲುಗಳಲ್ಲಿ ಜೋಮು ಉಂಟಾಗುವುದು ಕುಷ್ಠ ರೋಗದ ಪ್ರಾರಂಭಿಕ ಹಂತದ ಲಕ್ಷಣಗಳಾಗಿವೆ. ವ್ಯಕ್ತಿಯ ಚರ್ಮದ ಬಣ್ಣ ಬದಲಾಗುವುದು, ದಪ್ಪವಾಗುವುದು, ಮಿಂಚುವುದು, ಎಣ್ಣೆ ಚರ್ಮ, ಗಂಟುಗಳಾಗುವುದು, ಕಣ್ಣುಗಳನ್ನು ಮುಚ್ಚಲು ಸಾಧ್ಯವಾಗದಿರುವುದು, ಕೈಯಲ್ಲಿ ಹುಣ್ಣು, ಪಾದ ಮತ್ತು ಕೈಬೆರಳುಗಳು ಮಡಚಿರುವುದು, ಕೈಗಳಲ್ಲಿ ಮತ್ತು ಪಾದಗಳಲ್ಲಿ ಸಂವೇದನೆಯ ನಷ್ಟ ಕುಷ್ಠರೋಗದ ಲಕ್ಷಣಗಳಾಗಿವೆ.

ಉಚಿತ ಚಿಕಿತ್ಸೆ: ಕುಷ್ಠರೋಗವನ್ನು ಬಹುವಿಧ ಔಷಧಿ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ದೊರೆಯುತ್ತದೆ. ಚಿಕಿತ್ಸೆಯ ಅವಧಿ 6 ರಿಂದ 12 ತಿಂಗಳು ಇದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ.

ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ.ಚಿಕಿತ್ಸೆ ಪಡೆಯದಿದ್ದರೆ ನರಗಳ ಉರಿಯೂತ ಆರಂಭವಾಗುತ್ತದೆ. ಕೈ ಬೆರಳು, ಕಾಲುಗಳು ಮುರುಟುಗೊಳ್ಳುತ್ತವೆ. ಇದು ಶಾಶ್ವತ ಅಂಗವೈಕಲ್ಯಕ್ಕೆ ದಾರಿ ಮಾಡಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.