ADVERTISEMENT

18 ಗೋವು ರಕ್ಷಣೆ; ಒಬ್ಬ ಆರೋಪಿ ವಶಕ್ಕೆ

ಜಾನುವಾರು ಅಕ್ರಮ ಸಾಗಣೆ ತಡೆದ ಬಸವಕಲ್ಯಾಣ ಶಾಸಕ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 19:36 IST
Last Updated 11 ಆಗಸ್ಟ್ 2023, 19:36 IST
ಗೋವುಗಳನ್ನು ರಕ್ಷಿಸಿದ ನಂತರ ಅವುಗಳಿಗೆ ಮೇವು ನೀಡಿದ ಶಾಸಕ ಶರಣು ಸಲಗರ
ಗೋವುಗಳನ್ನು ರಕ್ಷಿಸಿದ ನಂತರ ಅವುಗಳಿಗೆ ಮೇವು ನೀಡಿದ ಶಾಸಕ ಶರಣು ಸಲಗರ   

ಬಸವಕಲ್ಯಾಣ/ಬೀದರ್‌: ಬಸವಕಲ್ಯಾಣ ತಾಲ್ಲೂಕಿನ ಬೆಟಬಾಲ್ಕುಂದಾ ಹತ್ತಿರ ಶುಕ್ರವಾರ ಅನುಮಾನಾಸ್ಪದ ರೀತಿಯಲ್ಲಿ ವಾಹನಗಳಲ್ಲಿ ಸಾಗಿಸುತ್ತಿದ್ದ 18 ಗೋವುಗಳನ್ನು ಬಿಜೆಪಿ ಶಾಸಕ ಶರಣು ಸಲಗರ ಅವರು ತಡೆದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

‘ದನ, ಕರು, ಕೋಣ ಸೇರಿದಂತೆ ಒಟ್ಟು 18 ಗೋವುಗಳು ಹಾಗೂ ಒಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ವರು ಸ್ಥಳದಿಂದ ಓಡಿ ಹೋಗಿದ್ದಾರೆ. ಎರಡು ವಾಹನಗಳಲ್ಲಿ ಮಹಾರಾಷ್ಟ್ರದಿಂದ ಹೈದರಾಬಾದ್‌ಗೆ ಗೋವುಗಳನ್ನು ಸಾಗಿಸಲಾಗುತ್ತಿತ್ತು ಎನ್ನುವುದು ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಗೋವುಗಳನ್ನು ಸಾಗಿಸುತ್ತಿರುವ ವಿಷಯ ತಿಳಿದ ಶಾಸಕರು ತಕ್ಷಣ ಸ್ಥಳಕ್ಕೆ ಹೋಗಿ ವಾಹನಗಳನ್ನು ತಡೆದು ಗೋವುಗಳನ್ನು ಕೆಳಗೆ ಇಳಿಸಿದರು. ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯವರಿಗೆ ಮಾಹಿತಿ ನೀಡಿದರು. ನಂತರ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರವೀಂದ್ರ ನಾರಾಯಣಪುರ, ಸಿಪಿಐ ಅಲಿಸಾಬ್ ಸ್ಥಳಕ್ಕೆ ಬಂದು ಗೋವು ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದರು.

ADVERTISEMENT

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಸಲಗರ, ‘ಗೋವುಗಳನ್ನು ಹತ್ಯೆ ಮಾಡುವುದಕ್ಕಾಗಿಯೇ ತೆಗೆದುಕೊಂಡು ಹೋಗಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಇದೆಲ್ಲ ಸಾಮಾನ್ಯ. ಯಾರಾದರೂ ಫೋನ್ ಮಾಡಿ ಗೋವುಗಳನ್ನು ಹಾಗೂ ಆರೋಪಿಗಳನ್ನು ಬಿಡಲು ಒತ್ತಡ ಹೇರಿದರೂ ಅಧಿಕಾರಿಗಳು ಬಿಡಬಾರದು’ ಎಂದರು.

‘ಗೋವು ಸಾಗಿಸುವವರ ಬಳಿ ಯಾವುದೇ ಅನುಮತಿ ಪತ್ರ, ಇತರೆ ದಾಖಲೆಗಳು ಇರಲಿಲ್ಲ. ಅನುಮಾನಾಸ್ಪದವಾಗಿ ಜಾನುವಾರು ಸಾಗಿಸುತ್ತಿರುವುದು ಕಂಡು ಬಂದದ್ದರಿಂದ 18 ಗೋವುಗಳನ್ನು ವಶಪಡಿಸಿಕೊಂಡು, ಹುಲಸೂರ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿದೆ. ಸಮೀಪದ ಸೋನಾಳ ಗೋಶಾಲೆಗೆ ಸಾಗಿಸಲಾಗುತ್ತದೆ’ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರವೀಂದ್ರ ನಾರಾಯಣಪುರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.