ADVERTISEMENT

ಕಲ್ಯಾಣ ಕರ್ನಾಟಕ: 4 ವರ್ಷಗಳಲ್ಲಿ 600 ತಾಯಂದಿರು, 8,998 ಶಿಶುಗಳ ಸಾವು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 12 ಡಿಸೆಂಬರ್ 2024, 5:36 IST
Last Updated 12 ಡಿಸೆಂಬರ್ 2024, 5:36 IST
   

ಬೀದರ್‌: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 600 ತಾಯಂದಿರು ಹಾಗೂ 8,998 ಶಿಶುಗಳು ಮರಣ ಹೊಂದಿವೆ. ಮರಣ ಪ್ರಮಾಣ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಇದ್ದರೆ, ನೂತನ ವಿಜಯನಗರ ಜಿಲ್ಲೆಯಲ್ಲಿ ಇದರ ಪ್ರಮಾಣ ಕಡಿಮೆ ಇದೆ.

ಕಳೆದ ನಾಲ್ಕು ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯೊಂದರಲ್ಲೇ 180 ತಾಯಂದಿರು, 1,878 ಶಿಶುಗಳು ಸಾವನ್ನಪ್ಪಿವೆ. ನಂತರದ ಸ್ಥಾನದಲ್ಲಿ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಿವೆ. ರಾಯಚೂರು ಜಿಲ್ಲೆಯಲ್ಲಿ 121 ಜನ ತಾಯಂದಿರು, 1,887 ಶಿಶುಗಳು ಮರಣ ಹೊಂದಿವೆ. ಬಳ್ಳಾರಿ ಜಿಲ್ಲೆಯಲ್ಲಿ 82 ತಾಯಂದಿರು, 1,292 ಶಿಶುಗಳು ಕೊನೆಯುಸಿರೆಳೆದಿವೆ.

ಸಾವಿಗೇನು ಕಾರಣ?:

ರಾಜ್ಯದಲ್ಲಿ ಸರಿಸುಮಾರು ಮೂರು ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 40ರಿಂದ 50 ಸಾವಿರ ಗರ್ಭಿಣಿಯರು ರಕ್ತಹೀನತೆ ಸಮಸ್ಯೆ ಎದುರಿಸುತ್ತಿದ್ದಾರೆ. ವರ್ಷಕ್ಕೆ ಸುಮಾರು ಒಂದೂವರೆ ಲಕ್ಷ ಹೆರಿಗೆಗಳು ‘ಹೈರಿಸ್ಕ್‌’ನಲ್ಲಿ ಆಗುತ್ತಿವೆ. ಬಾಲ್ಯವಿವಾಹ, ರಕ್ತಹೀನತೆ, ಅಪೌಷ್ಟಿಕತೆ ಇದಕೆಲ್ಲ ಮುಖ್ಯ ಕಾರಣ.

ADVERTISEMENT

‘ಮಕ್ಕಳು ಅಪೌಷ್ಟಿಕತೆ, ತಾಯಂದಿರು ರಕ್ತಹೀನತೆ ಸಮಸ್ಯೆ ಗಂಭೀರವಾದದ್ದು. ಆರೋಗ್ಯ ಇಲಾಖೆ ಇದರ ಕಡೆಗೆ ಹೆಚ್ಚು ಒತ್ತು ಕೊಡಬೇಕು. ಮನೆ ಭೇಟಿಯ ಕಾರ್ಯಕ್ರಮದ ಉದ್ದೇಶವೇ ಇದು. ಅಪೌಷ್ಟಿಕತೆ, ರಕ್ತಹೀನತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಅವರಿಗೆ ಔಷಧೋಪಚಾರ ಮಾಡುವುದು ಮತ್ತು ಅದರ ಮೇಲುಸ್ತುವಾರಿ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಭೆ ನಡೆಸಿ, ಸೂಚಿಸಲಾಗಿದೆ. ಸರ್ಕಾರದ ಗಮನಕ್ಕೂ ಈ ವಿಷಯ ತರಲಾಗಿದೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್‌ ಕೋಸಂಬೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸುರಕ್ಷಿತ ಹೆರಿಗೆಗಳಾದಲ್ಲಿ ಬಾಣಂತಿಯರು, ಮಕ್ಕಳ ಸಾವು ನಿಯಂತ್ರಿಸಲು ಸಾಧ್ಯವಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆಧುನಿಕ ಯಂತ್ರೋಪಕರಣಗಳು, ವೈದ್ಯಕೀಯ ಸಲಕರಣೆಗಳು, ಔಷಧಗಳ ವ್ಯವಸ್ಥೆ ಇದೆ. ವೈದ್ಯರ ಕೊರತೆಯೂ ಬಹುತೇಕ ನೀಗಿದೆ. ಹೀಗಿದ್ದರೂ ಉತ್ತಮ ಸೇವೆ ಕಲ್ಪಿಸಲು ಏಕೆ ಸಾಧ್ಯವಾಗುತ್ತಿಲ್ಲ. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರು ಎಲ್ಲೋ ಒಂದು ಕಡೆ ಎಡವುತ್ತಿರುವುದು ಕಂಡು ಬರುತ್ತಿದೆ. ಸಂಬಂಧಿಸಿದವರು ಅವಲೋಕನ ಮಾಡಿಕೊಂಡು ತಾಯಿ, ಶಿಶು ಮರಣ, ನವಜಾತ ಶಿಶು ಮರಣ ಪ್ರಮಾಣ ತಗ್ಗಿಸಲು ಮುಂದಾಗಬೇಕು’ ಎಂದಿದ್ದಾರೆ.

ದೇಶದ ಮಾನವ ಅಭಿವೃದ್ಧಿ ಸೂಚ್ಯಂಕದ ಒಟ್ಟು 17 ಅಂಶಗಳಲ್ಲಿ 9 ಕಾರ್ಯಕ್ರಮಗಳು ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿವೆ. ಆರೋಗ್ಯಕ್ಕೆ ಪ್ರಥಮ ಆದ್ಯತೆ ಸಿಗಬೇಕು. ಅದರಲ್ಲೂ ತಾಯಿ, ನವಜಾತ ಶಿಶುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕಿದೆ. ಆದರೆ, ಮರಣ ಪ್ರಮಾಣ ನೋಡಿದರೆ ಅನುಷ್ಠಾನದಲ್ಲಿ ಕೊರತೆ ಇರುವುದು ಎದ್ದು ಕಾಣುತ್ತದೆ.

ಎಲ್ಲ ಹಂತದ ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಂದಿರು ಮಕ್ಕಳಿಗೆ ಸಕಾಲಕ್ಕೆ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸಿದರೆ ಪ್ರಮಾಣ ಪ್ರಮಾಣ ತಗ್ಗಿಸಬಹುದು
ಶಶಿಧರ್‌ ಕೋಸಂಬೆ ಸದಸ್ಯ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಅಭಿವೃದ್ಧಿಯಲ್ಲಿ ಹಿಂದೆ ಮರಣದಲ್ಲಿ ಮುಂದೆ

ರಾಜ್ಯದ ಅಭಿವೃದ್ಧಿಯ ನೀಲ ನಕ್ಷೆಯಲ್ಲೂ ಕಲ್ಯಾಣ ಕರ್ನಾಟಕ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬಹಳ ಹಿಂದುಳಿದಿದೆ. ಆರ್ಥಿಕ ವರಮಾನ ತಲಾ ಆದಾಯವೂ ಕಡಿಮೆ ಇದೆ. ಆದರೆ ತಾಯಂದಿರು ಶಿಶು ಮರಣ ಪ್ರಮಾಣದಲ್ಲಿ ಮುಂದಿದೆ. ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 33715 ಶಿಶುಗಳು 2079 ತಾಯಂದಿರು ಮರಣ ಹೊಂದಿದ್ದಾರೆ. ಕಲ್ಯಾಣ ಕರ್ನಾಟಕವೊಂದರಲ್ಲೇ 8998 ಶಿಶುಗಳು 600 ಜನ ತಾಯಂದಿರು ಸಾವನ್ನಪ್ಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.