ADVERTISEMENT

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಕಚೇರಿ ಶೀಘ್ರ: ಆಮ್ ಆದ್ಮಿ ಪಾರ್ಟಿ

ಪಂಚಾಯತ್‌ ರಾಜ್‌ ಸಂಸ್ಥೆಗಳಿಗೂ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 12:28 IST
Last Updated 28 ಜುಲೈ 2022, 12:28 IST
‘ಮುಖ್ಯಮಂತ್ರಿ‘ ಚಂದ್ರು
‘ಮುಖ್ಯಮಂತ್ರಿ‘ ಚಂದ್ರು   

ಬೀದರ್: ವಿಧಾನಸಭೆ, ವಿಧಾನ ಪರಿಷತ್‌ ಹಾಗೂ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೂ ಸ್ಪರ್ಧಿಸಲು ನಿರ್ಧರಿಸಿರುವ ಆಮ್ ಆದ್ಮಿ ಪಕ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶೀಘ್ರ ಪಕ್ಷದ ಕಚೇರಿ ತೆರೆಯಲಿದೆ ಎಂದು ಪಕ್ಷದ ರಾಜ್ಯ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ‘ಮುಖ್ಯಮಂತ್ರಿ‘ ಚಂದ್ರು ಹೇಳಿದರು.

ಇಲ್ಲಿಯ ಬರೀದ್‌ಶಾಹಿ ಹೊಟೇಲ್ ಸಭಾಂಗಣದಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಸುಮಾರು 130 ಕ್ಷೇತ್ರದಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನ ರೋಸಿ ಹೋಗಿದ್ದಾರೆ. ಬಿಜೆಪಿಯ ಕೆಲವರು ಸಚಿವರು ಕೋವಿಡ್‌ ಸಂದರ್ಭದಲ್ಲಿ ವ್ಯಾಪಕ ಭ್ರಷ್ಟಾಚಾರ ಮಾಡಿದರು. ರಾಜ್ಯದ ಜನ ಮೂರು ಪಕ್ಷಗಳ ಆಡಳಿತವನ್ನು ಹತ್ತಿರದಿಂದ ನೋಡಿದ್ದಾರೆ. ಇನ್ನು ಮತದಾರರು ಹೊಸ ಪಕ್ಷಕ್ಕೆ ಅವಕಾಶ ಕೊಡುವುದು ನಿಶ್ಚಿತ ಎಂದರು.

ADVERTISEMENT

ಎರಡು ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದೆ. ಈಗಾಗಲೇ ದೆಹಲಿಯಲ್ಲಿ ಉಚಿತ ಆರೋಗ್ಯ, ಶಿಕ್ಷಣ, ವಿದ್ಯುತ್, ರಸ್ತೆ, ನೀರು ಮತ್ತು ಮಹಿಳಾ ಸಬಲೀಕರಣ ಸೇವೆ ನೀಡಲಾಗಿದೆ. ಜನ ಸೇವೆಯನ್ನು ವೀಕ್ಷಿಸಿ ಅಲ್ಲಿಯ ಜನ ಆಮ್‌ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಜಲ ನೀತಿ, ಶಿಕ್ಷಣ ನೀತಿ ಮತ್ತು ಉದ್ಯೋಗ ನೀತಿಗೆ ಒತ್ತು ಕೊಡಲಿದೆ. ಅಪರಾಧ ರಹಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಜನರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬದಲಾಗಿ ಆಮ್ ಆದ್ಮಿ ಪಕ್ಷಕ್ಕೆ ಮತದಾನ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಜೆಸಿಬಿ (ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ) ಪಕ್ಷಗಳು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿ ರಾಜಕೀಯವನ್ನು ಕಲುಷಿತಗೊಳಿಸಿವೆ. ನಮ್ಮ ಪೊರಕೆ ಮೂಲಕ ಅದನ್ನು ಸ್ವಚ್ಛಗೊಳಿಸಲಾಗುವುದು ಎಂದು ಹೇಳಿದರು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯ್ ಶರ್ಮಾ ಮಾತನಾಡಿ, ಅನಗತ್ಯ ಖರ್ಚಿಲ್ಲದೆ ಶಾಸಕನಾಗುವುದು ಆಮ್ ಆದ್ಮಿ ಪಕ್ಷದಲ್ಲಿ ಮಾತ್ರ. ದೆಹಲಿಯಲ್ಲಿ ಅಭಿವೃದ್ಧಿಗೆ ಜನ ಆಶೀರ್ವಾದ ಮಾಡಿದ್ದಾರೆ. ಅಸ್ಸಾಂ, ಪಂಜಾಬ್, ಹರಿಯಾಣ, ಗುಜರಾತ್ ಗಳಲ್ಲಿ ಈಗಾಗಲೇ ಆಮ್ ಆದ್ಮಿ ಪಕ್ಷ ತನ್ನ ಖಾತೆ ತೆರೆದಿದೆ. ರಾಜ್ಯದಲ್ಲಿ ಅಧಿಕಾರ ಹಿಡಿದು ಸ್ವಚ್ಛ ಮತ್ತು ಪರಿಶುದ್ಧ ಆಡಳಿತ ನೀಡುವ ಗುರಿ ಹೊಂದಿದೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಮಾಲಗಾರ ಹಾಗೂ ನಗರ ಘಟಕದ ಅಧ್ಯಕ್ಷ ಸಿದ್ಧು ಫುಲಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.