ADVERTISEMENT

ಬೀದರ: ಪಠ್ಯದಲ್ಲಿ ಬಿ. ನಾರಾಯಣರಾವ್ ಚರಿತ್ರೆ ಅಳವಡಿಸಿ

ಜಮಾಅತೆ ಇಸ್ಲಾಮಿ ಹಿಂದ್ ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 12:05 IST
Last Updated 25 ಸೆಪ್ಟೆಂಬರ್ 2020, 12:05 IST
ಬಿ. ನಾರಾಯಣರಾವ್‌
ಬಿ. ನಾರಾಯಣರಾವ್‌   

ಬೀದರ್: ಕೊರೊನಾದಿಂದ ನಿಧನರಾದ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಅವರ ಜೀವನ ಚರಿತ್ರೆಯನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ಒತ್ತಾಯಿಸಿದೆ.

ಬಡವರು, ಶೋಷಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ ನಾರಾಯಣರಾವ್ ನಾಲ್ಕು ದಶಕಗಳ ಕಾಲ ನಿರಂತರ ಹೋರಾಟ ನಡೆಸಿದ್ದರು. ಹೋರಾಟದ ಮೂಲಕವೇ ರಾಜ್ಯದಲ್ಲಿ ಮೊದಲ ಬಾರಿಗೆ ತಾಲ್ಲೂಕು ಮಟ್ಟದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ವಸತಿ ನಿಲಯ ಆರಂಭಿಸಲು ಕಾರಣವಾದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು ಹೇಳಿದೆ.

ನಾರಾಯಣರಾವ್ ಅವರು ವಿದ್ಯಾರ್ಥಿ ದೆಸೆಯಲ್ಲೇ ಹೋರಾಟಕ್ಕೆ ಧುಮುಕಿದ್ದರು. ಅದರ ಮೂಲಕವೇ ನಾಯಕರಾಗಿ ರೂಪುಗೊಂಡರು. ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು ಎಂದು ತಿಳಿಸಿದೆ.

ADVERTISEMENT

ಸಾಮಾಜಿಕ ಕಳಕಳಿ ಹೊಂದಿದ್ದ ನಾರಾಯಣರಾವ್ ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ಕೋಮು ಸಾಮರಸ್ಯ ಕಾಪಾಡಲು ನಿರಂತರ ಶ್ರಮಿಸುತ್ತಿದ್ದರು. ಸರ್ವ ಧರ್ಮಗಳ ಬಗ್ಗೆಯೂ ಅಪಾರ ಗೌರವ ಹೊಂದಿದ್ದರು. ಪ್ರೀತಿ, ವಿಶ್ವಾಸ, ಸಹೋದರತ್ವದ ವಾತಾವರಣ ಸೃಷ್ಟಿಸುವಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿದ್ದರು ಎಂದು ಸ್ಮರಿಸಿದೆ.

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನಡೆಸುತ್ತಿದ್ದ ಸಾಮಾಜಿಕ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುತ್ತಿದ್ದರು. ಸಂಘಟನೆಯ ಕಾರ್ಯಕ್ರಮಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದರು. ಅವರೊಬ್ಬರ ಜಾತ್ಯತೀತ ನಾಯಕ, ಅಜಾತ ಶತ್ರು ಆಗಿದ್ದರು ಎಂದು ಹೇಳಿದೆ.

ನಾರಾಯಣರಾವ್ ಅವರು ದೇಹ ತ್ಯಜಿಸಿದ್ದರೂ ಜನರ ಹೃದಯದಲ್ಲಿ ಈಗಲೂ ನೆಲೆ ನಿಂತಿದ್ದಾರೆ. ರಾಜ್ಯ ಮುಖಂಡ ಮಹ್ಮಮದ್ ಆಸಿಫೊದ್ದೀನ್, ಬೀದರ್ ಘಟಕದ ಅಧ್ಯಕ್ಷ ಮಹಮ್ಮದ್ ನಿಜಾಮೊದ್ದೀನ್, ಮಾಧ್ಯಮ ಉಸ್ತುವಾರಿ ಮಹಮ್ಮದ್ ನಜಿಬೊದ್ದೀನ್ ಹಾಗೂ ಮಹಮ್ಮದ್ ಅಕ್ರಂ ಅಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.