ADVERTISEMENT

ಬೀದರ್‌: ಸೆಳೆಯುತಿದೆ ಮಹಿಳೆಯರ ‘ಅಕ್ಕ ಕೆಫೆ’

ಎನ್‌ಆರ್‌ಎಲ್‌ಎಮ್‌: ಬಗದಲ್‌, ಅಷ್ಟೂರ್‌ ಮಹಿಳೆಯರಿಗೆ ಜವಾಬ್ದಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ಆಗಸ್ಟ್ 2025, 5:50 IST
Last Updated 14 ಆಗಸ್ಟ್ 2025, 5:50 IST
ಬೀದರ್‌ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ‘ಅಕ್ಕ ಕೆಫೆ’
ಬೀದರ್‌ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ‘ಅಕ್ಕ ಕೆಫೆ’   

ಬೀದರ್‌: ಮಹಿಳೆಯರ ಜೀವನೋಪಾಯ ಸುಧಾರಣೆಗೆ ‘ನ್ಯಾಷನಲ್‌ ರೂರಲ್‌ ಲೈವ್ಲಿಹುಡ್‌ ಮಿಶನ್‌’ (ಎನ್‌ಆರ್‌ಎಲ್‌ಎಮ್‌) ಯೋಜನೆಯಡಿ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ‘ಅಕ್ಕ ಕೆಫೆ’ ನಿರ್ಮಿಸಲಾಗಿದೆ.

ಸ್ವಸಹಾಯ ಸಂಘದ ಮಹಿಳೆಯರೇ ಇದರ ಸಂಪೂರ್ಣ ಹೊಣೆ ಹೊತ್ತು ನಡೆಸಿಕೊಂಡು ಹೋಗುವರು. ಬೀದರ್‌ ತಾಲ್ಲೂಕಿನ ಬಗದಲ್‌ ಹಾಗೂ ಅಷ್ಟೂರ್‌ ಗ್ರಾಮದ ಸ್ವಸಹಾಯ ಸಂಘದ ಮಹಿಳೆಯರಿಗೆ ಇದರ ಜವಾಬ್ದಾರಿ ವಹಿಸಲು ನಿರ್ಧರಿಸಲಾಗಿದೆ.

ಕೆಫೆ ಆರಂಭಿಸಲು ₹10 ಲಕ್ಷ ಅನುದಾನ ನೀಡಲಾಗಿದೆ. ಈಗಾಗಲೇ ಕೆಫೆಗೆ ಮೂರ್ತ ರೂಪ ಕೊಟ್ಟಿದ್ದು, ಎಲ್ಲರನ್ನೂ ಆಕರ್ಷಿಸುವ ರೀತಿಯಲ್ಲಿ ಸುಣ್ಣ ಬಣ್ಣ ಬಳಿದು, ಚಿತ್ರಗಳನ್ನು ಇಳಿಸಲಾಗಿದೆ. ಸಾಂಪ್ರದಾಯಿಕ ಕಟ್ಟಡದ ಮಾದರಿಯಲ್ಲಿ ವಿನ್ಯಾಸಗೊಳಿಸಿರುವುದು ವಿಶೇಷ.

ADVERTISEMENT

ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಚೇರಿ ಕೆಲಸದ ನಿಮಿತ್ತ ಬಂದು ಹೋಗುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಫೆ ಆರಂಭಿಸಲಾಗುತ್ತಿದೆ.

ಸ್ಥಳೀಯವಾಗಿ ಸಿಗುವ ಎಲ್ಲ ರೀತಿಯ ಉಪಾಹಾರ, ಊಟ ಪೂರೈಸಲು ತೀರ್ಮಾನಿಸಲಾಗಿದೆ. ಅಡುಗೆ ತಯಾರಿಸುವುದು, ಬಡಿಸುವುದು, ಸ್ವಚ್ಛತೆ ಸೇರಿದಂತೆ ಎಲ್ಲ ಕಾರ್ಯವನ್ನು ಸ್ವಸಹಾಯ ಸಂಘದ ಮಹಿಳೆಯರೇ ಮಾಡುವರು.

‘ಗ್ರಾಮೀಣ ಭಾಗದ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಅಕ್ಕ ಕೆಫೆ ಆರಂಭಿಸಲಾಗುತ್ತಿದೆ. ಅದರಲ್ಲೂ ಸ್ವಸಹಾಯ ಸಂಘ ಕಟ್ಟಿಕೊಂಡು ಕೆಲಸ ಮಾಡುತ್ತಿರುವವರಿಗೆ ಇದರ ಜವಾಬ್ದಾರಿ ವಹಿಸಲು ತೀರ್ಮಾನಿಸಲಾಗಿದೆ. ಅಕ್ಕ ಕೆಫೆ ಸರ್ಕಾರದಿಂದ ನಿರ್ಮಿಸಿ, ಸ್ವಸಹಾಯ ಸಂಘದವರಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸ್ವಸಹಾಯ ಸಂಘದ ಮಹಿಳೆಯರು ಇದರ ಜವಾಬ್ದಾರಿ ವಹಿಸಿಕೊಂಡು ಸಂಪೂರ್ಣ ಅವರೇ ನಿರ್ವಹಣೆ ಮಾಡುತ್ತಾರೆ. ಇದರಿಂದ ಬರುವ ಆದಾಯವನ್ನು ಅವರೇ ಪಡೆಯುತ್ತಾರೆ. ಕೆಫೆ ಮೂಲಕ ಉದ್ಯೋಗವೂ ಲಭಿಸುತ್ತದೆ. ಮಹಿಳೆಯರ ಸಬಲೀಕರಣವೂ ಆಗುತ್ತದೆ. ಈ ತಿಂಗಳೊಳಗೆ ಬೀದರ್‌ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ‘ಅಕ್ಕ ಕೆಫೆ’ ಉದ್ಘಾಟಿಸಿ ಚಾಲನೆ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

‘ಆದಾಯವೊಂದೇ ಮುಖ್ಯವಾಗಿರುವುದಿಲ್ಲ. ಜನರಿಗೆ ಅತ್ಯುತ್ತಮ ಆಹಾರ ಸೇವೆ ಒದಗಿಸಿ, ಅದರಿಂದ ಲಾಭ ಗಳಿಸಿ, ಸ್ವಸಹಾಯ ಸಂಘದ ಮಹಿಳೆಯರು ಸದೃಢರಾಗಬೇಕೆನ್ನುವ ಉದ್ದೇಶ ಇದರ ಹಿಂದಿದೆ’ ಎಂದು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಬೀದರ್‌ ಹಾಗೂ ಹುಮನಾಬಾದ್‌ನಲ್ಲಿ ‘ಅಕ್ಕ ಕೆಫೆ’ ಆರಂಭಿಸಲಾಗುವುದು. ಆನಂತರ ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಪ್ರಾರಂಭಿಸಲಾಗುವುದು.
–ಡಾ. ಗಿರೀಶ್‌ ಬದೋಲೆ, ಸಿಇಒ ಜಿಪಂ ಬೀದರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.