ADVERTISEMENT

ಗಣೇಶ ಉತ್ಸವಕ್ಕೆ ಸಿದ್ಧತೆ ಜೋರು

ಹಬ್ಬಕ್ಕೂ ಮುನ್ನವೇ ಎಲ್ಲೆಡೆ ಸಡಗರ, ಸಂಭ್ರಮದ ವಾತಾವರಣ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 16:20 IST
Last Updated 5 ಸೆಪ್ಟೆಂಬರ್ 2024, 16:20 IST
ಸಾರ್ವಜನಿಕರು ಬೀದರ್‌ನ ಮಾರುಕಟ್ಟೆಯಲ್ಲಿ ಬಗೆಬಗೆಯ ಗಣಪನ ಮೂರ್ತಿಗಳನ್ನು ಖರೀದಿಸಿ ಗುರುವಾರ ಮನೆಗೆ ಕೊಂಡೊಯ್ದರು
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಸಾರ್ವಜನಿಕರು ಬೀದರ್‌ನ ಮಾರುಕಟ್ಟೆಯಲ್ಲಿ ಬಗೆಬಗೆಯ ಗಣಪನ ಮೂರ್ತಿಗಳನ್ನು ಖರೀದಿಸಿ ಗುರುವಾರ ಮನೆಗೆ ಕೊಂಡೊಯ್ದರು –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ   

ಬೀದರ್‌: ಗಣೇಶ ಚತುರ್ಥಿಗೆ ಇನ್ನೊಂದೆ ದಿನ ಬಾಕಿ ಉಳಿದಿದ್ದು, ಅದಕ್ಕೂ ಮುನ್ನವೇ ಎಲ್ಲೆಡೆ ಸಡಗರ, ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.

ಗಣೇಶ ಚತುರ್ಥಿಯನ್ನು ವೈಯಕ್ತಿಕವಾಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವ ವಿಶಿಷ್ಟ ಹಬ್ಬ. ಪ್ರತಿಯೊಬ್ಬರೂ ಅವರ ಮನೆಗಳಲ್ಲಿ ಬೆನಕನ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ತಮಗಿಷ್ಟವಾದ ಮಣ್ಣಿನ ಗಣೇಶನ ಮೂರ್ತಿಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುವ ದೃಶ್ಯ ಗುರುವಾರ ಮಾರುಕಟ್ಟೆಯಲ್ಲಿ ಕಂಡು ಬಂತು. ಇದರೊಂದಿಗೆ ಹೂ, ಹಣ್ಣು, ಅಲಂಕಾರಿಕ ವಸ್ತುಗಳ ಖರೀದಿಯೂ ಜೋರಾಗಿತ್ತು.

ಇನ್ನು, ಆಯಾ ಗಣೇಶ ಮಂಡಳಿಯವರು ಕಳೆದ ಒಂದು ತಿಂಗಳಿಂದ ತಮ್ಮ ತಮ್ಮ ಬಡಾವಣೆಗಳಲ್ಲಿ ಬೃಹತ್‌ ಪೆಂಡಾಲ್‌ಗಳನ್ನು ಹಾಕುತ್ತಿದ್ದಾರೆ. ರಸ್ತೆಯುದ್ದಕ್ಕೂ ವಿದ್ಯುತ್‌ ದೀಪಗಳನ್ನು ಅಳವಡಿಸುತ್ತಿದ್ದಾರೆ. ಈಗಾಗಲೇ ತಮಗಿಷ್ಟವಾದ ಎತ್ತರ ಹಾಗೂ ಆಕಾರದ ಗಣೇಶನ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿ ಸಿದ್ಧಮಾಡಿಟ್ಟುಕೊಂಡಿದ್ದಾರೆ. ಕೆಲವು ಮಂಡಳಿಯವರು ಈಗಾಗಲೇ ಗಣೇಶನ ಮೂರ್ತಿ ತೆಗೆದುಕೊಂಡು ಬಂದಿದ್ದಾರೆ. ಇನ್ನು, ಕೆಲವರು ಶನಿವಾರ (ಸೆ.7) ಬೆಳಿಗ್ಗೆ ಮೆರವಣಿಗೆಯಲ್ಲಿ ತರುವವರಿದ್ದಾರೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ವರುಣನ ಆರ್ಭಟ ಹೆಚ್ಚಾಗಿದ್ದು, ಇದರಿಂದಲೂ ಸಿದ್ಧತೆಗೆ ಸ್ವಲ್ಪ ಹಿನ್ನಡೆ ಉಂಟಾಗಿದೆ. ಆದರೆ, ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಒಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಡಗರದಿಂದ ಗಣೇಶ ಉತ್ಸವ ಆಚರಿಸಲು ಗಣೇಶ ಮಹಾಮಂಡಳಿಯವರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕೊನೆಯ ಹಂತದ ಕೆಲಸ ನಡೆಯುತ್ತಿದೆ.

ADVERTISEMENT
ಬೆನಕನ ಪ್ರತಿಷ್ಠಾಪನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಿದ ಮಹಿಳೆಯರು

ಗಣೇಶ ಪ್ರತಿಷ್ಠಾಪನೆ; ಎಚ್ಚರಿಕೆಗೆ ಸೂಚನೆ

ಗಣೇಶೋತ್ಸವ ಸಂದರ್ಭದಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಮಾರ್ಗಸೂಚಿಯನ್ನು ಜೆಸ್ಕಾಂ ಗುರುವಾರ ಬಿಡುಗಡೆಗೊಳಿಸಿದೆ.

* ಅನಧಿಕೃತವಾಗಿ ವಿದ್ಯುತ್ ಲೈನ್‌ಗಳಿಗೆ ಮನೆಗಳಿಂದ ಹುಕ್ ಹಾಕಿ ವಿದ್ಯುತ್ ಸಂಪರ್ಕ ಪಡೆಯಬಾರದು. ಸಂಬಂಧಪಟ್ಟ ಜೆಸ್ಕಾಂ ವಿಭಾಗೀಯ ಅಥವಾ ಶಾಖಾ ಕಚೇರಿಗೆ ತೆರಳಿ ಅನುಮತಿ ಪಡೆಯಬೇಕು.

* ಸೀರಿಯಲ್‌ ಲೈಟ್‌ ದೀಪಗಳನ್ನು ಹಾಕುವಾಗ ವಿದ್ಯುತ್‌ ಕಂಬದಿಂದ ಸಂಪರ್ಕ ಪಡೆಯಬಾರದು.

* ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಸುತ್ತಮುತ್ತ ಯಾವುದೇ ವಿದ್ಯುತ್ ಮಾರ್ಗಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

* ವಿದ್ಯುತ್ ಲೈನ್‌ ಕೆಳಗೆ ಅಥವಾ ಅಕ್ಕಪಕ್ಕದಲ್ಲಿ ಗಣಪತಿ ಪೆಂಡಾಲ್ ಹಾಕಬಾರದು. * ಸುರಕ್ಷತೆಯ ಅಂತರವನ್ನು ಕಾಯ್ದುಕೊಂಡು ಪೆಂಡಾಲ್ ಹಾಕಬೇಕು.

* ವಿದ್ಯುತ್ ಕಂಬಗಳು ವಿದ್ಯುತ್ ಪರಿವರ್ತಕ ಕೇಂದ್ರಗಳಿಗೆ ಚಪ್ಪರ ಶಾಮಿಯಾನಗಳು ಬ್ಯಾನರ್ ಮತ್ತು ಫಲಕಗಳನ್ನು ಕಟ್ಟಬಾರದು.

* ವಿದ್ಯುತ್ ತಂತಿಗಳಿಗೆ ತಾಗುವ ರೀತಿಯಲ್ಲಿ ಅತಿ ಎತ್ತರದ ಧ್ವಜ ಕಟ್ಟಬಾರದು.

* ಗಣೇಶನ ವಿಗ್ರಹಗಳ ವಿಸರ್ಜನಾ ಮೆರವಣೆಗೆ ನಡೆಯುವ ಬೀದಿಗಳಲ್ಲಿ ವಿದ್ಯುತ್ ಲೈನ್‌ಗಳ ಅಡಚಣೆ ಇದ್ದಲ್ಲಿ ಸಂಬಂಧಿಸಿದ ಜೆಸ್ಕಾಂ ಕಚೇರಿಯ ಗಮನಕ್ಕೆ ತರಬೇಕು.

* ಮಳೆಗಾಲ ಇರುವುದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಹೆಚ್ಚಿನ ಜಾಗ್ರತೆ ವಹಿಸಬೇಕು. ಒಂದು ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಏನಾದರೂ ಅವಘಡಗಳು ಸಂಭವಿಸಿದರೆ ಅದಕ್ಕೆ ಜೆಸ್ಕಾಂ ಜವಾಬ್ದಾರಿಯಲ್ಲ. ಎಲ್ಲ ಗಣೇಶ ಮಂಡಳಿಗಳು ಸೂಕ್ತ ಸುರಕ್ಷತಾ ಕ್ರಮ ಅನುಸರಿಸಿ ಗಣೇಶ ಹಬ್ಬ ಆಚರಿಸಬೇಕೆಂದು ಜೆಸ್ಕಾಂ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.