ADVERTISEMENT

ಅನುಭಾವದಿಂದ ಹಿರಿಯರಾಗಿದ್ದ ಅಲ್ಲಮ: ಡಾ.ರಣಧೀರ

ಲಿಗಾಡೆ ಪ್ರತಿಷ್ಠಾನದ ಉಪನ್ಯಾಸ ಮಾಲೆಯಲ್ಲಿ ಡಾ.ರಣಧೀರ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 4:59 IST
Last Updated 5 ಏಪ್ರಿಲ್ 2022, 4:59 IST
ಬಸವಕಲ್ಯಾಣದ ಪಂಚಾಯತ್‌ ರಾಜ್ ಕಾಲೇಜಿನಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಸೋಮವಾರ ನಡೆದ 59 ನೇ ಉಪನ್ಯಾಸಮಾಲೆಯ ಉದ್ಘಾಟನೆಯಲ್ಲಿ ಡಾ.ರಣಧೀರ ಭರಮಾಣೆ, ರಾಜಕುಮಾರ ಶಿರಗಾಪುರ ಪಾಲ್ಗೊಂಡಿದ್ದರು
ಬಸವಕಲ್ಯಾಣದ ಪಂಚಾಯತ್‌ ರಾಜ್ ಕಾಲೇಜಿನಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಸೋಮವಾರ ನಡೆದ 59 ನೇ ಉಪನ್ಯಾಸಮಾಲೆಯ ಉದ್ಘಾಟನೆಯಲ್ಲಿ ಡಾ.ರಣಧೀರ ಭರಮಾಣೆ, ರಾಜಕುಮಾರ ಶಿರಗಾಪುರ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಬೆಳಕಿನಿಂದ ಕತ್ತಲೆಡೆಯೆಗೆ ಹೋಗಬೇಕೆಂದಾತನು ಅಲ್ಲಮನು. ಅಂಧಕಾರ, ದಾರಿದ್ರ್ಯ, ಮೂಢನಂಬಿಕೆಯಂಥ ಕತ್ತಲೆ ಕಳೆಯಲು ಅದು ಇದ್ದಲ್ಲಿಗೆ ಸಾಗಬೇಕು ಎನ್ನುವುದೇ ಇದರರ್ಥ’ ಎಂದು ದಾವಣಗೆರೆಯ ಉಪನ್ಯಾಸಕ ಡಾ.ರಣಧೀರ ಭರಮಾಣೆ ಹೇಳಿದ್ದಾರೆ.

ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ನಗರದ ಪಂಚಾಯತ್ ರಾಜ್ ಕಾಲೇಜಿನಲ್ಲಿ ಸೋಮವಾರ ನಡೆದ ‘ಅಲ್ಲಮ ಲೋಕದ ವಿಭಿನ್ನ ನೆಲೆಗಳು’ 59 ನೇ ಉಪನ್ಯಾಸಮಾಲೆಯಲ್ಲಿ ಅವರು ಮಾತನಾಡಿದರು.

‘ಅಲ್ಲಮರು ಬರೀ ವಯಸ್ಸಿನಿಂದ ಅಲ್ಲ; ಅನುಭಾವದಿಂದ ಹಿರಿಯರಾಗಿದ್ದರು. ಶ್ರೇಷ್ಠ ತತ್ವಜ್ಞಾನಿ, ದಾರ್ಶನಿಕ, ಅವರನ್ನು ಬಿಟ್ಟು ವಚನ ಚಳವಳಿ ಊಹಿಸಲು ಸಾಧ್ಯವಿಲ್ಲ. ಸಂಸಾರವೆಂಬ ಹೆಣಬಿದ್ದರೆ ಕಿತ್ತಾಡುತ್ತಾರೆ ಎಂಬ ಅವರ ವಚನವು ಜೀವನದಲ್ಲಿ ಕಾಮ, ಕ್ರೋಧ ಮುಂತಾದ ಅರಿಷಟ್ವರ್ಗಗಳು ಕಾಡುತ್ತವೆ ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ’ ಎಂದರು.

ADVERTISEMENT

ಉಪನ್ಯಾಸಕ ರೇವಣಸಿದ್ದಪ್ಪ ದೊರೆ ಮಾತನಾಡಿ,‘ಬಸವಪೂರ್ವ ಯುಗದಲ್ಲಿನ ಕನ್ನಡ ಯಾರಿಗೂ ತಿಳಿಯುತ್ತಿರಲಿಲ್ಲ. ಆದ್ದರಿಂದ ಅಲ್ಲಮರು ಅದನ್ನು ಶುದ್ಧೀಕರಿಸಿ ನೀಡಿದರು. ಅವರು ಮಹಾಕವಿ, ಯೋಗಿ, ವಚನಕಾರ, ತತ್ವಜ್ಞಾನಿ ಆಗಿದ್ದರು. ಎಲ್ಲ ಸಾಹಿತ್ಯಗಳ ತಲಸ್ಪರ್ಶಿ ಅಧ್ಯಯನ ಅವರದ್ದಾಗಿತ್ತು. ಸಮಾಜವನ್ನು ಅಂತಃಕರಣದಿಂದ ನೋಡಿ ಜಾಗೃತಿ ಮೂಡಿಸುವುದಕ್ಕೆ ಅವರು ಪ್ರಯತ್ನಿಸಿದರು. ನಾವೆಲ್ಲ ಅವರ ನೆಲದಲ್ಲಿ ನಲೆದಾಡುತ್ತಿದ್ದೇವೆ ಎಂಬುದೇ ಹೆಮ್ಮೆಯ ಸಂಗತಿ’ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಕುಮಾರ ಶಿರಗಾಪುರ ಮಾತನಾಡಿ, ‘ಶರಣರ, ಸಂತರ ಸಂದೇಶದ ಪಾಲನೆ ಮಾಡಬೇಕು. ಆಡಂಬರ ಬಿಟ್ಟು ಸರಳವಾಗಿ ಜೀವನ ಸಾಗಿಸಬೇಕು’ ಎಂದರು.

ಡಾ.ಭೀಮಾಶಂಕರ ಬಿರಾದಾರ ಮಾತನಾಡಿ,‘ಅಲ್ಲಮರು ವಿಶ್ವಶ್ರೇಷ್ಠ ಚಿಂತಕರು. ಜಲಾಲುದ್ದೀನ್ ರೂಮಿ ಅವರಂತೆ ಶ್ರೇಷ್ಠ ವಿಚಾರಧಾರೆ ಜಗತ್ತಿಗೆ ನೀಡಿದ್ದಾರೆ. ಅವರ ಸಾಹಿತ್ಯದ ಅಧ್ಯಯನ ಆಗಬೇಕಾಗಿದೆ’ ಎಂದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಬರಗಾಲೆ ಮಾತನಾಡಿ,‘ಬಸವಾದಿ ಶರಣರ ವಚನ ಸಾಹಿತ್ಯದ ಅಧ್ಯಯನ, ಸಂಶೋಧನೆ, ಚಿಂತನೆ ನಡೆಯಬೇಕಾಗಿದೆ’ ಎಂದರು.

ಶ್ರೀಶೈಲ್ ಹುಡೇದ್, ಸಿದ್ಧಾರ್ಥ ಬಾವಿದೊಡ್ಡಿ, ಪ್ರಕಾಶ ಚಿಂಚನಸೂರೆ, ನಾಗಪ್ಪ ನಿಣ್ಣೆ, ನಾಗೇಂದ್ರಪ್ಪ ಪಾಟೀಲ, ರಂಜೀತ್ ಹಾಗೂ ಶಿವಕುಮಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.