
ಬೀದರ್: ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಏರ್ಪಡಿಸಿದ್ದ 69ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬಾಬಾ ಸಾಹೇಬರಿಗೆ ಗೌರವ ಸಮರ್ಪಿಸಿದರು.
ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಸಾಮಾಜಿಕ ನ್ಯಾಯ, ಸಮಾನತೆ ಸ್ಥಾಪನೆಗೆ ಜೀವನವಿಡೀ ಹೋರಾಡಿದವರು ಡಾ. ಅಂಬೇಡ್ಕರ್. ಸಮಾಜದ ಪರಿವರ್ತನೆ, ಅನಿಷ್ಠ ಪದ್ಧತಿಗಳ ನಿರ್ಮೂಲನೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಹೋರಾಡಿ, ಪ್ರಜಾಸತ್ತಾತ್ಮಕ ಭಾರತ ನಿರ್ಮಾಣ ಮಾಡಿದ್ದಾರೆ ಎಂದರು.
ಅಂಬೇಡ್ಕರ್ ಅವರು ಇಂದು ಭೌತಿಕವಾಗಿ ನಮ್ಮ ಮಧ್ಯೆ ಇಲ್ಲದಿದ್ದರೂ ಅವರ ಆದರ್ಶ ಮತ್ತು ಚಿಂತನೆಗಳು ಯಾವಾಗಲೂ ನಮ್ಮ ನಡುವೆ ಜೀವಂತವಾಗಿವೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಲಿಖಿತ ಸಂವಿಧಾನವನ್ನು ಅಂಬೇಡ್ಕರ್ ಅವರು ನಮಗೆ ಕೊಟ್ಟಿದ್ದಾರೆ. ಸ್ವಾತಂತ್ರ‍್ಯ ಸಿಕ್ಕಿ, ಸಂವಿಧಾನ ಅಳವಡಿಸಿಕೊಂಡು 75 ವರ್ಷಗಳಾಗಿವೆ. ಈ 75 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ವೈಜ್ಞಾನಿಕ ಪ್ರಗತಿ ಕಂಡಿದ್ದೇವೆ ಎಂದು ಹೇಳಿದರು.
ನಮ್ಮ ಸಂವಿಧಾನದಿಂದ ಪ್ರತಿಯೊಬ್ಬ ಪ್ರಜೆಗೂ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ವಾತಂತ್ರ‍್ಯ, ಮೂಲಭೂತ ಹಕ್ಕುಗಳು, ವ್ಯಕ್ತಿ ಗೌರವ, ನ್ಯಾಯ ದೊರೆಯುವಂತಾಗಿದೆ. ನಾವೆಲ್ಲರೂ ಸಂವಿಧಾನದ ಆಶಯಗಳು, ಮೌಲ್ಯಗಳು ಹಾಗೂ ಡಾ. ಅಂಬೇಡ್ಕರ್ ಅವರ ಮಾನವೀಯ ಸಂದೇಶಗಳು, ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಉಪವಿಭಾಗಾಧಿಕಾರಿ ಮುಹಮ್ಮದ್ ಶಕೀಲ್, ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಮುಖಂಡರಾದ ಬಾಬುರಾವ್ ಪಾಸ್ವಾನ್, ರಮೇಶ್ ಡಾಕುಳಗಿ, ಅನಿಲಕುಮಾರ ಬೆಲ್ದಾರ್, ಈಶ್ವರ ಸಿಂಗ್ ಠಾಕೂರ್, ಪಂಡಿತ್ ಚಿದ್ರಿ, ಹಣಮಂತ ಮಲ್ಕಾಪುರ, ವಿಸ್ಡಂ ಸಂಸ್ಥೆ ಅಧ್ಯಕ್ಷ ಎಂ.ಡಿ. ಆಸಿಫುದ್ದೀನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.