ಬೀದರ್ ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು
ಬೀದರ್: ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ, ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಅಪಾರ ಸಂಖ್ಯೆ ಕಾರ್ಯಕರ್ತರು ಮಾನವ ಸರ್ಪಳಿ ಮಾಡಿ ಘೋಷಣೆ ಕೂಗುತ್ತ ಅಮಿತ್ ಶಾ ಅವರ ಪ್ರಕೃತಿ ದಹಿಸಿ ತಮ್ಮ ಸಿಟ್ಟು ಹೊರ ಹಾಕಿದರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ದೇಶಾದ್ಯಂತ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.
ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಅನೀಲಕುಮಾರ ಬೆಲ್ದಾರ್ ಮಾತನಾಡಿ, ‘ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಜವಾಗಲೂ ಡಾ. ಅಂಬೇಡ್ಕರ್ ಅವರ ಬಗ್ಗೆ ಗೌರವ ಇದ್ದರೆ ಅಮಿತ್ ಶಾ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.
ಮುಖಂಡ ಬಾಬುರಾವ ಪಾಸ್ವಾನ್ ಮಾತನಾಡಿ, ‘ಅಮಿತ್ ಶಾ ಅವರು ಅಂಬೇಡ್ಕರ್ ಅವರನ್ನು ಅವಮಾನ ಮಾಡುವ ಮೂಲಕ ಕೋಟಿ ಕೋಟಿ ಅಂಬೇಡ್ಕರ್ ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರು ತಕ್ಷಣ ಕ್ಷಮೆ ಕೇಳದಿದ್ದರೆ ಹೋರಾಟ ತೀವ್ರವಾಗಲಿದೆ’ ಎಂದು ಎಚ್ಚರಿಸಿದರು.
ಮುಖಂಡ ಶಂಕರರಾವ ದೊಡ್ಡಿ, ‘ಅಮಿತ್ ಶಾ ಅವರ ಹೇಳಿಕೆಯಿಂದ ಬಿಜೆಪಿ ಮನಸ್ಥಿತಿ ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿ ಎಂಬುದು ಗೊತ್ತಾಗುತ್ತದೆ. ಇವರ ವಿರುದ್ಧ ಜನ ಸಂಘಟಿತರಾಗಿ ಪಾಠ ಕಲಿಸಬೇಕು’ ಎಂದು ಹೇಳಿದರು.
ಬೀದರ್ ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಡಾ. ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದರು
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅಮೃತರಾವ ಚಿಮಕೋಡೆ, ‘ಅಮಿತ್ ಶಾ ಅವರು ಕೇವಲ ಅಂಬೇಡ್ಕರ್ ಅವರನ್ನು ಮಾತ್ರ ಅವಮಾನಿಸಿಲ್ಲ. ಸಮಸ್ತ ಭಾರತೀಯರನ್ನು ಅವಮಾನಿಸಿದ್ದಾರೆ. ಪದೇ ಪದೇ ಅಂಬೇಡ್ಕರ್ ಅವರ ಬಗ್ಗೆ ಗೌರವದ ಮಾತು ಆಡುವ ಪ್ರಧಾನಿ ಮೋದಿ ಅವರು ಈಗ ಏಕೆ ಮೌನ ವಹಿಸಿದ್ದಾರೆ. ತಕ್ಷಣ ಅವರು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ‘ನಮ್ಮ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ಬಿಜೆಪಿ ಅವರು ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡುವುದು ನಿಲ್ಲಿಸಬೇಕು. ಇಲ್ಲವಾದಲ್ಲಿ ಪಕ್ಷ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಿದೆ’ ಎಂದು ಹೇಳಿದರು.
ಮುಖಂಡ ಸಂಜಯ ಜಾಗಿರದಾರ್, ಇರ್ಷಾದ, ರಮೇಶ ಡಾಕುಳಗಿ, ಶಿವಕುಮಾರ ನೀಲಿಕಟ್ಟಿ, ಪಂಡಿತ ಕಾಂಟೆ, ಸಂದೀಪ ಕಾಂಟೆ, ಪ್ರದೀಪ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.