ADVERTISEMENT

ನಾಯಕರಿಗೆ ಮಣಿದು ಕೆಲಸ ಮಾಡಬೇಡಿ: ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:55 IST
Last Updated 22 ಜುಲೈ 2025, 4:55 IST
ಹುಮನಾಬಾದ್ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಾತನಾಡಿದರು
ಹುಮನಾಬಾದ್ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಾತನಾಡಿದರು   

ಹುಮನಾಬಾದ್: ‘ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ನಾಯಕರಿಗೆ ಮಣಿದು ಕೆಲಸ ಮಾಡುವುದನ್ನು ಅಧಿಕಾರಿಗಳು ಬಿಡಬೇಕು’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಸಲಹೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಮೃತ 2.0 ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ. ನಿಮ್ಮನ್ನು ಯಾರೂ ಏನೂ ಕೇಳಲ್ಲ. ಈ ಅಮೃತ ಯೋಜನೆ ಟೆಂಡರ್ ಪ್ರಕ್ರಿಯೆ ಮುಗಿದು ಇಲ್ಲಿಯವರೆಗೆ 14 ತಿಂಗಳು ಕಳೆದು ಹೋಗಿವೆ. ಸುಮಾರು 51 ಪ್ರತಿಶತ ಕಾಮಗಾರಿ ಮುಗಿಸಬೇಕಿತ್ತು.‌ ಆದರೆ, ನೀವು ಬರೀ ಶೇ5ರಷ್ಟು  ಕಾಮಗಾರಿ ಮಾತ್ರ ಮಾಡಿದ್ದೀರಿ. ಹೀಗಾದರೆ ನಾನು ಜನರಿಗೆ ಏನು ಉತ್ತರಿಸಬೇಕು?’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದರು.

ADVERTISEMENT

‘ಹುಮನಾಬಾದ್, ಚಿಟಗುಪ್ಪ , ಹಳ್ಳಿಖೇಡ್ ಬಿ. ಪಟ್ಟಣದಲ್ಲಿ ನೀರಿನ ಸಮಸ್ಯೆಯಿಂದಾಗಿ ಜನರು ನಿತ್ಯವೂ ಪರದಾಡುತ್ತಿದ್ದಾರೆ. ಯಾವ ಕಾರಣಕ್ಕಾಗಿ ನೀವು ಕಾಮಗಾರಿ ವಿಳಂಬ ಮಾಡುತ್ತಿದ್ದೀರಿ. ಅಧಿಕಾರಿಗಳು ತಕ್ಷಣ ಎಚ್ಚೆತ್ತು ಕಾಮಗಾರಿಗೆ ವೇಗ ನೀಡಬೇಕು’ ಎಂದು ನಿರ್ದೇಶನ ನೀಡಿದರು.

‘ಮೊದಲು ಯಾವುದಾದರೂ ಒಂದು ಬಡಾವಣೆಯಲ್ಲಿ ಕಾಮಗಾರಿ ಆರಂಭಿಸಿ. ಅಲ್ಲಿಯ ಪ್ರತಿ ಮನೆ ಮನೆಗೆ ನೀರಿನ ಸಂಪರ್ಕ ನೀಡಿ. ನಂತರ ಬಡಾವಣೆಯಲ್ಲಿನ ಎಲ್ಲ ಮನೆಗಳಿಗೆ ಸರಿಯಾಗಿ ನೀರು ಸರಬರಾಜಾದರೆ ಮಾತ್ರ ಮತ್ತೊಂದು ಬಡಾವಣೆಯಲ್ಲಿ ಕಾಮಗಾರಿ ಆರಂಭಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹುಮನಾಬಾದ್ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಾತನಾಡಿದರು

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸುನೀಲ ಪಾಟೀಲ, ರಮೇಶ ಕಲ್ಲೂರ, ವಿಜಯಕುಮಾರ ದುರ್ಗಾದ, ಧನಲಕ್ಷ್ಮಿ ಗೋರಪಾಡೆ, ಹುಮನಾಬಾದ್ ಪುರಸಭೆ ಮುಖ್ಯಾಧಿಕಾರಿ ವನಿತಾ, ಚಿಟಗುಪ್ಪ ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದಿನ್ ಬಾಬಾ, ಹಳ್ಳಿಖೇಡ್ ಬಿ.ಪುರಸಭೆ ಮುಖ್ಯಾಧಿಕಾರಿ ನಿಂಗಪ್ಪ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನರಸಿಂಹ ರೆಡ್ಡಿ, ವಿಜಯಕುಮಾರ, ಜ್ಯೋತಿ ಪಾಟೀಲ, ಸಂದೀಪ ಶ್ರೀನಿವಾಸ ಸೇರಿದಂತೆ ಇತರರು ಇದ್ದರು.

ಹುಮನಾಬಾದ್ ಪುರಸಭೆಯಲ್ಲಿ ಅವ್ಯವಹಾರ ಹೆಚ್ಚಾಗುತ್ತಿದೆ. ತನಿಖೆಗೆ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮಾಹಿತಿ ನೀಡಲಾಗುವುದು
ಡಾ.ಸಿದ್ದಲಿಂಗಪ್ಪ ಪಾಟೀಲ ಶಾಸಕ

ಅಧ್ಯಕ್ಷ ಸದಸ್ಯರಿಗೆ ಅಭಿವೃದ್ಧಿ ಬೇಕಿಲ್ಲ

‘ಅಮೃತ’ ಸಾರ್ವಜನಿಕರಿಗೆ ನೀರು ಒದಗಿಸುವ ಯೋಜನೆಯಾಗಿದೆ. ಆದರೆ ಇಂತಹ ಪುಣ್ಯದ ಕೆಲಸದ ಸಭೆಗೆ ಹುಮನಾಬಾದ್ ಚಿಟಗುಪ್ಪ ಹಳ್ಳಿಖೇಡ್ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಅಧ್ಯಕ್ಷ ಸದಸ್ಯರು (ಕಾಂಗ್ರೆಸ್ ಪಕ್ಷ) ಒಬ್ಬರೂ ಬಂದಿಲ್ಲ. ಅವರಿಗೆ ಅಭಿವೃದ್ಧಿಯೇ ಬೇಕಾಗಿಲ್ಲ ಬರೀ ರಾಜಕೀಯ ಮಾಡುತ್ತಾರೆ’ ಎಂದು ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ ಟೀಕಿಸಿದರು. ‘ಅಲ್ಲಲ್ಲಿ ಕಾಮಗಾರಿಗೆ ಉದ್ದೇಶ ಪೂರ್ವಕವಾಗಿ ಅಡ್ಡಿಪಡಿಸುವ ಕೆಲಸ ಸಹ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಯಾವ ಕಾರಣಕ್ಕೆ ಹೀಗೆ ಮಾಡುತ್ತಿದ್ದೀರಿ. ಹುಮನಾಬಾದ್‌ ಚಿಟಗುಪ್ಪ ಹಳ್ಳಿಖೇಡ್ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ನಿತ್ಯವೂ ಜನ ಪರದಾಡುತ್ತಿದ್ದಾರೆ. ಅವರ ಸಮಸ್ಯೆಯನ್ನೂ ನೀವು ಆಲಿಸಲ್ಲ. ಕಾರಂಜ ಜಲಾಶಯದಿಂದ ಹುಮನಾಬಾದ್ ಮತ್ತು ಚಿಟಗುಪ್ಪಕ್ಕೆ ನೀರು ಸರಬರಾಜು ಮಾಡುವ ಪೈ‍ಪ್‌ಲೈನ್‌ಗೆ ಕಳೆದ ನಾಲ್ಕು ವರ್ಷಗಳಿಂದ ಏರ್‌ವಾಲ್ ಅಳವಡಿಸಿಲ್ಲ. ಇದರಿಂದ ಪದೇಪದೆ ಪೈ‍ಪ್‌ಲೈನ್ ಒಡೆದು ಸಮಸ್ಯೆಯಾಗುತ್ತಿದೆ. ಏರ್‌ ವಾಲ್ ಯಾಕೆ ಅಳವಡಿಸಿಲ್ಲ? ಈ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳಿಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.