ADVERTISEMENT

‘ಅಂಗನವಾಡಿ ಕೇಂದ್ರ ಮುಂದುವರಿಸಿ’

ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 15:53 IST
Last Updated 11 ಜೂನ್ 2019, 15:53 IST
ಅಖಿಲ ಭಾರತ ಕಿಸಾನ್ ಸಭಾ ಹಾಗೂ ಅಖಿಲ ಭಾರತ ತಂಜೀಮ್ ಎ ಇನ್ಸಾಫ್ ಪದಾಧಿಕಾರಿಗಳು ಮಂಗಳವಾರ ಬೀದರ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು
ಅಖಿಲ ಭಾರತ ಕಿಸಾನ್ ಸಭಾ ಹಾಗೂ ಅಖಿಲ ಭಾರತ ತಂಜೀಮ್ ಎ ಇನ್ಸಾಫ್ ಪದಾಧಿಕಾರಿಗಳು ಮಂಗಳವಾರ ಬೀದರ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಬೀದರ್: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಅಖಿಲ ಭಾರತ ಕಿಸಾನ್ ಸಭಾ ಹಾಗೂ ಅಖಿಲ ಭಾರತ ತಂಜೀಮ್ ಎ ಇನ್ಸಾಫ್ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಕಳುಹಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರವನ್ನು ಮುಚ್ಚುವ ಹುನ್ನಾರ ನಡೆದಿದ್ದು, ಇದನ್ನು ಕೈಬಿಡಬೇಕು. ಅಸ್ಸಾಂನಲ್ಲಿರುವ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ರಾಷ್ಟ್ರದಾದ್ಯಂತ ವಿಸ್ತರಿಸಲು ಉದ್ದೇಶಿಸಿರುವುದು ಸರಿಯಲ್ಲ ಎಂದು ದೂರಿದರು.

ADVERTISEMENT

ಹಿರಿಯ ನಾಗರಿಕರು, ವಿಧವೆಯರು ಹಾಗೂ ಅಂಗವಿಕಲರಿಗೆ ಮಾಸಾಶನ ವಿತರಿಸುವಲ್ಲಿ ಲೋಪ ಎಸಗುತ್ತಿರುವ ಅಂಚೆ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಜಿಂದಾಲ್ ಸ್ಟೀಲ್ ಕಂಪನಿಗೆ 3,670 ಎಕರೆ ಕೃಷಿ ಭೂಮಿ ಪರಭಾರೆ ಮಾಡಬಾರದು. ಗ್ರಾಮೀಣ ನೀರು ಪೂರೈಕೆ ಹೊಣೆಯನ್ನು ಖಾಸಗಿ ಏಜೆನ್ಸಿಗೆ ವಹಿಸಬಾರದು. ಬ್ರಿಮ್ಸ್ ಆಸ್ಪತ್ರೆ ಕಟ್ಟಡ ಕಾಮಗಾರಿ ಕಳಪೆಯಾದ ಕಾರಣ ಗುತ್ತಿಗೆದಾರರು ಹಾಗೂ ಮೇಲ್ವಿಚಾರಣೆ ನಡೆಸಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಒದಗಿಸಬೇಕು. ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು. ಪಹಣಿ ಪತ್ರಿಕೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು. ಶುಲ್ಕ ಪಾವತಿಸಿದ ರೈತರ ಹೊಲಗಳ ಸರ್ವೇ ಮಾಡಬೇಕು. ಬೀದರ್ ತಹಶೀಲ್ದಾರ್ ಕಚೇರಿಯಲ್ಲಿ ಪಹಣಿ ಹಾಗೂ ಹೊಲ್ಡಿಂಗ್ ಕೊಡಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ರಾಜ್ಯ ಮಂಡಳಿ ಸದಸ್ಯ ನಜೀರ್ ಅಹಮ್ಮದ್ ಚೊಂಡಿ, ಖಮರ್ ಪಟೇಲ್, ಗುರುಪಾದಯ್ಯ ಸ್ವಾಮಿ, ಶಂಕರರಾವ್ ಕಮಠಾಣ,ಬಾಬುರಾವ್ ವಾಡೇಕರ್, ಶಫಯಾತ್ ಅಲಿ, ಖದೀರ್‌ಮಿಯ,
ಮಚ್ಚೇಂದ್ರ, ಪ್ರಭು ತೆಗಣೆ, ಕಲ್ಲಪ್ಪ ಚೌಳಿ, ಎಂ.ಡಿ. ಖಾದರ್, ಬಸವರಾಜ ಪಾಟೀಲ, ಮಲ್ಲಯ್ಯ ಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.