
ಬಸವಕಲ್ಯಾಣ: ನಗರದ ಅನುಭವ ಮಂಟಪದ ಆವರಣದಲ್ಲಿ 46ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನವೆಂಬರ್ 29 ಮತ್ತು 30ರಂದು ಸಂಭ್ರಮದಿಂದ ನೆರವೆರಲಿದೆ. ಈ ನಿಮಿತ್ತವಾಗಿ ಭಾನುವಾರ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ ನಡೆದಿದ್ದು, ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಚಾಲನೆ ನೀಡಿದರು.
ನವೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ಆಂಧ್ರಪ್ರದೇಶದ ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ, ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು. ಹಾರಕೂಡ ಚನ್ನವೀರ ಶಿವಾಚಾರ್ಯರು, ಹುಲಸೂರ ಶಿವಾನಂದ ಸ್ವಾಮೀಜಿ, ಅಕ್ಕ ಗಂಗಾಂಬಿಕಾ ನೇತೃತ್ವ ವಹಿಸುವರು.
ರೈಲ್ವೆ ಸಚಿವ ವಿ.ಸೋಮಣ್ಣ ಗ್ರಂಥ ಲೋಕಾರ್ಪಣೆಗೈಯುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಸಂಸದ ಸಾಗರ ಖಂಡ್ರೆ ಭಾವಚಿತ್ರದ ಪೂಜೆ ನೆರವೇರಿಸುವರು. ಪೌರಾಡಳಿತ ಸಚಿವ ರಹೀಂಖಾನ್, ಮಾಜಿ ಸಚಿವ ಸಂಜಯ ಬನಸೋಡೆ, ನಾರಾಯಣಖೇಡ ಶಾಸಕ ಪಿ.ಸಂಜೀವರೆಡ್ಡಿ, ಶಾಸಕ ಶರಣು ಸಲಗರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ ಜಾಗತಿಕ ನೆಲೆಯಲ್ಲಿ ಬಸವತತ್ವದ ಪ್ರಸ್ತುತತೆ ಗೋಷ್ಠಿ ನಡೆಯುವುದು.
ನವೆಂಬರ್ 30ರಂದು ಬೆಳಿಗ್ಗೆ 10 ಗಂಟೆಗೆ ಲಿಂಗಾಯತ ಹೋರಾಟ ಮತ್ತು ರಾಷ್ಟ್ರೀಯತೆ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆಯುವುದು. ಅಂದು ಮಧ್ಯಾಹ್ನ 1 ಗಂಟೆಗೆ ಆಯೋಜಿಸುವ ಸಮಾರೋಪದಲ್ಲಿ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಅಧ್ಯಕ್ಷತೆ ವಹಿಸುವರು. ಜಹೀರಾಬಾದ್ ಸಂಸದ ಸುರೇಶ ಶೆಟಗಾರ, ಮಾಜಿ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮ್ಮಕನೂರು, ಎಂ.ಜಿ.ಮುಳೆ ಹಾಗೂ ಜಿಲ್ಲೆಯ ಶಾಸಕರು ಪಾಲ್ಗೊಳ್ಳಲಿದ್ದಾರೆ.
ವಿವಿಧ ಗ್ರಂಥಗಳ ಬಿಡುಗಡೆ
ಕನ್ನಡ ಮರಾಠಿ ತೆಲುಗು ಗ್ರಂಥಗಳ ಬಿಡುಗಡೆ ಬಸವಲಿಂಗ ಪಟ್ಟದ್ದೇವರು ರಚನೆಯ ‘ವಚನ ದರ್ಪಣ’ ‘ವಚನ ಕಲ್ಯಾಣ’ ‘ವಚನ ಬಂಧು’ ‘ಮಕ್ಕಳಿಗಾಗಿ ಅಷ್ಟಾವರಣ’ ‘ಮಕ್ಕಳಿಗಾಗಿ ಪಂಚಾಚಾರ’ ‘ಮಕ್ಕಳಿಗಾಗಿ ಷಟ್ ಸ್ಥಲ’ ‘ವಿಶ್ವಗುರು ಬಸವಣ್ಣವರ ವಚನಗಳು’ ಗ್ರಂಥಗಳೊಂದಿಗೆ ಢಕ್ಕೆಯ ಬೊಮ್ಮಣ್ಣ(ರಘುಶಂಖ ಭಾತಂಬ್ರಾ) ಒಕ್ಕಲಿಗ ಮುದ್ದಣ್ಣ(ವಿಜಯಕುಮಾರ ಕಮ್ಮಾರ) ಬಿಬ್ಬಿ ಬಾಚರಸ(ರಾಜೇಶ್ರೀ ಕಿಶೋರ) ಶರಣ ಸಾಹಿತ್ಯ ಲೇಖನ ಸೂಚಿ(ಖೇಮಣ್ಣ ಅಲ್ದಿ) ಅಕ್ಕಮಹಾದೇವಿ ಭಜನಾ ಮಾಲಿಕೆ(ರಾಮಲಿಂಗ ಮುಚಳಂಬ) ಹಾಗೂ ಮರಾಠಿ ಗ್ರಂಥಗಳಾದ ‘ಸಮಗ್ರ ಬಸವ ಕ್ರಾಂತಿ ಚಾ ವಚನ ನಾಮಾ’(ರಂಜಾನ್ ದರ್ಗಾ) ‘ವಚನ ಮಧುರಿಕಾ’(ಅನುವಾದ–ಶಿವಾನಂದ) ‘ಶರಣ ಜೀವನ ದರ್ಶನ ಖಂಡ-1’(ರಾಜೀವ ಜುಬರೆ ಭಾಲ್ಕಿ) ‘ಬಸವಸ್ತೋತ್ರ ತ್ರಿವಿಧಿ’(ಜಯದೇವಿತಾಯಿ ಲಿಗಾಡೆ) ‘ಮಹಾತ್ಮ ಬಸವೇಶ್ವರ ಕಾಲಿನ ಮಂಗಳವೇಡಾ’(ಅಶೋಕ ಮೇನಕುದಳೆ) ‘ವಚನ ಝುಂಬರ್’ (ಅನುವಾದ–ಶಿವಾನಂದ) ‘ಬಸವಯುಗವು ಶಿವಶರಣುಲ ಚರಿತ್ರಂ’(ತೆಲುಗು ಅನುವಾದ–ಕೆ.ಸುಧಾಕರರಾವ್) ಗ್ರಂಥಗಳು ಬಿಡುಗಡೆ ಆಗಲಿವೆ. ಪ್ರಶಸ್ತಿ ಪ್ರದಾನ ಸಮಾರಂಭ ನ.30ರಂದು ಬೆಳಿಗ್ಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಚಿತ್ರಕಲಾವಿದ ಸಿ.ಬಿ. ಸೋಮಶೆಟ್ಟಿ ಬೀದರ(ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ) ಕೆ.ರವೀಂದ್ರನಾಥ ಹೊಸಪೇಟೆ (ಎಂ.ಎಂ.ಕಲಬುರಗಿ ಸಾಹಿತ್ಯ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿ) ನಾಟಕಕಾರ ಬಸವರಾಜ ಬೆಂಗೇರಿ ಸಿರೂರ (ಬಸವಭಾಸ್ಕರ ರಾಷ್ಟ್ರೀಯ ಪ್ರಶಸ್ತಿ) ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಸಂಸ್ಥಾಪಕಿ ಎಸ್.ಜಿ.ಸುಶೀಲಮ್ಮ(ಅನುಭವಮಂಟಪ ರಾಷ್ಟ್ರೀಯ ಪ್ರಶಸ್ತಿ) ಡಾ.ಮಲ್ಲಿಕಾರ್ಜುನ ರಗಟೆ ದೇಗಲೂರು (ಶರಣ ವೈದ್ಯ ಸಂಗಣ ಪ್ರಶಸ್ತಿ) ರಮೇಶ ಮೋರ್ಗೆ ಖಾನಾಪುರ ಸೋಮಶಂಕರ ಕಾರಾಮುಂಗೆ ಹುಡಗಿ(ಶರಣ ಒಕ್ಕಲಿಗ ಮುದ್ದಣ ಪ್ರಶಸ್ತಿ) ಪ್ರದಾನ ಮಾಡಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.