
ಬಂಧನ (ಸಾಂದರ್ಭಿಕ ಚಿತ್ರ)
ಹುಮನಾಬಾದ್: ಕಚೇರಿಯ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ದಿಪೀಕಾ ನಾಯ್ಕರ್ ಅವರಿಗೆ ಏಕವಚನದಲ್ಲಿ ಮಾತನಾಡಿದ್ದ ಹಿನ್ನೆಲೆ ಚಂದನ್ನಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ದಸ್ತಗಿರ್ ಪಟೇಲ್ ಅವರನ್ನು ಹುಮನಾಬಾದ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಘಟನೆ ವಿವರ: ಅ.28ರಂದು ಸಂಜೆ ತಾ.ಪಂ. ಕಚೇರಿಗೆ ದಸ್ತಗಿರ್ ಪಟೇಲ್ ಬಂದಿದ್ದರು. ನಾನು ಕಚೇರಿಯ ನನ್ನ ಕೊಠಡಿಯಲ್ಲಿ ಬೇರೊಬ್ಬ ಸಾರ್ವಜನಿಕ ಸಂಭಾಷಣೆಯಲ್ಲಿದ್ದ ವೇಳೆ ದಸ್ತಗಿರ್ ಪಟೇಲ್ ಅವರಿಗೆ ಐದು ನಿಮಿಷ ಬಿಟ್ಟು ಬನ್ನಿ ಎಂದು ಕಚೇರಿಯ ಸಿಬ್ಬಂದಿ ಅಶೋಕ ಅವರಿಂದ ಹೇಳಿಸಿದ್ದೆ. ಆದರೆ, ಅವರು ಒಳಗೆ ನುಗ್ಗಿ ಬಂದಿದ್ದರು.
ಐದು ನಿಮಿಷದ ನಂತರ ಬನ್ನಿ ಎಂದು ನಾನೇ ವಿನಂತಿ ಮಾಡಿದರು ಸಹ ಅವರು ಹೋಗಿಲ್ಲ. ನಂತರ ದಸ್ತಗಿರ್ ಪಟೇಲ್ ಅವರು ಏರುಧ್ವನಿಯಲ್ಲಿ ನಾನು ಹೋಗುವುದಿಲ್ಲ ಎಂದು ಏಕವಚನದಲ್ಲಿ ನನ್ನೊಂದಿಗೆ ಮಾತನಾಡಿ, ಕಚೇರಿಯ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ.
ನಾನು ಮಹಿಳಾ ಅಧಿಕಾರಿ ಇರುವುದಿಂದ ಉದ್ದೇಶಪೂರ್ವಕವಾಗಿ ಈ ರೀತಿ ವರ್ತನೆ ಮಾಡಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದಿಪೀಕಾ ನಾಯ್ಕರ್ ಅವರು ಅ.28ರಂದು ಹುಮನಾಬಾದ್ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಿಎಸ್ಐ ಸುರೇಶ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.