ಬೀದರ್ ನಗರದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿದರು. ಸಂಸದ ಸಾಗರ್ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಇದ್ದರು
ಬೀದರ್: ‘ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ 371 (ಜೆ) ಕಲಂ ತಿದ್ದುಪಡಿ ಕಾಯ್ದೆಯಿಂದ ಅನುಕೂಲವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ನಗರದ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
‘ಶತಮಾನಗಳ ಶಾಪ, ದಬ್ಬಾಳಿಕೆಯಿಂದಾಗಿ ನಮ್ಮ ಕಲ್ಯಾಣ ಕರ್ನಾಟಕ ಭಾಗ ಉಳಿದ ಭಾಗಗಳಿಗೆ ಹೋಲಿಸಿದರೆ ಅತ್ಯಂತ ಹಿಂದುಳಿದಿದೆ. ಈ ಅಸಮತೋಲನವನ್ನು ನಿವಾರಿಸಲು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ವಿಶೇಷ ಸ್ಥಾನಮಾನ ಸೌಲಭ್ಯ ದೊರಕಿಸಿಕೊಟ್ಟಿದೆ’ ಎಂದರು.
‘ಇದಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಹೋರಾಡಿದ, ಶ್ರಮಿಸಿದ ಎಲ್ಲರಿಗೂ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಮರ್ಪಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಕೊಡುಗೆ ಮಹತ್ವದ್ದಾಗಿದೆ’ ಎಂದರು.
‘ನಮ್ಮ ಸರ್ಕಾರ ಪ್ರತಿವರ್ಷ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹5 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಬೀದರ್ ಜಿಲ್ಲೆಯ ಅಭಿವೃದ್ಧಿಗೆ ₹500 ಕೋಟಿ ಹೆಚ್ಚುವರಿ ಅನುದಾನ ಸಿಗುತ್ತಿದೆ. ವಿಶೇಷ ಸ್ಥಾನಮಾನ ಸೌಲಭ್ಯದಿಂದ ನಮ್ಮ ಭಾಗದ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸಿಗುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013ರಲ್ಲಿ ಇದಕ್ಕೆ ವಿಶೇಷ ನಿಯಮ ರೂಪಿಸಿದರು. ಇದರಿಂದ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಗ್ರೂಪ್ ಎ ಮತ್ತು ಬಿ ಹುದ್ದೆಗಳನ್ನು ಶೇ 75, ಗ್ರೂಪ್ ಸಿ ಹುದ್ದೆಯಲ್ಲಿ ಶೇ 80ರಷ್ಟು ಮತ್ತು ಗ್ರೂಪ್ ಡಿ ಹುದ್ದೆಯಲ್ಲಿ ಶೇ 85ರಷ್ಟು ಈ ಭಾಗದ ಜನರಿಗೆ ಮೀಸಲಿಡಲಾಗಿದೆ’ ಎಂದು ಹೇಳಿದರು.
‘ರಾಜ್ಯದ ಇತರೆ ಭಾಗದ ಜಿಲ್ಲೆಗಳಲ್ಲಿ ನೇಮಕ ಮಾಡುವಾಗ ಶೇ 8ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಇತ್ಯಾದಿ ಕೋರ್ಸ್‌ಗಳಿಗೆ ಶೇ 70ರಷ್ಟು ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶೇ 8ರಷ್ಟು ಸೀಟುಗಳನ್ನು ಈ ಭಾಗದ ವಿದ್ಯಾರ್ಥಿಗಳಿಗಾಗಿಯೇ ಮೀಸಲಿಡಲಾಗುತ್ತಿದೆ’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಫಲಿತಾಂಶ ಶೇ 10ರಷ್ಟು ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ. ಅಕ್ಷರ ಆವಿಷ್ಕಾರ ಯೋಜನೆಯಡಿ ಶಾಲೆಗಳ ಶಿಕ್ಷಣದ ಕೌಶಲ ಮಟ್ಟವನ್ನು ಸುಧಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ 30 ಹೋಬಳಿಗಳಲ್ಲೂ ವಸತಿ ಶಾಲೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
ನಗರದಲ್ಲಿ ಬೆಳಿಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಬಸವೇಶ್ವರ ವೃತ್ತದಿಂದ ಜಿಲ್ಲಾ ನೆಹರೂ ಕ್ರೀಡಾಂಗಣದವರೆಗೂ ಮೆರವಣಿಗೆ ನಡೆಯಿತು.
ಸಂಸದ ಸಾಗರ್ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮೊಹ್ಮದ್ ಗೌಸ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬೀದರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೇರಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.
‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ 1 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ಪೂರ್ಣಗೊಂಡ ನಂತರ ಪರಿಹಾರ ನೀಡಲಾಗುವುದು. ಜಿಲ್ಲೆಯಲ್ಲಿ ಮಳೆ ಹಾನಿಯಾಗಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಹೆಚ್ಚುವರಿ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೇ ಮನೆ ಹಾನಿಗಳಿಗೆ ಪರಿಹಾರ ವಿತರಿಸಲಾಗಿದ್ದು ರಸ್ತೆ ಸೇತುವೆಗಳ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಯಲ್ಲಿ 2013-14ರಿಂದ 2024-25 ರವರೆಗೆ ₹2635.60 ಕೋಟಿ ಮೊತ್ತದಲ್ಲಿ 5076 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 4219 ಕಾಮಗಾರಿಗಳು ಮುಕ್ತಾಯಗೊಂಡಿದ್ದು ಇದಕ್ಕೆ ₹1952.92 ಕೋಟಿ ವೆಚ್ಚ ಮಾಡಲಾಗಿದೆ’ ಎಂದರು. ‘ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗಗಳಲ್ಲಿ ಒಟ್ಟು 9 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ. ಈಗಾಗಲೇ 7 ಲಕ್ಷ ಸಸಿ ನೆಡಲಾಗಿದೆ. 2026-27ನೇ ಸಾಲಿನಲ್ಲಿ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲ್ಲಿ ನೆಡುತೋಪು ನಿರ್ಮಾಣ ಮಾಡಿ 8 ಲಕ್ಷ ಸಸಿ ಬೆಳೆಸುವ ಗುರಿ ನಿಗದಿಪಡಿಸಲಾಗಿದೆ. ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳಿಗಾಗಿ ₹15 ಕೋಟಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಹೇಳಿದರು. ‘ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದ ರೂಪಿಸುವ ಯೋಜನೆಗಳು ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ನಿರಂತರ ಮೇಲ್ವಿಚಾರಣೆ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರದೇಶ ಸಚಿವಾಲಯ ಸ್ಥಾಪನೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ’ ಎಂದರು.
‘ರಾಜ್ಯದಾದ್ಯಂತ ಎಲ್ಲರೂ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನ ಆಚರಿಸಿದರೆ ಕಲ್ಯಾಣ ಕರ್ನಾಟಕ ಭಾಗದ ಜನ ಎರಡು ಬಾರಿ ಸ್ವಾತಂತ್ರ್ಯ ಸಂಭ್ರಮ ಆಚರಿಸುತ್ತೇವೆ’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ‘ಇಂದು ಕಲ್ಯಾಣ ಕರ್ನಾಟಕ ಹೈದರಾಬಾದ್ ನಿಜಾಮರ ಆಳ್ವಿಕೆ ಹಾಗೂ ರಜಾಕಾರರ ದಬ್ಬಾಳಿಕೆಯಿಂದ ವಿಮೋಚನೆಗೊಂಡ ದಿನವಾಗಿದೆ. ಕಲ್ಯಾಣ ಕರ್ನಾಟಕ ಪುರಾಣ ಇತಿಹಾಸ ಶರಣ ಸಂಸ್ಕೃತಿ ಧಾರ್ಮಿಕ ಸಾಮಾಜಿಕ ಭಾಷಿಕ ಸಾಂಸ್ಕೃತಿಕ ಹಾಗೂ ರಾಜಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಶ್ರೀಮಂತ ಪರಂಪರೆ ಹೊಂದಿದೆ. ಈ ಎಲ್ಲ ಇತಿಹಾಸವನ್ನು ಇಂದಿನ ಪೀಳಿಗೆ ತಿಳಿದುಕೊಳ್ಳಬೇಕು’ ಎಂದರು. ‘ಎರಡನೇ ಜಲಿಯನ್ ವಾಲಾಬಾಗ್ ಎಂದು ಕರೆಯಿಸಿಕೊಳ್ಳುವ ಗೋರಟಾ ಹತ್ಯಾಕಾಂಡ ಅತ್ಯಂತ ಭೀಕರವಾಗಿತ್ತು. ಇದರಲ್ಲಿ ಅನೇಕ ಜನರನ್ನು ಹತ್ಯೆ ಮಾಡಲಾಗಿತ್ತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.