ADVERTISEMENT

ಹುಮನಾಬಾದ್: ಮಾರುಕಟ್ಟೆಗೆ ಬಂದ ವ್ಯಕ್ತಿ ಮೇಲೆ ಹಲ್ಲೆ, ಎಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 10:04 IST
Last Updated 9 ಏಪ್ರಿಲ್ 2020, 10:04 IST
ಹುಮನಾಬಾದ್‌ನಲ್ಲಿ ಪೊಲೀಸರಿಂದ ಹಲ್ಲೆಗೆ ಒಳಗಾದ ವ್ಯಕ್ತಿ
ಹುಮನಾಬಾದ್‌ನಲ್ಲಿ ಪೊಲೀಸರಿಂದ ಹಲ್ಲೆಗೆ ಒಳಗಾದ ವ್ಯಕ್ತಿ   

ಹುಮನಾಬಾದ್ (ಬೀದರ್‌ ಜಿಲ್ಲೆ): ಲಾಕ್‌ಡೌನ್‌ ವೇಳೆ ಅಗತ್ಯ ಸಾಮಗ್ರಿ ತರಲು ಮನೆಯಿಂದ ಮಾರುಕಟ್ಟೆಗೆ ಹೊರಟಿದ್ದ ನಾಸೀರ್‌ ಎಂಬುವವರ ಮೇಲೆ ಲಾಠಿಯಿಂದ ಹೊಡೆದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‌ಐ ಬಸವರಾಜ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಜಿಲ್ಲಾ ಎಸ್‌ಪಿ ಪಟ್ಟಣದ ಎಪಿಎಂಸಿ ಹಿಂಬದಿಯ ಮುರಾದ್‌ ಮಸೀದಿಯ ನಾಸೀರ್‌ ಮೌಲಾನಾ ಅವರನ್ನು ಲಾಕ್‌ಡೌನ್‌ ಇರುವ ಕಾರಣ ಮನೆಯಿಂದ ಹೊರ ಬರದಂತೆ ಪೊಲೀಸರುಎಚ್ಚರಿಕೆ ನೀಡಿದರು. ಆಗ ನಾಸೀರ್‌ ಮತ್ತು ಬಸವರಾಜ್‌ ಮಧ್ಯೆ ಮಾತಿನ ಚಕಮಕಿ ನಡೆದು, ಬಸವರಾಜ್‌ ಲಾಠಿ ಬೀಸಿದ್ದರಿಂದ ನಾಸೀರ್‌ ಅವರ ಮೂಗಿನ ಎಲುಬು ಮುರಿಯಿತು. ಅವರನ್ನು ಕಲಬುರ್ಗಿಯ ಆಸ್ಪತ್ರೆಗೆ ಕಳಿಸಲಾಗಿದೆ.

‘ಲಾಕ್‌ಡೌನ್‌ ವೇಳೆ ಅನಗತ್ಯವಾಗಿ ಸಂಚರಿಸುತ್ತಿದ್ದ ವ್ಯಕ್ತಿಯತ್ತ ಲಾಠಿ ಬೀಸಿದಾಗ, ಆತ ಓಡಿ ಹೋಗಲು ಯತ್ನಿಸಿ ದ್ವಿಚಕ್ರವಾಹನದಿಂದ ಬಿದ್ದು ಗಾಯಗೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಪೊಲೀಸರು ಹೊಡೆದ ಕಾರಣ ನಾಸೀರ್ ಮೂಗಿನ ಎಲುಬು ಮುರಿದಿದೆ’ ಎಂದು ನಾಸೀರ್‌ ಕುಟುಂಬದ ಸದಸ್ಯರು ದೂರಿದ್ದಾರೆ.

ADVERTISEMENT

‘ಎಎಸ್‌ಐ ಬಸವರಾಜ್‌ ಅವರು ನಾಸೀರ್‌ ಮೌಲಾನಾ ಮೇಲೆ ಹಲ್ಲೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಚಾರಣೆ ಕಾಯ್ದಿರಿಸಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.