ಬೀದರ್: ನಗರದ ಎಸ್‌ಬಿಐ ಎಟಿಎಂ ದರೋಡೆ ಪ್ರಕರಣದಲ್ಲಿ ಗಾಯಗೊಂಡಿರುವ ಲಾಡಗೇರಿಯ ಶಿವಕುಮಾರ ಅವರಿಗೆ ಬಿಜೆಪಿ ಮುಖಂಡ ನಾಗರಾಜ್ ಕರ್ಪೂರ್ ಅವರು ವೈಯಕ್ತಿಕವಾಗಿ ₹50 ಸಾವಿರ ನೆರವು ನೀಡಿದರು.
ನಾಗರಾಜ್ ಕರ್ಪೂರ್ ಅವರು ಸೋಮವಾರ ಶಿವಕುಮಾರ ಅವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದರು. ಬಳಿಕ ನೆರವಿನ ಚೆಕ್ ಹಸ್ತಾಂತರಿಸಿದರು.
‘ಶಿವಕುಮಾರ ಬಡ ಕುಟುಂಬಕ್ಕೆ ಸೇರಿದ ಯುವಕ. ಎಸ್‌ಬಿಐ ಬ್ಯಾಂಕಿಗೆ ಸೇರಿದ ಹಣ ದರೋಡೆಕೋರರಿಂದ ರಕ್ಷಿಸಲು ಹೋಗಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಅವರು ಕೆಲಸ ನಿರ್ವಹಿಸುತ್ತಿದ್ದ ಸಿಎಮ್‌ಎಸ್ ಕಂಪನಿ ಚಿಕಿತ್ಸಾ ವೆಚ್ಚ ಭರಿಸಿದೆ. ಗುಂಡೇಟಿನಿಂದ ಅವರ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿರುವುದರಿಂದ ಮೊದಲಿನಂತೆ ಅವರು ಓಡಾಡಿ ಕೆಲಸ ಮಾಡಲು ಆಗುವುದಿಲ್ಲ. ಆದರೆ, ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಅವರಿಗೆ ಯಾವುದೇ ಆರ್ಥಿಕ ನೆರವು ನೀಡಿಲ್ಲ’ ಎಂದರು.
‘ಶಿವಕುಮಾರ ಹಾಗೂ ಅವರ ಕುಟುಂಬದವರು ಸಂಕಷ್ಟದಲ್ಲಿದ್ದಾರೆ. ವಿಷಯ ತಿಳಿದು ಅವರಿಗೆ ವೈಯಕ್ತಿಕವಾಗಿ ಸಹಾಯ ಮಾಡಿದ್ದೇನೆ. ಭವಿಷ್ಯದಲ್ಲಿ ಅವರಿಗೆ ಯಾವುದೇ ರೀತಿಯ ಸಹಾಯ ಬೇಕಿದ್ದರೆ ನನ್ನ ಮಟ್ಟದಲ್ಲಿ ಮಾಡಲು ಸಿದ್ಧವಿದ್ದೇನೆ’ ಎಂದು ಹೇಳಿದರು.
ಲಾಡಗೇರಿ ಹಿರೇಮಠದ ಗಂಗಾಧರ ಶಿವಾಚಾರ್ಯರು, ಶಿವಯೋಗಿ ಮತ್ತಿತರರರು ಹಾಜರಿದ್ದರು.
ಜನವರಿ 16ರಂದು ನಗರದ ಎಸ್‌ಬಿಐ ಬ್ಯಾಂಕ್ ಎದುರು ನಡೆದ ದರೋಡೆ ಪ್ರಕರಣದಲ್ಲಿ ಸಿಎಂಎಸ್ ಕಂಪನಿಯ ಒಬ್ಬ ಸಿಬ್ಬಂದಿ ದರೋಡೆಕೋರರ ಗುಂಡೇಟಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶಿವಕುಮಾರ ಅವರಿಗೆ ಗುಂಡು ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.