ADVERTISEMENT

ಉಗ್ರರ ಮೇಲೆ ದಾಳಿ; ಬಿಜೆಪಿ, ಎಬಿವಿಪಿ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 7 ಮೇ 2025, 13:58 IST
Last Updated 7 ಮೇ 2025, 13:58 IST
ಬಿಜೆಪಿ ಕಾರ್ಯಕರ್ತರು ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಬುಧವಾರ ವಿಜಯೋತ್ಸವ ಆಚರಿಸಿದರು
ಬಿಜೆಪಿ ಕಾರ್ಯಕರ್ತರು ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಬುಧವಾರ ವಿಜಯೋತ್ಸವ ಆಚರಿಸಿದರು   

ಬೀದರ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕರ ಅಡಗುದಾಣಗಳ ಮೇಲೆ ಭಾರತೀಯ ಸೈನಿಕರು ವಾಯುದಾಳಿ ನಡೆಸಿರುವುದಕ್ಕೆ ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಿದರು.

ಜಿಲ್ಲಾ ಬಿಜೆಪಿ: ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಪರಸ್ಪರ ಸಿಹಿ ಹಂಚಿಕೊಂಡು ವಿಜಯೋತ್ಸವ ಆಚರಿಸಿದರು. ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಹಾಕಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಧರ್ಮ ಕೇಳಿ ಪ್ರವಾಸಿಗರ ಹತ್ಯೆ ಮಾಡಿದ್ದು ಖಂಡನಾರ್ಹ. ಅದರ ಬಗ್ಗೆ ವಿಶ್ವಸಂಸ್ಥೆ ಕೂಡ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದೆ. ಈಗ ಭಾರತೀಯ ಸೈನಿಕರು ಉಗ್ರರ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿ, ಅದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.

ADVERTISEMENT

ಭಯೋತ್ಪಾದಕರ ಅಡಗುದಾಣಗಳ ಮೇಲೆ ದಾಳಿ ನಡೆಸಲಾಗಿದೆ ಹೊರತು ನಾಗರಿಕರಾಗಲಿ, ಪಾಕಿಸ್ತಾನದ ಮಿಲಿಟರಿ ಮೇಲೆ ದಾಳಿ ನಡೆಸಿಲ್ಲ. ಭಾರತೀಯರ ಹತ್ಯೆಗೆ ಕಾರಣರಾದವರನ್ನು ಮಾತ್ರ ಗುರಿಯಾಗಿರಿಸಿ ದಾಳಿ ನಡೆಸಲಾಗಿದೆ ಎಂದರು.

ಕಾಶ್ಮೀರದಲ್ಲಿ ದಾಳಿ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಗೊತ್ತಿದ್ದರೂ ಅವರೇಕೆ ರಕ್ಷಣೆ ಮಾಡಲಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ. ಡೋಂಗಿ ಜಾತ್ಯತೀತ ನಾಯಕರೆನಿಸಿಕೊಂಡಿರುವ ಸಿದ್ದರಾಮಯ್ಯನವರು ಯುದ್ಧ ಬೇಡ ಶಾಂತಿ ಬೇಕು ಎಂದು ಹೇಳುತ್ತಿದ್ದರು. ಆದರೆ, ಇಂದು ಕರ್ನಲ್‌ ಸೋಫಿಯಾ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ನಿಜವಾದ ಜಾತ್ಯತೀತರು ಪ್ರಧಾನಿ ಮೋದಿ ಎಂದು ಹೇಳಿದರು.

ಕೇಂದ್ರದ ಮಾಜಿಸಚಿವ ಭಗವಂತ ಖೂಬಾ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಪಕ್ಷದ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಮುಖಂಡರಾದ ಈಶ್ವರ ಸಿಂಗ್‌ ಠಾಕೂರ್‌, ಬಾಬುವಾಲಿ, ಶಕುಂತಲಾ ಬೆಲ್ದಾಳೆ, ಹಣಮಂತ, ಮಾಶೆಟ್ಟಿ, ವೀರು ದಿಗ್ವಾಲ್‌ ಮತ್ತಿತರರು ಪಾಲ್ಗೊಂಡಿದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ): ಪರಿಷತ್ತಿನ ಕಾರ್ಯಕರ್ತರು ನಗರದ ಹೆಣ್ಣು ಮಗು ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. ಭಾರತೀಯ ಸೈನಿಕರ ಪರ ಘೋಷಣೆ ಕೂಗಿದರು.

ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ ಮಾತನಾಡಿ, ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕೆನ್ನುವುದು ಭಾರತೀಯರ ಒತ್ತಾಯವಾಗಿತ್ತು. ಅದಕ್ಕೆ ತಕ್ಕಂತೆ ನಮ್ಮ ಸೇನಾಪಡೆ ಕ್ರಮ ಕೈಗೊಂಡಿರುವುದು ಭಾರತೀಯರೆಲ್ಲರಿಗೂ ಖುಷಿ ತಂದಿದೆ. ಉಗ್ರರಿಗೆ ಉತ್ತಮ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

ಮಂಗಳವಾರ ಮಧ್ಯರಾತ್ರಿ ಉಗ್ರಗಾಮಿಗಳ ತಾಣದ ಮೇಲೆ ಕಾರ್ಯಾಚರಣೆ ನಡೆಸಿರುವುದು ಪ್ರತಿಯೊಬ್ಬರ ಭಾರತೀಯರ ಪಾಲಿಗೆ ಸಂಭ್ರಮದ ದಿನ. ಎಲ್ಲರೂ ಈ ಸಂದರ್ಭದಲ್ಲಿ ಸೇನೆಯ ಜೊತೆಗೆ ನಿಲ್ಲಬೇಕು ಎಂದು ತಿಳಿಸಿದರು.

ಎಬಿವಿಪಿ ನಗರ ಘಟಕದ ಕಾರ್ಯದರ್ಶಿ ಆನಂದ, ಸಹ ಕಾರ್ಯದರ್ಶಿ ನಾಗರಾಜ, ರಾಜ್ಯ ಕಾರ್ಯಕಾರಿಣಿ ಸದಸ್ಯ ಲಿಂಗದೇವ ಗುತ್ತಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಬಿವಿಪಿ ಕಾರ್ಯಕರ್ತರು ಬೀದರ್‌ನ ಹೆಣ್ಣು ಮಗು ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.