
ಔರಾದ್: ಇಲ್ಲಿಯ ಅಮರೇಶ್ವರ ಜಾತ್ರೆ ಅಂಗವಾಗಿ ಸೋಮವಾರ ನಡೆದ ಅಗ್ನಿ ಪೂಜೆಗೆ ಭಕ್ತರ ಮಹಾಪೂರವೇ ಹರಿದು ಬಂತು.
ಈ ಬಾರಿಯ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಜಾಸ್ತಿ ಇರುವುದರಿಂದ ಅಮರೇಶ್ವರರ ಪಲ್ಲಕಿ ಮೆರವಣಿಗೆ ಅಗ್ನಿ ಕುಂಡಕ್ಕೆ ತಡವಾಗಿ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಅಗ್ನಿ ಕುಂಡದ ಸುತ್ತ ಜಮಾಯಿಸಿದ ಅಪಾರ ಭಕ್ತ ಸಮೂಹದ ನಡುವೆ ಸಾಂಪ್ರದಾಯಿಕ ಪೂಜೆ ನಡೆಸಿ ಅಗ್ನಿ ಹೊತ್ತಿಸಲಾಯಿತು.
ಈ ವೇಳೆ ‘ಓಂ ಭಲಾ ಶಂಕರ ಭಲಾ', ‘ಓಂ ನಮಃ ಶಿವಾಯ’, ‘ಅಮರೇಶ್ವರ ಮಹಾರಾಜ್ ಕಿ ಜೈ’ ಎಂಬ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ನೂಕು ನುಗ್ಗಲಿನ ನಡುವೆ ಜನ ಅಗ್ನಿಗೆ ಸುತ್ತು ಹಾಕಿ ಭಕ್ತಿ ಭಾವ ಮೆರೆದರು. ಕುಟುಂಬ ಸಮೇತ ಆಗಮಿಸಿದ ಭಕ್ತರು ಸುಖ–ಶಾಂತಿ, ರೋಗ ನಿವಾರಣೆ ಹಾಗೂ ಸಂಕಷ್ಟ ನಿವಾರಣೆಯ ಆಶಯದಿಂದ ಪೂಜೆ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮೀಣ ಪರಂಪರೆ ಮತ್ತು ನಂಬಿಕೆಯ ಸಂಕೇತವಾದ ಈ ಅಗ್ನಿ ಪೂಜೆ ಶಿವನ ಮೇಲಿನ ಭಕ್ತರ ಅಚಲ ವಿಶ್ವಾಸವನ್ನು ತೋರಿಸಿತು. ಯಾವುದೇ ಭಯವಿಲ್ಲದೆ ಭಕ್ತರು ಅಗ್ನಿ ಜ್ವಾಲೆಯ ಸುತ್ತ ನಡೆದು ದೇವರ ಕೃಪೆಗೆ ಅರ್ಹರಾಗುವ ದೃಶ್ಯವನ್ನು ನೋಡಲು ಸಹಸ್ರಾರು ಜನ ಸಾಕ್ಷಿಯಾದರು.
ಅಗ್ನಿ ಪೂಜೆಗೂ ಮುನ್ನ ನಸುಕಿನಲ್ಲಿ ಅಮರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆ ಹೊರಟಿತು. ದಾರಿಯುದ್ದಕ್ಕೂ ಭಕ್ತರು ರಂಗೋಲಿ ಹಾಕಿ ಮೆರವಣಿಗೆ ಬರಮಾಡಿಕೊಂಡರು. ಅಮರೇಶ್ವರನಿಗೆ ಕಾಯಿ ಒಡೆದು, ಶಲ್ಯ ತೊಡಿಸಿ ತಮ್ಮ ಇಷ್ಟಾರ್ಥ ಪೂರೈಸಿದರು. ಡೊಳ್ಳು ಕುಣಿತ, ಭಜನೆ, ಜಾನಪದ ನೃತ್ಯ ಮೆರವಣಿಗೆಯ ಕಳೆ ಹೆಚ್ಚಿಸಿತ್ತು.
ಶಾಸಕ ಪ್ರಭು ಚವಾಣ್, ತಹಶೀಲ್ದಾರ್ ಮಹೇಶ ಪಾಟೀಲ, ತಾ.ಪಂ. ಇಒ ಕಿರಣ ಪಾಟೀಲ, ನ್ಯಾಯಾಧೀಶ ಶಿವಕುಮಾರ ದೇಶಮುಖ, ಮುಖಂಡ ಬಸವರಾಜ ದೇಶಮುಖ, ಸುನೀಲಕುಮಾರ ದೇಶಮುಖ, ಡಾ. ಶಂಕರರಾವ ದೇಶಮುಖ, ಶಿವರಾಜ ಅಲ್ಮಾಜೆ, ಧೊಂಡಿಬಾ ನರೋಟೆ, ಖಂಡೋಬಾ ಕಂಗಟೆ, ರಾಮಶೆಟ್ಟಿ ಪನ್ನಾಳೆ, ರಾಮ ನರೋಟೆ, ಶರಣಪ್ಪ ಪಾಟೀಲ, ದೇವಿಪ್ರಸಾದ ಘೋಡ್ಕೆ ಸೇರಿದಂತೆ ಅನೇಕರು ಇದ್ದರು.
ಸಂಸದ ಸಾಗರ್ ಖಂಡ್ರೆ, ಭೀಮಸೇನರಾವ ಸಿಂಧೆ ಮತ್ತಿತರರು ಭಾನುವಾರ ರಾತ್ರಿ ಅಮರೇಶ್ವರ ದರ್ಶನ ಪಡೆದರು. ಸಿಪಿಐ ರಘುವೀರಸಿಂಗ್ ಠಾಕೂರ್ ನೇತೃತ್ವದಲ್ಲಿ ಎಲ್ಲ ಕಡೆ ಪೊಲೀಸ್ ಭದ್ರತೆ ಮಾಡಲಾಗಿದೆ. ಆಗಮಿಸಿದ ಭಕ್ತರಿಗೆ ಅಲ್ಲಲ್ಲಿ ನೀರು ಹಾಗೂ ಪ್ರಸಾದ ವ್ಯವಸ್ಥೆಯೂ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.