ADVERTISEMENT

ಔರಾದ್: ಆಕಸ್ಮಿಕ ಬೆಂಕಿಗೆ 11 ಅಂಗಡಿಗಳು ಭಸ್ಮ, ₹1.50 ಕೋಟಿಗೂ ಹೆಚ್ಚು ಹಾನಿ 

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 5:03 IST
Last Updated 11 ಜನವರಿ 2026, 5:03 IST
ಔರಾದ್ ಪಟ್ಟಣದಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಸುಟ್ಟು ಹಾನಿಯಾದ ಅಂಗಡಿಗಳಿಗೆ ತಹಶೀಲ್ದಾರ್ ಮಹೇಶ್ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು
ಔರಾದ್ ಪಟ್ಟಣದಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಸುಟ್ಟು ಹಾನಿಯಾದ ಅಂಗಡಿಗಳಿಗೆ ತಹಶೀಲ್ದಾರ್ ಮಹೇಶ್ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು   

ಔರಾದ್: ಪಟ್ಟಣದ ಬಸ್ ನಿಲ್ದಾಣ ಎದುರು ಶನಿವಾರ ನಸುಕಿನ ಜಾವ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ 11 ಅಂಗಡಿಗಳು ಸುಟ್ಟು ಭಸ್ಮವಾಗಿದೆ. ಅಂಗಡಿಗಳಲ್ಲಿ ಇದ್ದ ಕೋಟ್ಯಂತರ ರೂಪಾಯಿ ವಸ್ತುಗಳು ಹಾನಿಯಾಗಿದೆ.

ವ್ಯಾಪಾರಿಗಳಾದ ಅನೀಲ ಮೀಸೆ, ಪ್ರಲ್ಹಾದ್, ಶಿವಕಾಂತ ಜೋಶಿ ಹಾಗೂ ಅರ್ಜುನ, ಜಗನ್ನಾಥ ಚಿಟ್ಮೆ ಅವರ ಬಾಂಡೆ ಅಂಗಡಿಯಲ್ಲಿನ ಲೋಹದ ಪಾತ್ರೆಗಳು, ತಾಮ್ರ, ಹಿತ್ತಾಳೆ, ಸ್ಟೀಲ್, ಅಲ್ಯೂಮಿನಿಯಂ ಸೇರಿದಂತೆ ಮನೆ ಬಳಕೆ ಸಾಮಗ್ರಿಗಳೆಲ್ಲವೂ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿವೆ.

ಶಿವಶಂಕರ ಮೀಸೆ ಅವರ ಹಾರ್ಡ್ವೇರ್ ಅಂಗಡಿ, ಮಹಮ್ಮದ್‌ ಲಾಲ್‌ಅಹ್ಮದ್ ಅವರ ತರಕಾರಿ ಅಂಗಡಿ, ಸುನೀಲ ಜೋಶಿ ಅವರ ಫರ್ನಿಚರ್ ಅಂಗಡಿ, ತಾನಾಜಿ ಫುಟವೇರ್, ಸತೀಶ ಹಾಗೂ ಬಾಲಾಜಿ ಅವರ ಕಿರಾಣಾ ಅಂಗಡಿಯಲ್ಲಿನ ಸಾಮಗ್ರಿಗಳು ಸುಟ್ಟು ಕರಕಲಾಗಿದೆ.

ADVERTISEMENT

‘ಅಂಗಡಿಗಳಿಗೆ ಬೆಂಕಿ ಹತ್ತಿರುವುದನ್ನು ಗಮನಿಸಿ ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸುದ್ದಿ ಮುಟ್ಟಿಸಲಾಗಿದೆ. ಒಂದು ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸುವಷ್ಟರಲ್ಲಿ ವಾಹನದಲ್ಲಿನ ನೀರು ಮುಗಿದು ಹೋಗಿದೆ. ನಂತರ ನೀರು ತುಂಬಿಕೊಂಡು ಬರುವಷ್ಟರಲ್ಲಿ ಎಲ್ಲ ಅಂಗಡಿಗಳು ಸುಟ್ಟು ಕರಕಲಾಗಿತ್ತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ತಹಶೀಲ್ದಾರ್ ಮಹೇಶ್ ಪಾಟೀಲ, ಸಿಪಿಐ ರಘುವೀರಸಿಂಗ್ ಠಾಕೂರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಂತ್ರಸ್ತ ಅಂಗಡಿ ಮಾಲೀಕರಿಗೆ ಸಾಂತ್ವನ ಹೇಳಿದ್ದಾರೆ.

ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದಾಗಿ ತಲಾ ಒಂದೊಂದು ಅಂಗಡಿಗಳಲ್ಲಿ ಅಂದಾಜು ₹ 10 ರಿಂದ ₹15 ಲಕ್ಷ ಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಹಾನಿಯಾಗಿದೆ ಎನ್ನುತ್ತಾರೆ ಪ್ರತ್ಯೇಕದರ್ಶಿಗಳು.

‘ಪೊಲೀಸರು ಸಮಗ್ರ ಮಾಹಿತಿ ಸಂಗ್ರಹಿಸಲಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಈ ಘಟನೆ ನಡೆದಿದೆ ಎಂಬುದು ಗೊತ್ತಾಗಿದೆ’ ಎಂದು ತಹಶೀಲ್ದಾರ್ ಮಹೇಶ ಪಾಟೀಲ ತಿಳಿಸಿದ್ದಾರೆ.

ಈ ಘಟನೆಯಿಂದ ಅಂಗಡಿ ಮಾಲೀಕರಿಗೆ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಘಟನಾ ಸ್ಥಳದಲ್ಲಿ ಅಂಗಡಿ ಮಾಲೀಕರು, ಕುಟುಂಬಸ್ಥರು, ಮಹಿಳೆಯರು ಕಣ್ಣೀರಿಟ್ಟರು.

ಔರಾದ್ ಪಟ್ಟಣದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಂಗಡಿಯಲ್ಲಿನ ಸಾಮಾನುಗಳು ಸುಟ್ಟು ಭಸ್ಮವಾಗಿರುವುದು
ಆಕಸ್ಮಿಕ ಅಗ್ನಿ ಅವಘಡದಲ್ಲಿ ವ್ಯಾಪಾರಿಗಳಿಗೆ ಭಾರಿ ನಷ್ಟವಾಗಿದೆ. ಪಟ್ಟಣದಲ್ಲಿ ಒಂದೇ ಅಗ್ನಿಶಾಮಕ ವಾಹನ ಇರುವುದರಿಂದ ಬೆಂಕಿ ನಂದಿಸಲು ಸಾಧ್ಯವಾಗದೆ ಹೆಚ್ಚು ಹಾನಿಯಾಗಿದೆ. ಸರ್ಕಾರ ಸಂತ್ರಸ್ತ ವ್ಯಾಪಾರಿಗಳ ನೆರವಿಗೆ ಬರಬೇಕು
ಅನೀಲ ಮೀಸೆ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.