ADVERTISEMENT

ಔರಾದ್: ಭಾರಿ ಮಳೆಗೆ ಜನತೆ ತತ್ತರ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 6:45 IST
Last Updated 20 ಆಗಸ್ಟ್ 2025, 6:45 IST
ಔರಾದ್ ತಾಲ್ಲೂಕಿನಲ್ಲಿ ಭಾರಿ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್., ಉಪ ಕೃಷಿನಿರ್ದೇಶಕ ಮಹಮ್ಮದ್ ಅನ್ಸಾರಿ ಭೇಟಿ ನೀಡಿ ಪರಿಶೀಲಿಸಿದರು 
ಔರಾದ್ ತಾಲ್ಲೂಕಿನಲ್ಲಿ ಭಾರಿ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್., ಉಪ ಕೃಷಿನಿರ್ದೇಶಕ ಮಹಮ್ಮದ್ ಅನ್ಸಾರಿ ಭೇಟಿ ನೀಡಿ ಪರಿಶೀಲಿಸಿದರು    

ಔರಾದ್: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತಾಲ್ಲೂಕಿನ ರೈತರು, ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಭಾನುವಾರ ಸುರಿದ ಮಳೆಗೆ ಬೊಂತಿ ಕೆರೆ ಒಡೆದು ಸುತ್ತಲಿನ ಗ್ರಾಮಗಳಲ್ಲಿ ಅವಾಂತರ ಸೃಷ್ಟಿಸಿದೆ. ಬೊಂತಿ, ಭಂಡಾರಕುಮಟಾ, ಬಾವಲಗಾಂವ್, ಖೇರ್ಡಾ, ಹಂಗರಗಾ ಸೇರಿದಂತೆ ಹಲವು ಗ್ರಾಮಗಳ ಹೊಲಗಳು ಜಲಾವೃತವಾಗಿವೆ. ಕಟಾವಿಗೆ ಬಂದ ಹೆಸರು, ಉದ್ದು ಸೇರಿದಂತೆ ಮುಂಗಾರು ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

‘ಮಳೆ ಅವಾಂತರದಿಂದ 1500 ಹೆಕ್ಟೇರ್‌ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬಾವಲಗಾಂವ್ ಗ್ರಾಮದಲ್ಲಿ ನೀರು ನುಗ್ಗಿ 19 ಮನೆಗಳಿಗೆ ಹಾನಿಯಾಗಿದೆ. ಮೂರು ಸೇತುವೆಗಳು ಕುಸಿದು ಬಿದ್ದಿವೆ. ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್‌ಗೂ ಹಾನಿಯಾಗಿದೆ’ ಎಂದು ತಹಶೀಲ್ದಾರ್ ಮಹೇಶ ಪಾಟೀಲ್ ತಿಳಿಸಿದ್ದಾರೆ.

‘ಮೂರು ದಿನ ಸುರಿದ ಮಳೆಗೆ ದಾಬಕಾ ಹೋಬಳಿಯಲ್ಲಿ ಹೆಚ್ಚು ಹಾನಿಯಾಗಿದೆ. ಉಳಿದಂತೆ ಚಿಂತಾಕಿ ಹೋಬಳಿಯ ಕೆಲ ಗ್ರಾಮಗಳಲ್ಲೂ ಹಾನಿಯಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ತಿಳಿಸಿದ್ದಾರೆ.

ADVERTISEMENT

ಜಂಟಿ ಕೃಷಿ ನಿರ್ದೇಶಕರ ಭೇಟಿ: ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್., ಉಪ ಕೃಷಿ ನಿರ್ದೇಶಕ ಮಹಮ್ಮದ್ ಅನ್ಸಾರಿ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ‘ನಾವು ಕಷ್ಟಪಟ್ಟು ಹೆಸರು, ಉದ್ದು, ಸೋಯಾ ಬೆಳೆಸಿದ್ದೇವೆ. ಆದರೆ ಮಳೆ ಬಂದು ಎಲ್ಲ ಕೊಚ್ಚಿಕೊಂಡು ಹೋಗಿದೆ’ ಎಂದು ಬಾವಲಗಾಂವ್ ಗ್ರಾಮಸ್ಥರು ಕೃಷಿ ಅಧಿಕಾರಿಗಳ ಎದುರು ಗೋಳು ತೊಡಿಕೊಂಡರು.

‘ಮಳೆಯಿಂದ ದಾಬಕಾ ಹೋಬಳಿ ಸೇರಿದಂತೆ ಮಾಂಜ್ರಾ ನದಿ ತೀರದ ಗ್ರಾಮಗಳು, ತಗ್ಗು ಪ್ರದೇಶದ ಹೊಲಗಳ ಬೆಳೆ ಹಾಳಾಗಿದೆ. ಸಮರ್ಪಕವಾಗಿ ಸರ್ವೆ ಮಾಡಿ ಹಾನಿಯಾದ ಎಲ್ಲ ರೈತರಿಗೆ ಪರಿಹಾರ ಕೊಡಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. 

ಔರಾದ್ ತಾಲ್ಲೂಕಿನ ಬೊಂತಿ ಬಾವಲಗಾಂವ್ ಗ್ರಾಮಗಳ ಹೊಲದಲ್ಲಿ ನೀರು ನಿಂತಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.