
ಔರಾದ್: ತಾಲ್ಲೂಕಿನ ನಾಗಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. 1ರಿಂದ 7ನೇ ತರಗತಿ ವರೆಗಿನ ಈ ಶಾಲೆಯಲ್ಲಿ 140 ವಿದ್ಯಾರ್ಥಿಗಳಿದ್ದಾರೆ. ಎಲ್ಲರಿಗೂ ಶಾಲೆಯಲ್ಲಿ ಕುಡಿಯಲು ನೀರು ಸಿಗದೆ ಮನೆಯಿಂದ ತರಬೇಕಾಗಿದೆ.
ಶಾಲಾ ಆವರಣದಲ್ಲಿ ಜಲ ಜೀವನ್ ಮಿಷನ್‌ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಶಾಲೆ ಆರಂಭವಾಗುವ ಮೊದಲೇ ನೀರು ಬಂದು ಹೋಗುತ್ತದೆ. ಹೀಗಾಗಿ ಶಾಲೆಗೆ ಈ ನೀರು ಉಪಯೋಗವಾಗುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಶುದ್ಧ ನೀರು ಪೂರೈಸುವಂತೆ ಶಾಲೆ ಮಕ್ಕಳು ಎರಡು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಕೊಳವೆ ಬಾವಿ ಕೊರೆಸಿ ಶುದ್ಧ ನೀರಿನ ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯ ತನಕ ಕ್ಯಾನ್ ಮೂಲಕ ಎಲ್ಲ ಮಕ್ಕಳಿಗೆ ಕಡಿಯಲು ನೀರು ಪೂರೈಸಲು ಭರವಸೆ ನೀಡಿದರು. ಆದರೆ ಈ ಕ್ಯಾನ್ ನೀರು ಮಕ್ಕಳಿಗೆ ನಿತ್ಯ ಸಿಗುತ್ತಿಲ್ಲ. ಅನೇಕ ಮಕ್ಕಳು ಮನೆಯಿಂದಲೇ ಕುಡಿಯಲು ನೀರು ತರಬೇಕಾಗಿದೆ ಎಂದು ನಾಗಮಾರಪಳ್ಳಿ ನಿವಾಸಿ ಧನರಾಜ ಕಾಂಬಳೆ ತಿಳಿಸಿದ್ದಾರೆ.
ನಮ್ಮ ಶಾಲೆಯಲ್ಲಿ ಕುಡಿಯುವ ನೀರು ಬಿಟ್ಟರೆ ಬೇರೆ ಯಾವುದೇ ಸಮಸ್ಯೆ ಇಲ್ಲ. ಜೆಜೆಎಂ ನೀರಿನ ಸಂಪರ್ಕ ಇದ್ದರೂ ಅದೂ ನಮಗೆ ಉಪಯೋಗಕ್ಕೆ ಬರುತ್ತಿಲ್ಲ. ಹೀಗಾಗಿ ಕೊಳವೆ ಬಾವಿ ಹಾಗೂ ಶುದ್ಧ ನೀರಿನ ಘಟಕ ಅಳವಡಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಶಾಲೆ ಶಿಕ್ಷಕರು ಹೇಳುತ್ತಾರೆ. ನೀರಿನ ಕೊರತೆಯಿಂದ ಶೌಚಾಲಯ ಬಳಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ನಾಗಮಾರಪಳ್ಳಿ ಶಾಲೆ ಆವರಣದಲ್ಲಿ ಕೊಳವೆ ಬಾವಿ ಮಂಜೂರಾಗಿದೆ. ತಜ್ಞರನ್ನು ಕರೆಸಿ ನೀರು ಇರುವ ಬಗ್ಗೆ ಖಾತರಿ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಕೊಳವೆ ಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗುವುದು.– ಕಿರಣ ಪಾಟೀಲ, ಔರಾದ್ ತಾ.ಪಂ ಇಒ
ಶಾಲಾ ಮಕ್ಕಳಿಗೆ ಶುದ್ಧ ಕುಡಿಯವ ನೀರಿನ ವ್ಯವಸ್ಥೆ ಮಾಡುವಂತೆ ನಾವು ಶಾಸಕ ಪ್ರಭು ಚವಾಣ್ ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಕೆಲ ದಿನ ಕ್ಯಾನ್ ನೀರು ಕೊಟ್ಟಿದ್ದಾರೆ. ಈಗ ಅದನ್ನೂ ಕೊಡುತ್ತಿಲ್ಲ.– ಧನರಾಜ ಕಾಂಬಳೆ, ನಾಗಮಾರಪಳ್ಳಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.