ADVERTISEMENT

18ರಂದು ಬಾಬಾರಾವ ಶಿಂದೆ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 6:58 IST
Last Updated 30 ಡಿಸೆಂಬರ್ 2025, 6:58 IST
ಭಾಲ್ಕಿ ಪಟ್ಟಣದ ಶಿವಾಜಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಭಾಲ್ಕಿ ಪಟ್ಟಣದ ಶಿವಾಜಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು   

ಭಾಲ್ಕಿ: ವಕೀಲರಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿ, ಸಾವಿರಾರು ಬಡ ಮಕ್ಕಳ ಬಾಳಿನಲ್ಲಿ ವಿದ್ಯೆಯ ಬೆಳಕು ಚೆಲ್ಲಿದ ಕಿಸಾನ್‌ ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷ ದಿ.ಬಾಬಾರಾವ ಶಿಂದೆ ಹೊನ್ನಾಳಿಕರ ಪುತ್ಥಳಿ ಅನಾವರಣ ಹಾಗೂ ಕೆಎಸ್‍ಪಿ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವವನ್ನು ಜ.18ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಶಿವಾಜಿ ಪಿಯು ಕಾಲೇಜಿನಲ್ಲಿ ಕೆಎಸ್‍ಪಿ ಮಂಡಳದ ಅಧ್ಯಕ್ಷ ಬಾಬಾರಾವ ಶಿಂದೆ ಹೊನ್ನಾಳಿಕರ ಪುತ್ಥಳಿ ಅನಾವರಣದ ಅಂಗವಾಗಿ ಕರೆದ ಪೂರ್ವಭಾವಿ ಸಭೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಬಾಬಾರಾವ ಅವರು ಗಡಿ ಭಾಗದಲ್ಲಿ ಶಿಕ್ಷಣ ಸಂಸ್ಥೆ ತೆರೆದು ಕನ್ನಡ, ಮರಾಠಿ ಮಾಧ್ಯಮದ ಮಕ್ಕಳಿಗೆ ಗುಣಾತ್ಮಕ, ಸಂಸ್ಕಾರಭರಿತ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಅವರ ಸ್ಮರಣಾರ್ಥವಾಗಿ ಕಾಲೇಜಿನ ಆವರಣದಲ್ಲಿ ಪಂಚಲೋಹದಿಂದ ತಯಾರಿಸಿದ ಅವರ ಪುತ್ಥಳಿ ಜ.18ರಂದು ಅನಾವರಣಗೊಳಿಸುತ್ತಿರುವುದು ಅತ್ಯಂತ ಖುಷಿ ಮತ್ತು ಅಭಿಮಾನದ ಸಂಗತಿಯಾಗಿದೆ. ಕಾರ್ಯಕ್ರಮದ ಯಶಸ್ವಿಗೆ ಅಗತ್ಯ ನೆರವು ನೀಡಲು ನಾನು ಸದಾ ಸಿದ್ಧನಿದ್ದೇನೆ’ ಎಂದು ಹೇಳಿದರು.

ADVERTISEMENT

‘ಕಾಲೇಜಿನ ಸುತ್ತ ರಸ್ತೆ, ಚರಂಡಿ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು. ಕೆಎಸ್‍ಪಿ ಮಂಡಳದ ಅಧ್ಯಕ್ಷ ಅನಿಲ ಶಿಂದೆ ಮಾತನಾಡಿ, ಪಕ್ಷಾತೀತವಾಗಿ, ರಾಜಕೀಯರಹಿತವಾಗಿ ನಡೆಯುವ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮಕ್ಕೆ ಕರ್ನಾಟಕ, ಮಹಾರಾಷ್ಟ್ರದ ಪೂಜ್ಯರನ್ನು, ರಾಜಕೀಯ ಧುರಿಣರನ್ನು ಆಮಂತ್ರಿಸಲಾಗುವುದು. ಕಾರ್ಯಕ್ರಮದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು’ ಎಂದು ತಿಳಿಸಿದರು.

ಸಂಸ್ಥೆ ಕಾರ್ಯದರ್ಶಿ ಡಾ.ಪ್ರಕಾಶ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ರಘುನಾಥರಾವ ಜಾಧವ, ಪ್ರಮುಖರಾದ ಡಿಗಂಬರರಾವ ಮಾನಕರಿ, ಅಶೋಕರಾವ ಸೂರ್ಯವಂಶಿ, ಪ್ರತಾಪರಾವ ಪಾಟೀಲ, ಗೋವಿಂದರಾವ ಘಾಟಗೆ, ಶಿವಾಜಿರಾವ ಪಾಟೀಲ, ವಿಜಯಕುಮಾರ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಎಂಜಿನಿಯರ್ ಮಹಾದೇವ ಮಮ್ಮಾಡಿ, ಜಿ.ಬಿರಾದಾರ, ನಿವೃತ್ತ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.