ADVERTISEMENT

ಅವಹೇಳನಕಾರಿ ಪೋಸ್ಟ್: ಬಸವಕಲ್ಯಾಣ ಬಂದ್

ಬಸವಕಲ್ಯಾಣ: ಮುಸ್ಲಿಂ ಸಮುದಾಯದವರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 5:16 IST
Last Updated 15 ಜೂನ್ 2022, 5:16 IST
ಬಸವಕಲ್ಯಾಣ ಬಂದ್‌ ಕಾರಣ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು
ಬಸವಕಲ್ಯಾಣ ಬಂದ್‌ ಕಾರಣ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು   

ಬಸವಕಲ್ಯಾಣ: ಪ್ರವಾದಿ ಮಹಮ್ಮದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವುದನ್ನು ಖಂಡಿಸಿ ನಗರದಲ್ಲಿ ಮಂಗಳವಾರ ಮುಸ್ಲಿಂ ಸಮುದಾಯದವರು ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಈ ಪೋಸ್ಟ್ ವಾಟ್ಸ್‌ಆ್ಯಪ್‌ ಗುಂಪೊಂದರಲ್ಲಿ ಸೋಮವಾರವೇ ಹರಿದಾಡಿತ್ತು. ಇದನ್ನು ಕಂಡು ಕೆರಳಿದ ಮುಸ್ಲಿಂ ಸಮಾಜದವರು ಅಂದು ಮಧ್ಯರಾತ್ರಿ ಪೊಲೀಸ್ ಠಾಣೆಯ ಎದುರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಕಾರಣ ಪ್ರಕ್ಷುಬ್ ಪರಿಸ್ಥಿತಿ ಉಂಟಾಗಿತ್ತು.

ಡಿವೈಎಸ್ಪಿ ಸೋಮಲಿಂಗ ಕುಂಬಾರ ಹಾಗೂ ಇತರ ಪೊಲೀಸ್ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಜನರ ಮನವೊಲಿಸಿದರು. ಆರೋಪಿಯನ್ನು ಬಂಧಿಸಿ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಯಾವುದೇ ಕಾರಣಕ್ಕೂ ಅಶಾಂತಿ ಉಂಟು ಮಾಡಬಾರದು. ಅನಾಹುತ ನಡೆಯದಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿದರು. ಕಾರಣ ಪರಿಸ್ಥಿತಿ ಶಾಂತಗೊಂಡಿತು.ಆದರೂ ಮತ್ತೆ ಮರುದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಬಸವಕಲ್ಯಾಣ ಬಂದ್‌ಗೆ ಕರೆ ನೀಡಲಾಗಿತ್ತು. ಮುಸ್ಲಿಂ ಸಮುದಾಯದವರಿಗೆ ಸೇರಿದ ಅಂಗಡಿಗಳು ಹಾಗೂ ಗ್ಯಾರೇಜ್‌ಗಳು ಮಾತ್ರ ಬಂದ್ ಆಗಿದ್ದವು. ಬಂದ್ ಶಾಂತಿಯುತವಾಗಿತ್ತು.

ಬಂಧನ: ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ ಎನ್ನಲಾದ ಆರೋಪಿ ರಾಜಕುಮಾರ ಮಜಗೆಯನ್ನು ರಾತ್ರಿಯೇ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.