ಬಸವಕಲ್ಯಾಣ: ನಗರದಲ್ಲಿ ಬಸವಜಯಂತಿ ಮತ್ತು ಬಸವೇಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ಬುಧವಾರ ಆನೆಯ ಮೇಲೆ ಬಸವಣ್ಣನವರ ಪ್ರತಿಮೆಯನ್ನಿಟ್ಟು ಅದ್ದೂರಿ ಮೆರವಣಿಗೆ ನಡೆಸಲಾಯಿತು. ಎಲ್ಲೆಲ್ಲೂ ಬಸವ ನಾಮ ಮೊಳಗಿತು.
ಪುಷ್ಪಗಳಿಂದ ಸಿಂಗರಿಸಿದ ರಥದಲ್ಲಿ ಬಸವಣ್ಣನವರ ಪ್ರತಿಮೆ ಇರುವ ಬೆಳ್ಳಿಯ ತೊಟ್ಟಿಲು ಇಡಲಾಗಿತ್ತು. ಬಸವಣ್ಣನವರ ವೇಷಧಾರಿ ಕುದುರೆಯ ಮೇಲೆ ಕುಳಿತಿದ್ದರು. ಇತರೇ ಶರಣರ ವೇಷ ತೊಟ್ಟಿದ್ದ ಮಕ್ಕಳು ತೆರೆದ ವಾಹನದಲ್ಲಿ ಆಸೀನರಾಗಿದ್ದರು. ವಚನ ಪಿತಾಮಹ ಫ.ಗು.ಹಳಕಟ್ಟಿ ಮತ್ತು ಬಸವೇಶ್ವರ ದೇವಸ್ಥಾನ ಸಮಿತಿ ಸಂಸ್ಥಾಪಕ ದಿ.ಬಾಬಾಸಾಹೇಬ್ ವಾರದ್ ಅವರ ಭಾವಚಿತ್ರಗಳನ್ನೂ ಪ್ರತ್ಯೇಕ ವಾಹನಗಳಲ್ಲಿ ಕೊಂಡೊಯ್ಯಲಾಯಿತು.
ಡೋಲ್, ಲಂಬಾಣಿ ನೃತ್ಯ, ಡೊಳ್ಳು ಕುಣಿತ, ಭಜನಾ ತಂಡ, ಹಲಿಗೆ ವಾದನ, ಕೋಲಾಟ, ಬ್ಯಾಂಡ್ ಬಾಜಾ, ವೀರಗಾಸೆ ತಂಡದವರು ಪಾಲ್ಗೊಂಡಿದ್ದರು. ವಿವಿಧ ಸಂಘ ಸಂಸ್ಥೆಗಳವರು ಅಲ್ಲಲ್ಲಿ ಕುಡಿಯುವ ನೀರು, ತಂಪು ಪಾನೀಯ ಮತ್ತು ದಾಸೋಹದ ವ್ಯವಸ್ಥೆ ಮಾಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬಸವೇಶ್ವರ ವೃತ್ತದಲ್ಲಿ ಪೂಜೆ ನೆರವೇರಿಸಿದರು. ಶಾಸಕ ಶರಣು ಸಲಗರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಹುಲಸೂರ ಶಿವಾನಂದ ಸ್ವಾಮೀಜಿ, ತಡೋಳಾ ರಾಜೇಶ್ವರ ಶಿವಾಚಾರ್ಯರು, ಅಮೃತಾನಂದ ಸ್ವಾಮೀಜಿ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಪ್ರಮುಖರಾದ ಮಲ್ಲಿಕಾರ್ಜುನ ಚಿರಡೆ, ರಾಜಕುಮಾರ ಹೊಳಕುಂದೆ, ಶ್ರೀಕಾಂತ ಬಡದಾಳೆ, ವಿವೇಕಾನಂದ ಹೊದಲೂರೆ, ವೀರಣ್ಣ ಹಲಶೆಟ್ಟೆ, ಸುಭಾಷ ಹೊಳಕುಂದೆ, ಮಲ್ಲಯ್ಯ ಹಿರೇಮಠ, ಅಶೋಕ ನಾಗರಾಳೆ, ಕಾಶಪ್ಪ ಸಕ್ಕರಬಾವಿ, ಜಗನ್ನಾಥ ಖೂಬಾ, ಬದ್ರಿನಾಥ ಪಾಟೀಲ, ಅನಿಲಕುಮಾರ ರಗಟೆ, ರೇವಣಪ್ಪ ರಾಯವಾಡೆ, ವಿಜಯಲಕ್ಷ್ಮಿ ಗಡ್ಡೆ, ಡಾ.ಜಿ.ಎಸ್.ಭುರಳೆ, ನಾಗಯ್ಯ ಸ್ವಾಮಿ, ಶಿವರಾಜ ಶಾಶೆಟ್ಟೆ, ಗದಗೆಪ್ಪ ಹಲಶೆಟ್ಟೆ, ಸೋಮಶೇಖರ ವಸ್ತ್ರದ್, ಮಲ್ಲಿನಾಥ ಮಂಠಾಳೆ ಮತ್ತಿತರರು ಪಾಲ್ಗೊಂಡಿದ್ದರು.
ಅನುಭವ ಮಂಟಪ ವರ್ಷದಲ್ಲಿ ಪೂರ್ಣ ಮೆರವಣಿಗೆ ಬಸವೇಶ್ವರ ವೃತ್ತಕ್ಕೆ ಬಂದು ಸಭೆಯಲ್ಲಿ ರೂಪಾಂತರಗೊಂಡಾಗ ಜಿಲ್ಲಾ ಉಸ್ತುವಾರಿ ಸಚಿ ಈಶ್ವರ ಖಂಡ್ರೆ ಮಾತನಾಡಿ ‘₹620 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಕಾಮಗಾರಿ ಮುಂದಿನ ಏಪ್ರಿಲ್ ಒಳಗಾಗಿ ಪೂರ್ಣಗೊಳ್ಳುವುದು' ಎಂದರು. ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣ ಕ್ರಾಂತಿ ಸಮಸಮಾಜ ನಿರ್ಮಿಸುವುದಕ್ಕಾಗಿ ನಡೆದಿದೆ. ಜಾತಿ ಧರ್ಮದ ಆಧಾರದಲ್ಲಿ ಎಲ್ಲೆಡೆ ಕಲುಷಿತ ವಾತಾವರಣ ಕಂಡು ಬರುತ್ತಿದೆ. ಬರೀ ತತ್ವ ಹೇಳಿದರೆ ಸಾಲದು. ಅದನ್ನು ಆಚರಣೆಗೆ ತರಬೇಕು’ ಎಂದರು. ಹುಲಸೂರ ಶಿವಾನಂದ ಸ್ವಾಮೀಜಿ ಸಹ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.