
ಬಸವಕಲ್ಯಾಣ: ‘ನಗರದ ಬಸವಣ್ಣನವರ ಅರಿವಿನ ಮನೆ ಆವರಣದಲ್ಲಿನ ಶರಣ ಹಡಪದ ಅಪ್ಪಣ್ಣನವರ ಗವಿಯಲ್ಲಿ ಅನ್ಯರ ಮೂರ್ತಿ ಪ್ರತಿಷ್ಠಾಪಿಸಿರುವುದನ್ನು ಐದು ದಿನಗಳಲ್ಲಿ ತೆರವುಗೊಳಿಸದಿದ್ದರೆ ಬಸವಕಲ್ಯಾಣ ಬಂದ್ ಆಚರಿಸಲು ಹಾಗೂ ತೀವ್ರ ಹೋರಾಟ ಕೈಗೊಳ್ಳಲು ನಿರ್ಣಯಿಸಲಾಗಿದೆ' ಎಂದು ಸಮಾಜ ಸಂಘದ ರಾಜ್ಯ ಮುಖಂಡ ಈರಣ್ಣ ಹಡಪದ ಹೇಳಿದ್ದಾರೆ.
ನಗರದ ಶಿವಪುರ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಹಡಪದ ಸಮಾಜದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಹಡಪದ ಅಪ್ಪಣ್ಣನವರು ಗುರು ಬಸವಣ್ಣನವರ ಆಪ್ತ ಸಹಾಯಕರಾಗಿ ಅವರೊಂದಿಗೇ ಇರುತ್ತಿದ್ದರು. ಅವರ ವಿವಿಧ ಕಾರ್ಯಗಳಲ್ಲಿ ಕೈಜೋಡಿಸಿದ್ದರು. ಹೀಗಾಗಿ ಅರಿವಿನ ಮನೆಯ ಅವರ ಗವಿ ಪಕ್ಕದಲ್ಲೇ ಅಪ್ಪಣ್ಣನವರ ಗವಿಯೂ ಇದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಶೇಷಾಧಿಕಾರಿ ಆಗಿದ್ದ ಎಸ್.ಎಂ.ಜಾಮದಾರ ಅವರು ಇಲ್ಲಿ ಅಪ್ಪಣ್ಣನವರ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಇಲ್ಲಿನ ನಾಮಫಲಕ ತೆಗೆದು ಬೇರೆಡೆ ಇಟ್ಟಿದ್ದರು. ಆದರೆ, ಕೆಲ ದಿನಗಳ ಹಿಂದೆ ಇಲ್ಲಿ ಅನ್ಯರ ಮೂರ್ತಿ ಪ್ರತಿಷ್ಠಾಪಿಸಿ ಅನ್ಯಾಯ ಮಾಡಲಾಗಿದೆ’ ಎಂದರು.
‘ಗವಿಯು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿದೆ. ಹೀಗಿದ್ದಾಗ ಅವರ ಅನುಮತಿ ಇಲ್ಲದೆಯೇ ಮೂರ್ತಿ ಕೂಡಿಸಿರುವಾಗ ಮಂಡಳಿಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದೇಕೆ? ತಕ್ಷಣ ಈ ಕಾರ್ಯದಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಂಡು ಮೂರ್ತಿ ತೆರವುಗೊಳಿಸಬೇಕು’ ಎಂದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದತ್ತಾತ್ರಿ ಬಾಂದೇಕರ್, ತಾಲ್ಲೂಕು ಅಧ್ಯಕ್ಷ ರಾಚಪ್ಪ ಹಡಪದ, ಜಗದೀಶ ನೆಲವಾಡಕರ್, ದತ್ತಾತ್ರಿ ಮೂಲಗೆ, ಪಾಂಡುರಂಗ ಹಡಪದ, ಸಂಗಮೇಶ ಏಣಕೂರ್, ರಾಜಕುಮಾರ ಹಡಪದ, ಶಿವಾನಂದ ಜಿಂಗೆ, ಮಲ್ಲಿಕಾರ್ಜುನ ಚಿಟಗುಪ್ಪ, ಶರಣು ಮುಚಳಂಬ, ಸಿದ್ಧು ಚಿಟಗುಪ್ಪ, ಸಂತೋಷ ಬಗದುರಗಿ, ಶಂಕರ ಹಾವನೂರ, ಸೋಮನಾಥ ನೆಲವಾಡ್ಕರ್, ಸೋನಾಲಿ ನೀಲಕಂಠೆ, ಜೈಶ್ರೀ ದಾವಲಜಿ, ಮಹಾದೇವಿ ಮೂಲಗೆ, ವಿಜಯಲಕ್ಷ್ಮಿ ದಾವಲಜಿ, ಪ್ರದೀಪ ಹಡಪದ, ಗಣೇಶ, ರಾಮಲಿಂಗ, ಸುನಿಲ, ಆನಂದ ಖೇಳಗಿ, ವಿಜಯಕುಮಾರ, ವಿಠಲ್, ಬಸವರಾಜ, ನಾಗೇಶ ಬಿರಾದಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.