ADVERTISEMENT

ಬಸವಕಲ್ಯಾಣ: ಪ್ರತಿಮೆ ಪರಿಸರ ನಿರ್ವಹಣೆಯೇ ದೊಡ್ಡ ಸಮಸ್ಯೆ

ಬಸವಣ್ಣನವರ ಅತಿ ಎತ್ತರದ ಪ್ರಥಮ ಮೂರ್ತಿಯ ಸ್ಥಳದಲ್ಲಿ ಹಲವಾರು ಸಮಸ್ಯೆ

ಮಾಣಿಕ ಆರ್ ಭುರೆ
Published 24 ಮಾರ್ಚ್ 2025, 7:16 IST
Last Updated 24 ಮಾರ್ಚ್ 2025, 7:16 IST
ಸಿದ್ದರಾಮೇಶ್ವರ ಸ್ವಾಮೀಜಿ
ಸಿದ್ದರಾಮೇಶ್ವರ ಸ್ವಾಮೀಜಿ   

ಬಸವಕಲ್ಯಾಣ: ನಗರದ 108 ಅಡಿ ಎತ್ತರದ ಬಸವಣ್ಣನವರ ಪ್ರತಿಮೆಯ ಪರಿಸರದ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗಿದೆ. ಯಾವುದೇ ಭೇದವಿಲ್ಲದೆ ಎಲ್ಲ ಸಮುದಾಯದವರೂ ಭೇಟಿ ನೀಡುತ್ತಿದ್ದು, ಇಲ್ಲಿ ಯಾವಾಗಲೂ ಜನಜಂಗುಳಿ ಇರುತ್ತದೆ. ಆದರೆ ಶೌಚಾಲಯ ಮತ್ತಿತರೆ ಮೂಲ ಸೌಕರ್ಯಗಳಿಲ್ಲದೆ ಇವರೆಲ್ಲ ಪರದಾಡುವಂತಾಗಿದೆ.

ಬಸವಕಲ್ಯಾಣವು ಬಸವಾದಿ ಶರಣರ ನಾಡಾಗಿದ್ದರೂ ಇಲ್ಲಿ ಎಲ್ಲವೂ ಹಾಳಾಗಿತ್ತು. ಬಸವಾನುಯಾಯಿಗಳನ್ನು ಮತ್ತು ಭಕ್ತರನ್ನು ಸೆಳೆಯುವ ಯಾವುದೇ ಸ್ಮಾರಕ ಇದ್ದಿರಲಿಲ್ಲ. ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಆಗಿದ್ದ ಲಿಂ.ಮಾತೆ ಮಹಾದೇವಿಯವರು ಈ ಬೃಹತ್ ಪ್ರತಿಮೆ ಸ್ಥಾಪಿಸಿದರು. ಈಚೆಗೆ ಕೆಲವೆಡೆ ಇಂಥ ಮೂರ್ತಿಗಳಿದ್ದರೂ ಪ್ರಥಮವಾಗಿ ನಿರ್ಮಾಣಗೊಂಡ ಬಸವಣ್ಣನವರ ಅತಿ ಎತ್ತರದ ಪ್ರತಿಮೆಯ ಖ್ಯಾತಿ ಮಾತ್ರ ಇದಕ್ಕಿದೆ. ಇದು ಅನಾವರಣಗೊಂಡ ನಂತರದಲ್ಲಿ ಈ ಸ್ಥಳ ದೂರದೂರದವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದು ನಗರಕ್ಕೆ ದಿನವೂ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಪ್ರತಿಮೆಯ ಸುತ್ತಲಿನ 20 ಎಕರೆ ಜಾಗದಲ್ಲಿ ಸುಂದರ ಉದ್ಯಾನವೂ ಇದೆ. ಕೊಳ ಮತ್ತು ಕೆಳಗಡೆ ಪ್ರಾರ್ಥನಾ ಮಂದಿರವಿದೆ. ಶರಣರ ಕಾಯಕ ಪ್ರದರ್ಶಿಸುವ ಶರಣಗ್ರಾಮವಿದೆ. ಉದ್ದನೆಯ ಗವಿ ಕೊರೆಸಿ ಒಳಗಡೆ ವಿವಿಧ ಶರಣರ ಪ್ರತಿಮೆಗಳನ್ನು ಇಡಲಾಗಿದೆ. ಅಕ್ಕಮಹಾದೇವಿ ಮೂರ್ತಿ ಒಳಗೊಂಡಿರುವ ಕದಳಿವನ ಮರುಸೃಷ್ಟಿಸಲಾಗಿದೆ. ಎಳೆಹೂಟೆ ಶಿಕ್ಷೆಯ ಮಾದರಿಯ ಪ್ರತಿಕೃತಿ ಇದೆ. ನಿತ್ಯ ದಾಸೋಹದ ಭವನವಿದೆ.

ADVERTISEMENT

ಮುಖ್ಯವೆಂದರೆ, ಇಲ್ಲಿರುವ ಬಸವಣ್ಣ ಮತ್ತಿತರೆ ಶರಣರ ಪ್ರತಿಮೆಗಳಿಗೆ ವರ್ಷಕ್ಕೊಮ್ಮೆ ಬಣ್ಣ ಹಚ್ಚುವುದಕ್ಕಾಗಿಯೇ ಲಕ್ಷಾಂತರ ಹಣ ಖರ್ಚಾಗುತ್ತದೆ. ರಾತ್ರಿ ಸಮಯದಲ್ಲಿ ಪ್ರತಿಮೆಯ ಮೇಲೆ ಹತ್ತಾರು ಹೈಮಾಸ್ಟ್ ದೀಪಗಳ ಬೆಳಕನ್ನು ಚೆಲ್ಲಿ ಸೌಂದರ್ಯ ಹೆಚ್ಚಿಸಲಾಗುತ್ತದೆ. ಇತರೆಡೆಯೂ ವಿದ್ಯುತ್ ದೀಪಾಲಂಕಾರ ಇರುತ್ತದೆ. ಇದೆಲ್ಲದರ ವ್ಯವಸ್ಥೆಗೆ ಭಕ್ತರ ದೇಣಿಗೆಯ ಹಣ ಸಾಕಾಗದಂತಾಗಿದೆ. ಆದ್ದರಿಂದ ಸಂಬಂಧಿತರಿಗೆ ಸುವ್ಯವಸ್ಥೆಯ ಚಿಂತೆ ಕಾಡುತ್ತಿದೆ.

ಈ ಪ್ರತಿಮೆ ನಿರ್ಮಾಣ ಒಳಗೊಂಡು ಇನ್ನಿತರೆ ಯಾವುದೇ ಕೆಲಸಕ್ಕೆ ಸರ್ಕಾರದ ಹಣ ಪಡೆಯಲಾಗಿಲ್ಲ. ಆದರೂ, ಈಚೆಗೆ ಬಸವ ಮಹಾಮನೆಯ ಶೂನ್ಯ ಪೀಠಾಧೀಶರಾದ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಸಂಬಂಧಿತ ಸಚಿವರು, ಶಾಸಕರುಗಳಿಗೆ ಅನುದಾನ ನೀಡಲು ಆಗ್ರಹಿಸಿ ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ. ಪರಿಣಾಮವಾಗಿ ಮುಖ್ಯ ರಸ್ತೆಯಿಂದ ಪ್ರತಿಮೆಯ ಕಡೆಗೆ ಹೋಗುವ ಕೆಲಮಟ್ಟಿನ ರಸ್ತೆ ನಿರ್ಮಾಣಗೊಂಡಿದೆ. ಸೇತುವೆ ವ್ಯವಸ್ಥೆ ಮತ್ತು ಇನ್ನುಳಿದ ಕಚ್ಚಾ ರಸ್ತೆಯ ಸುಧಾರಣಾ ಕಾರ್ಯ ಕೈಗೊಳ್ಳಬೇಕಾಗಿದೆ.

ಮುಖ್ಯ ರಸ್ತೆಗೆ ಹತ್ತಿಕೊಂಡು ಮಹಾದ್ವಾರ ನಿರ್ಮಿಸುವುದು, ಸುತ್ತಲಿನಲ್ಲಿ ಆವರಣ ಗೋಡೆ ಕಟ್ಟುವುದು. ಪ್ರತಿಮೆಯವರೆಗೆ ಅಗಲವಾದ ರಸ್ತೆ ನಿರ್ಮಿಸಿ ಮಧ್ಯದಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆಗೈಯುವುದು. ಪ್ರತಿಮೆ ಎದುರಿನಿಂದ ಹಾದು ಹೋಗುವ ನಾಲೆಯ ನೀರನ್ನು ಉಪಯೋಗಿಸಿಕೊಂಡು ತಗ್ಗಿನಲ್ಲಿ ಕೆರೆ ನಿರ್ಮಾಣ, ಎಲ್ಲೆಡೆ ಸಸಿ ನೆಡುವುದು, ಅಲ್ಲಲ್ಲಿ ಆಸನಗಳನ್ನು ಇಡುವುದು ಇತ್ಯಾದಿ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಇವುಗಳ ಅನುಷ್ಠಾನಕ್ಕೆ ಆರ್ಥಿಕ ತೊಂದರೆಯಾಗಿದೆ. ಆದ್ದರಿಂದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಅಥವಾ ವಿವಿಧ ಇಲಾಖೆಯವರು ಅನುದಾನ ನೀಡಬೇಕು ಎಂಬುದು ಜನರ ಅನಿಸಿಕೆಯಾಗಿದೆ.

ಬಸವಕಲ್ಯಾಣದ 108 ಅಡಿ ಎತ್ತರದ ಬಸವಣ್ಣನವರ ಮೂರ್ತಿ ಸ್ಥಳಕ್ಕೆ ಹೋಗುವ ರಸ್ತೆಗೆ ಆವರಣ ಪ್ರವೇಶಿಸುವಲ್ಲಿ ಮಹಾದ್ವಾರ ನಿರ್ಮಾಣಕ್ಕಾಗಿ ಒಂದು ಭಾಗದಲ್ಲಿ ಪಿಲ್ಲರ್ ಹಾಕಿರುವುದು
ಬಸವಕಲ್ಯಾಣದ 108 ಅಡಿ ಎತ್ತರದ ಬಸವಣ್ಣನವರ ಮೂರ್ತಿಯಿರುವ ಪರಿಸರದ ವಿಹಂಗಮ ದೃಶ್ಯ

ಬಸವಣ್ಣನವರ ಮೂರ್ತಿ ಸಾರ್ವಜನಿಕ ಸ್ವತ್ತು. ಇಲ್ಲಿ ಮೂಲಸೌಕರ್ಯ ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು ಇದಕ್ಕಾಗಿ ಆಗ್ರಹಿಸಿ ಮನವಿ ಕೂಡ ಸಲ್ಲಿಸಲಾಗಿದೆ.

–ಸಿದ್ದರಾಮೇಶ್ವರ ಸ್ವಾಮೀಜಿ ಪೀಠಾಧಿಪತಿ ಶೂನ್ಯ ಪೀಠ ಬಸವ ಮಹಾಮನೆ

________

ಇದು ಬರೀ ಪ್ರವಾಸಿ ತಾಣವಲ್ಲ. ಶ್ರದ್ಧಾ ಕೇಂದ್ರವೂ ಆಗಿದ್ದರಿಂದ ಜನರ ಬರುವಿಕೆ ಹೆಚ್ಚಿದೆ. ಅವರಿಗೆ ಸೌಲಭ್ಯ ನೀಡಬೇಕಾಗಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.

–ಶಿವರಾಜ ನರಶೆಟ್ಟಿ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಮಾಜಿ ಸದಸ್ಯ

________

ಇತರೆ ಸ್ಮಾರಕಗಳ ಜೀರ್ಣೋದ್ಧಾರವಾಗಿದೆ. ಅನುಭವ ಮಂಟಪವೂ ಪೂರ್ಣಗೊಳ್ಳಲಿದೆ. ಹೀಗಾಗಿ ಮುಂದೆ ಪ್ರವಾಸಿಗರು ಅಧಿಕಗೊಳ್ಳುವುದರಿಂದ ಸೌಲಭ್ಯವೂ ಹೆಚ್ಚಬೇಕು.

–ಮನೋಜಕುಮಾರ ಮಾಶೆಟ್ಟೆ, ಅಧ್ಯಕ್ಷ ತಾಲ್ಲೂಕು ಕರ್ನಾಟಕ ಲಿಂಗಾಯತ ಸಮಾಜ ಯುವ ಒಕ್ಕೂಟ

________

ಸಮಾನತೆಯ ಸಂದೇಶ ಸಾರಿದವರು ಬಸವಾದಿ ಶರಣರು. ಇಲ್ಲಿನ ಸ್ಮಾರಕಗಳು ಅಭಿವೃದ್ಧಿಗೊಂಡರೆ ದೇಶ ವಿದೇಶದವರು ಇಲ್ಲಿಗೆ ಬಂದು ಈ ತತ್ವ ತಿಳಿದುಕೊಳ್ಳುತ್ತಾರೆ.

–ಬಸವಲಿಂಗ ಸುಬೇದಾರ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.