ಬಸವಕಲ್ಯಾಣ: ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಸೆ.22ರಿಂದ ಅಕ್ಟೋಬರ್ 2ರವರೆಗೆ ನಗರದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಡೋಳಾ ರಾಜೇಶ್ವರ ಶಿವಾಚಾರ್ಯರು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಬೃಹತ್ ಸಭಾ ಮಂಟಪ ಸಿದ್ಧಪಡಿಸಲಾಗಿದೆ. ಪಕ್ಕದ ತೇರು ಮೈದಾನದಲ್ಲಿ ದಾಸೋಹ ವ್ಯವಸ್ಥೆಗೈಯಲಾಗಿದೆ. ನಗರದ ಮುಖ್ಯ ರಸ್ತೆಯಲ್ಲಿ ಭವ್ಯ ಸ್ವಾಗತ ದ್ವಾರಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗುತ್ತದೆ’ ಎಂದರು.
ಸೂರ್ಯಕಾಂತ ಶೀಲವಂತ ಮಾತನಾಡಿದರು. ಮುಖಂಡ ಸುನಿಲ ಪಾಟೀಲ, ಸುರೇಶ ಸ್ವಾಮಿ, ದಯಾನಂದ ಶೀಲವಂತ, ಸೂರ್ಯಕಾಂತ ಮಠ, ವಿರಣ್ಣ ಶೀಲವಂತ, ರಮೇಶ ರಾಜೋಳೆ ಉಪಸ್ಥಿತರಿದ್ದರು.
ಕಾರ್ಯಕ್ರಮಗಳ ವಿವರ: ಸೆ.22ರಂದು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭಾವಚಿತ್ರ ಬಿಡುಗಡೆಗೊಳಿಸುವರು. ಹಾರಕೂಡ ಚನ್ನವೀರ ಶಿವಾಚಾರ್ಯರು, ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಪ್ರಭುಸಾರಂಗದೇವ ಶಿವಾಚಾರ್ಯರು ಸಮ್ಮುಖ ವಹಿಸುವರು. ಪೌರಾಡಳಿತ ಸಚಿವ ರಹೀಂಖಾನ್, ಶಾಸಕರಾದ ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ, ಮಾಜಿ ಸಚಿವ ರಾಜಶೇಖರ ಪಾಟೀಲ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸೆ.23ರಂದು ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ಸಾಗರ ಖಂಡ್ರೆ ಪಾಲ್ಗೊಳ್ಳುವರು.
ಸೆ.24ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ‘ಕೊಲ್ಲಿಪಾಕಿ ಕ್ಷೇತ್ರ ದರ್ಶನ’ ಕೃತಿ ಬಿಡುಗಡೆಗೊಳಿಸುವರು. ಸೆ.25ರಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಳ್ಳುವರು. ಸೆ.26ಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಸೆ.27ರಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ‘ರಂಭಾಪುರಿ ಬೆಳಗು’ ಪತ್ರಿಕೆ ಬಿಡುಗಡೆಗೊಳಿಸುವರು. ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ, ಸಂಸದ ಜಗದೀಶ ಶೆಟ್ಟರ್ ಭಾಗವಹಿಸುವರು.
ಸೆ.28ಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಆಗಮಿಸುವರು. ಸೆ.29ರಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಸೆ.30ರಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳುವರು. ಅಕ್ಟೋಬರ್ 1ರಂದು ಮಾಜಿ ಸಚಿವ ಶಿವರಾಜ ಪಾಟೀಲ ಚಾಕೂರಕರ್ ಪಾಲ್ಗೊಳ್ಳುವರು. ಅ.2ರಂದು ಅಡ್ಡಪಲ್ಲಕ್ಕಿ ಉತ್ಸವ ಜರುಗುವುದು. ಸಂಜೆ ಬಸವಣ್ಣನವರ ಅರಿವಿನ ಮನೆ ಆವರಣದಲ್ಲಿ ರಂಭಾಪುರಿ ಶಿವಾಚಾರ್ಯರಿಂದ ಶಮಿ ಪೂಜೆಯೂ ನೆರವೇರಲಿದೆ.
ಸೆ.22ರಿಂದ ಅ.2ರವರೆಗೆ ಕಾರ್ಯಕ್ರಮ ಬಿ.ಎಸ್.ಯಡಿಯೂರಪ್ಪ ಅವರಿಂದ ಉದ್ಘಾಟನೆ ಅ.2ಕ್ಕೆ ಡಿ.ಕೆ.ಶಿವಕುಮಾರ್ ಆಗಮನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.