ADVERTISEMENT

ಬಸವಕಲ್ಯಾಣ |ಶರಣ ಬೊಮ್ಮಯ್ಯ ಜಾತ್ರೆ: ಮೆರವಣಿಗೆ ಮೂಲಕ ಬೆಲ್ಲದ ಮುದ್ದೆ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:31 IST
Last Updated 17 ಫೆಬ್ರುವರಿ 2026, 5:31 IST
ಬಸವಕಲ್ಯಾಣ ತಾಲ್ಲೂಕಿನ ಇಲ್ಲಾಳ ಗ್ರಾಮದಲ್ಲಿ ಶರಣ ಬಮ್ಮಯ್ಯ ಜಾತ್ರೆ ಅಂಗವಾಗಿ ಸೋಮವಾರ ಭಕ್ತರಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬೆಲ್ಲ ಒಯ್ಯಲಾಯಿತು
ಬಸವಕಲ್ಯಾಣ ತಾಲ್ಲೂಕಿನ ಇಲ್ಲಾಳ ಗ್ರಾಮದಲ್ಲಿ ಶರಣ ಬಮ್ಮಯ್ಯ ಜಾತ್ರೆ ಅಂಗವಾಗಿ ಸೋಮವಾರ ಭಕ್ತರಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬೆಲ್ಲ ಒಯ್ಯಲಾಯಿತು   

ಬಸವಕಲ್ಯಾಣ: ತಾಲ್ಲೂಕಿನ ಇಲ್ಲಾಳದಲ್ಲಿ ಸೋಮವಾರ ಶರಣ ಬೊಮ್ಮಯ್ಯ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಬೆಲ್ಲದ ಮುದ್ದೆಗಳನ್ನು ಒಯ್ದು ಅರ್ಪಿಸಿ ಜಾತ್ರೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಡೊಳ್ಳು, ಬ್ಯಾಂಡ್‌ಬಾಜಾ ಮತ್ತಿತರೆ ವಾದ್ಯ ಮೇಳಗಳ ಮತ್ತು ಕಲಾ ತಂಡಗಳೊಂದಿಗೆ ಅವರವರ ಮನೆಗಳಿಂದ ಕುಟುಂಬ ಸಮೇತರಾಗಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬರಲಾಯಿತು. ಪುರುಷರು ತಲೆ ಮೇಲೆ 25 ಕೆಜಿಯ ಬೆಲ್ಲದ ಮುದ್ದೆಗಳನ್ನು ಹೊತ್ತುಕೊಂಡರೆ, ಮಹಿಳೆಯರು ಆರತಿ, ನೈವೇದ್ಯ ಹಿಡಿದಿದ್ದರು. ಯುವಕರು, ಮಕ್ಕಳು ವಾದ್ಯಗಳ ಸದ್ದಿಗೆ ಕುಣಿದರು.

ದೇವಸ್ಥಾನದಲ್ಲಿ ನೈವೇದ್ಯ ಮತ್ತು ಕೆಲ ಭಾಗ ಬೆಲ್ಲ ಅರ್ಪಿಸಿದ ಬಳಿಕ ಇನ್ನುಳಿದ ಬೆಲ್ಲವನ್ನು ಭಕ್ತರಿಗೆ, ಗ್ರಾಮಸ್ಥರಿಗೆ ಹಂಚಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ದಿಲೀಪರೆಡ್ಡಿ, ಗೀತಾ ಅಂಬಾದಾಸ, ಮಹಾದೇವರೆಡ್ಡಿ ಮರೆ, ರಾಜಕುಮಾರ ಗುಂಡೆ, ಅಂಕುಶ ಗುಂಡೆ, ಬಾಬು ಗುಂಡೆ, ವಿಜಯಕುಮಾರ ಗುಂಡೆ, ಕಮಲಾಕರ ಮ್ಯಾಕಾಲೆ, ವಿಲಾಸರೆಡ್ಡಿ, ಸಂಜೀವ ಹಿರೋಳೆ, ಬಸವರಾಜ ಎಳ್ಳೆರ್, ಮಹಾದೇವ ಕಾಂಬಳೆ, ವೈಜನಾಥಸ್ವಾಮಿ, ಗುಂಡಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ADVERTISEMENT

ಶಿವರಾತ್ರಿ ನಿಮಿತ್ತ ಮೂರು ದಿನಗಳಿಂದ ಜಾತ್ರೆ ನಡೆಯಿತು. ಅಭಿಷೇಕ ನಡೆಯಿತು. ರಾತ್ರಿ ಆಕರ್ಷಕವಾಗಿ ಸಿಂಗರಿಸಿದ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿ ಇಟ್ಟು ಮೆರವಣಿಗೆ ಮಾಡಲಾಯಿತು. ಪುರವಂತರು, ಭಜನಾ ತಂಡದವರು, ವಿವಿಧ ವೇಷಧಾರಿಗಳು ಇದ್ದರು. ಮದ್ದು ಸುಡಲಾಯಿತು.

ಜಗಳ ದ್ವೇಷ ಭಾವನೆ ಇಲ್ಲದಂತಾಗಲಿ ಎಂದು ಪರಸ್ಪರರಿಗೆ ಬೆಲ್ಲ ವಿತರಿಸುವ ಪದ್ಧತಿ ಇದೆ. ಕೆಲ ಭಕ್ತರು ಹೆಚ್ಚಿನ ಬೆಲ್ಲ ತಂದು ದಾಸೋಹಕ್ಕೂ ನೀಡುತ್ತಾರೆ.
ಮಹಾದೇವರೆಡ್ಡಿ ಮರೆ ಗ್ರಾಮದ ಪ್ರಮುಖರು
ತಾಲ್ಲೂಕಿನಲ್ಲಿನ ಇದೊಂದೇ ಜಾತ್ರೆಯಲ್ಲಿ ಬೆಲ್ಲದ ಮುದ್ದೆಗಳನ್ನು ಮೆರವಣಿಗೆ ಮೂಲಕ ಒಯ್ಯಲಾಗುತ್ತದೆ. ಊರ ಸುತ್ತ ಕಬ್ಬು ಇರುವುದರಿಂದ ಬೆಲ್ಲಕ್ಕೆ ಕೊರತೆ ಇಲ್ಲ.
ರಾಜಕುಮಾರ ಗುಂಡೆ ಗ್ರಾಮದ ಪ್ರಮುಖರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.