
ಹುಲಸೂರ: ಗಡಿನಾಡಿನ ನಡೆದಾಡುವ ದೇವರೆಂದೇ ಖ್ಯಾತರಾದ ಬಸವಕುಮಾರ ಶಿವಯೋಗಿಗಳ 50ನೇ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವವನ್ನು ಡಿ.29, 30 ಹಾಗೂ 31ರಂದು ಪಟ್ಟಣದ ಗುರು ಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಭವ್ಯವಾಗಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ವೇದಿಕೆ ಸಜ್ಜುಗೊಂಡಿದ್ದು, ನಾಡಿನ ಹೆಸರಾಂತ ಮಠಾಧೀಶರು, ರಾಜಕೀಯ ಮುಖಂಡರು, ಸಾಹಿತಿಗಳು, ಕಲಾವಿದರು ಮತ್ತು ಸಂಗೀತಗಾರರು ಭಾಗವಹಿಸಲಿದ್ದಾರೆ.
ಡಿ.29ರಂದು ಬೆಳಿಗ್ಗೆ 10 ಗಂಟೆಗೆ ಹಿರಿಯ ನಾಗರಿಕ ಶ್ರೀಮಂತರಾವ ಜಾನಬಾ ಅವರಿಂದ ಷಟಸ್ಥಲ ಧ್ವಜಾರೋಹಣ ಜರುಗಲಿದೆ. ಬೆಳಿಗ್ಗೆ 11 ಗಂಟೆಗೆ ಬಸವಕುಮಾರ ಶಿವಯೋಗಿಗಳ ಪ್ರತಿಮೆ ಹಾಗೂ ವಚನ ಸಾಹಿತ್ಯದೊಂದಿಗೆ ಅಲಂಕಾರಿಕ ರಥ, ಡೊಳ್ಳು–ತಾಸಾ, ಅಘೋರಿ ನೃತ್ಯ ಮತ್ತು ಗೊಂಬೆ ವೇಷಭೂಷಣಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಗೆ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಬಸವಕಲ್ಯಾಣ ಶಾಸಕ ಶರಣು ಸಲಗರ ಉದ್ಘಾಟಿಸಲಿದ್ದಾರೆ.
ಅದೇ ದಿನ ಸಂಜೆ 6.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸಲಿದ್ದಾರೆ. ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷತೆ ವಹಿಸಲಿದ್ದು, ಸಚಿವ ಆರ್.ಬಿ. ತಿಮ್ಮಾಪುರ ಬಸವಗುರು ಪೂಜೆ ಸಲ್ಲಿಸಲಿದ್ದಾರೆ. ಸಂತೋಷ ಹಾನಗಲ್ ಹಾಗೂ ಲಿಂಗಾರತಿ ಅಲ್ಲಮಪ್ರಭು ನಾವದಗೇರೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಡಿ.30ರಂದು ಬೆಳಿಗ್ಗೆ ಸಹಜ ಶಿವಯೋಗ, ರಕ್ತದಾನ ಶಿಬಿರ, ಬಸವಕಥೆ ಹಾಗೂ ಗುರು ಬಸವೇಶ್ವರ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ. ಸಂಜೆ 6.30ಕ್ಕೆ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭ ಜರುಗಲಿದೆ. ಈ ಸಂದರ್ಭದಲ್ಲಿ ಗ್ರಂಥ ಬಿಡುಗಡೆ, ಉಪನ್ಯಾಸ ಹಾಗೂ ರೂಪಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಡಿ.31ರಂದು ಬೆಳಿಗ್ಗೆ ಸಹಜ ಶಿವಯೋಗ ಹಾಗೂ ‘ರೈತರ ಸಮಸ್ಯೆ ಮತ್ತು ಅಧ್ಯಾತ್ಮಿಕ ಪ್ರವಚನ’ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಕವಿತಾ ಮಿಶ್ರಾ ಉಪನ್ಯಾಸ ನೀಡಲಿದ್ದಾರೆ. ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಮಹೋತ್ಸವದ ಅಂಗವಾಗಿ ಭಕ್ತರಿಗೆ ಸಜ್ಜೆ ರೊಟ್ಟಿ, ಲಡ್ಡು, ಭಜ್ಜಿ–ಪಲ್ಯ, ಚಪಾತಿ ಸೇರಿದಂತೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ‘ಜಗದ್ಗುರು ಅಲ್ಲಮಪ್ರಭು ದೇವರ ಶ್ರೀ ಪ್ರಶಸ್ತಿ’ಯನ್ನು ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಮಲ್ಲಿಕಾರ್ಜುನ ಸ್ವಾಮೀಜಿಗೆ ಪ್ರದಾನಿಸಲಾಗುವುದು. ಪ್ರಕೃತಿವನಂ ಪ್ರಸಾದ್ ಅವರಿಗೆ ಶ್ರೀ ಗುರು ಬಸವೇಶ್ವರ ಪ್ರಶಸ್ತಿ ನೀಡಲಾಗುವುದು ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಪೋಟೋ ಶೀರ್ಷಿಕೆ: ಲಿಂ. ಜಗದ್ಗುರು ಬಸವಕುಮಾರ ಶಿವಯೋಗಿಯವರು.
ಪೋಟೋ ಶೀರ್ಷಿಕೆ: ಸುವರ್ಣ ಮಹೋತ್ಸವದ ಅಂಗವಾಗಿ ಮಹಿಳಾ ಭಕ್ತರಿಂದ ಸಜ್ಜೆ ರೊಟ್ಟಿ ತಯಾರಿಕೆ.
ಪೋಟೋ ಶೀರ್ಷಿಕೆ: ಪೋಟೋ ಶೀರ್ಷಿಕೆ: ಹುಲಸೂರ ಪಟ್ಟಣದಲ್ಲಿ ಲಿಂ ಜಗದ್ಗುರು ಬಸವಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವ ಅಂಗವಾಗಿ ವೇದಿಕೆ ಸಜ್ಜು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.