
ಹುಲಸೂರ: ‘ಗಡಿಭಾಗದಲ್ಲಿ ಬಸವಕುಮಾರ ಶಿವಯೋಗಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿರುವ ಕಾರ್ಯದಿಂದ ಈ ಭಾಗದಲ್ಲಿ ಕನ್ನಡ ಭಾಷೆ ಬರಹ ಉಳಿದಿದೆ’ ಎಂದು ಬಸವಕಲ್ಯಾಣ ಧರ್ಮ ಪೀಠದ ಮಾತೆ ಲಾವಣ್ಯ ದೇವಿ ತಿಳಿಸಿದರು.
ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಮಂಗಳವಾರ ಬಸವಕೇಂದ್ರ ತಾಲ್ಲೂಕು ಘಟಕದಿಂದ ನಡೆದ ಬಸವಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವ ಅಂಗವಾಗಿ ಶರಣ ಸಂಸ್ಕೃತಿ ಉತ್ಸವ ಹಾಗೂ ಶರಣ ಸಂದೇಶ ಯಾತ್ರೆ ಚಾಲನೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಶಿವಯೋಗಿಗಳು ಕೇವಲ ಧರ್ಮ ಕಾರ್ಯಗಳಿಗೆ ಸೀಮಿತವಾಗಿರದೆ ಸಾಮಾಜಿಕ ಕೃಷಿ ಚಟುವಟಿಕೆಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಲಿಂಗೈಕ್ಯ ಸುವರ್ಣ ಮಹೋತ್ಸವ ಭವ್ಯವಾಗಿ ಜರಗುವಂತೆ ಆಯೋಜಿಸುವ ಮೂಲಕ ಈ ಭಾಗದಲ್ಲಿನ ಜನರಿಗೆ ಪೂಜ್ಯರ ಕಾಯಕ, ಆದರ್ಶಗಳು ತಲುಪುವಂತಾಗಲಿ’ ಎಂದು ತಿಳಿಸಿದರು.
ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಸವಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವ ಅಂಗವಾಗಿ ಶರಣ ಸಂಸ್ಕೃತಿ ಉತ್ಸವ ಹಾಗೂ ಶರಣ ಸಂದೇಶ ಯಾತ್ರೆ ಬಸವಕೇಂದ್ರ ವತಿಯಿಂದ ನವೆಂಬರ್ 4ರಿಂದ 28ರ ವರೆಗೆ ಬಸವಕಲ್ಯಾಣ ಹಾಗೂ ಹುಲಸೂರ ತಾಲ್ಲೂಕಿನ ಹಳ್ಳಿಗಳಲ್ಲಿ ಶರಣರ ವಚನಗಳು ಅವರ ಜೀವನ ಕುರಿತು ಉಸ್ತುರಿ ವಿರಕ್ತ ಮಠದ ಕೋರಣೇಶ್ವರ ಸ್ವಾಮೀಜಿ, ಗೋರಟಾ ಬಿ. ಲಿಂಗಾಯತ ಮಠದ ಪ್ರಭುದೇವ ಸ್ವಾಮೀಜಿ, ಮಾತೆ ಲಾವಣ್ಯ ದೇವಿ ಅವರಿಂದ ವಿಶೇಷ ಉಪನ್ಯಾಸ ಜರುಗಲಿದೆ ಎಂದು ಬಸವ ಕೇಂದ್ರದ ತಾಲೂಕು ಅಧ್ಯಕ್ಷ ಆಕಾಶ ಖಂಡಾಳೆ ತಿಳಿಸಿದರು.
ಮಲ್ಲಪ್ಪ ಧಬಾಲೆ, ಲತಾ ಹಾರಕುಡೆ, ಸುಧೀರ ಕಾಡಾದಿ, ಬಾಬುರಾವ್ ಗೌಡಗಾಂವೆ ಮಾತನಾಡಿದರು. ಆಕಾಶ ಖಂಡಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೀರೇಶ ಇಲ್ಲಾಮಲ್ಲೆ ಪ್ರಾರ್ಥನಾ ಗೀತೆ ಹಾಡಿದರು. ವಚನಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ರಾಜಕುಮಾರ ತೊಂಡಾರೆ ನಿರೂಪಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಪ್ರವೀಣ ಕಾಡಾದಿ, ರೇಖಾ ಕಾಡಾದಿ, ಶಶಿಕಲಾ ಪಟ್ನೆ, ಶ್ರೀದೇವಿ ನಿಡೋದೆ, ಬಾಬುರಾವ ಗೌಡಗಾಂವೆ, ಚಂದ್ರಶೇಖರ ತೊಗರಗೆ, ಬಸವರಾಜ ಮುಕ್ತಾ, ಲೊಕೇಶ ದಭಾಲೆ, ಬಸವರಾಜ ರಾಸೂರೆ, ಬಸವರಾಜ ಡೊಣಗಾಂವಕರ, ಬಸವರಾಜ ಕಾಡಾದಿ, ನಾಗರಾಜ ಕೊರೆ, ಕಲ್ಯಾಣಿ ದಾನ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.