ADVERTISEMENT

ಪುಣೆಯಲ್ಲಿ ಬಸವ ಜಯಂತಿ: ಬಸವಣ್ಣವರ ವಿಚಾರಾಧಾರೆ ಸರ್ವಕಾಲಕ್ಕೂ ಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 28 ಮೇ 2025, 16:15 IST
Last Updated 28 ಮೇ 2025, 16:15 IST
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಸೇವಾ ಪ್ರತಿಷ್ಠಾನದ ವತಿಯಿಂದ ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಗೌರವಿಸಲಾಯಿತು
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಸೇವಾ ಪ್ರತಿಷ್ಠಾನದ ವತಿಯಿಂದ ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಗೌರವಿಸಲಾಯಿತು   

ಭಾಲ್ಕಿ: ವಿಶ್ವಗುರು ಬಸವಣ್ಣನವರ ವಿಚಾರಧಾರೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಅವರು 12ನೇ ಶತಮಾನದಲ್ಲಿ ಮಾಡಿದ ಕ್ರಾಂತಿ ಅದ್ಭುತವಾಗಿತ್ತು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಬಸವಸೇವಾ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಬಸವಣ್ಣನವರು ಸಮಾಜದಲ್ಲಿ ಬೇರು ಬಿಟ್ಟಿದ್ದ ಅಸ್ಪೃಶ್ಯತೆ ನಿರ್ಮೂಲನೆ, ಮೂಢನಂಬಿಕೆ ವಿರುದ್ಧ ಸಮರ ಸಾರಿದ್ದರು. ಸ್ತ್ರೀಯರ ಉದ್ಧಾರ, ಸರ್ವರಿಗೂ ಶಿಕ್ಷಣ, ಏಕದೇವೋಪಾಸನೆ, ಕಾಯಕ ಪ್ರಜ್ಞೆ ಮುಂತಾದ ಕಾರ್ಯವನ್ನು ಮಾಡಿದರು. ವಿಶ್ವಗುರು ಬಸವಣ್ಣನವರ ಈ ಕಾರ್ಯಗಳಿಂದ ಪ್ರೇರೇಪಿತರಾದ ಮಹಾರಾಷ್ಟ್ರದ ಸಂತ ನಾಮದೇವ, ಜ್ಞಾನೇಶ್ವರ, ತುಕಾರಾಮ, ಮಹಾತ್ಮ ಫುಲೆ, ಶಾಹುಮಹಾರಾಜರು, ಬಾಬಾಸಾಹೇಬ ಅಂಬೇಡ್ಕರ್ ಅವರು ಬಸವಣ್ಣನವರ ಕಾರ್ಯಗಳನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದರು.

ADVERTISEMENT

ಮಹಾರಾಷ್ಟ್ರದಲ್ಲಿ ಬಸವಪ್ರಜ್ಞೆ ವೇಗವಾಗಿ ಬೆಳೆಯುತ್ತಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಶ್ರೀಮಠದ ಅಡಿಯಲ್ಲಿ ಮಹಾರಾಷ್ಟ್ರ ಬಸವ ಪರಿಷತ್ ಸ್ಥಾಪಿಸುವ ಮೂಲಕ ಸುಮಾರು 200 ಕ್ಕಿಂತಲೂ ಹೆಚ್ಚಿನ ಮರಾಠಿ ಪುಸ್ತಕಗಳನ್ನು ಪ್ರಕಟಿಸಿ, ಮಹಾರಾಷ್ಟ್ರದಾದ್ಯಂತ ಬಸವಸಾಹಿತ್ಯ ಪ್ರಸಾರ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಸೋಲಾಪುರದ ಪತ್ರಕರ್ತ ಚನ್ನವೀರ ಭದ್ರೇಶ್ವರಮಠ, ರಾಜು ಜುಬರೆ ಉಪನ್ಯಾಸ ನೀಡಿದರು. ಮಹಾನಗರ ಪಾಲಿಕೆ ಸದಸ್ಯ ಹರಿಭಾವು ಚರವಡ ಅಧ್ಯಕ್ಷತೆ ವಹಿಸಿದ್ದರು. ಗ್ರಂಥ ಲೋಕಾರ್ಪಣೆ ಸಾಹಿತಿ ಡಾ.ನಳಿನಿ ವಾಗ್ಮಾರೆ ಅವರು ಆಂಗ್ಲ ಭಾಷೆಯಲ್ಲಿ ಬರೆದ ಲಿಂಗಾಯತ ವುಮನ್ಸ್ ಎಂಬ ಗ್ರಂಥ ಲೋಕಾರ್ಪಣೆಗೊಂಡಿತು. ಸಂಜಯ ಇಂಡೆ, ನರ್ಸಿಂಗ್ ಮುಳೆ, ಸಂತೋಷ ಮಲ್ಲಶೆಟ್ಟಿ, ವಿಜಯ ಪಾಟೀಲ್ ಸೇರಿದಂತೆ ಹಲವರು ಇದ್ದರು.

ಚಂದ್ರಕಾಂತ ಹಾಲಕುಡೆ ಪ್ರಾಸ್ತಾವಿಕ ಮಾತನಾಡಿದರು. ನೀಲಕಂಠ ಪಾಟೀಲ ಸ್ವಾಗತಿಸಿದರು. ರವಿ ಖೂಬಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.