ಬಸವಕಲ್ಯಾಣ: ನಗರದ ಐತಿಹಾಸಿಕ ತ್ರಿಪುರಾಂತ ಕೆರೆಯಲ್ಲಿನ ಬಸವಣ್ಣನವರ ಮತ್ತು ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗಳ ಸ್ಥಾಪನೆಯ ಕೆಲಸ ನನೆಗುದಿಗೆ ಬಿದ್ದಿದೆ. ಅನುದಾನದ ಕೊರೆತೆಯಿಂದ ಕೆಲಸ ನಡೆಯುತ್ತಿಲ್ಲ ಎಂದು ಗೊತ್ತಾಗಿದೆ.
ಕೆರೆ ಪಕ್ಕದಲ್ಲೇ ₹620 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ಆದ್ದರಿಂದ ಕೆರೆಯಲ್ಲಿ 12ನೇ ಶತಮಾನದಲ್ಲಿ ಅನುಭವ ಮಂಟಪ ಕಟ್ಟಿದ್ದ ಬಸವಣ್ಣನವರ 150 ಅಡಿ ಎತ್ತರದ ಮತ್ತು ಇಲ್ಲಿಯೇ ದೋಣಿ ಕಾಯಕ ಕೈಗೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ 50 ಅಡಿ ಎತ್ತರದ ಮೂರ್ತಿಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಇದರ ನೀಲನಕ್ಷೆಯೂ ಸಿದ್ಧಪಡಿಸಲಾಗಿತ್ತು.
ಕೆಲ ವರ್ಷಗಳ ಹಿಂದೆ ಮಾಂಜರಾ ನದಿಯಿಂದ ಏತ ನೀರಾವರಿ ಮೂಲಕ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದೆ. ತ್ರಿಪುರಾಂತ ಕೆರೆಯೂ ಆ ಪಟ್ಟಿಯಲ್ಲಿ ಇದೆ. ಹೀಗಾಗಿ ನೀರಾವರಿ ಇಲಾಖೆ ಕೆರೆಯ ಸೌಂದರೀಕರಣಕ್ಕೂ ಯೋಜನೆ ರೂಪಿಸಿತು. ಇಲ್ಲಿ ದೋಣಿ ವಿಹಾರದ ವ್ಯವಸ್ಥೆ ಕೈಗೊಳ್ಳುವುದಲ್ಲದೆ ಎರಡು ಮೂರ್ತಿಗಳನ್ನು ಸ್ಥಾಪಿಸುವುದಕ್ಕೆ ಅನುದಾನ ನೀಡಲಾಯಿತು.
ಅದರಂತೆ ಕೆರೆಯ ಹೂಳು ತೆಗೆದು ಆಳ, ಅಗಲ ಹೆಚ್ಚಿಸುವ ಮತ್ತು ದಂಡೆಯಲ್ಲಿ ರಸ್ತೆ ನಿರ್ಮಿಸುವ ಕೆಲಸ ನಡೆಸಲಾಯಿತು. ಮೂರ್ತಿಗಳಿಗಾಗಿ ಕಟ್ಟೆ ಕಟ್ಟುವ ಕೆಲ ಪ್ರಮಾಣದ ಕೆಲಸವೂ ಕೈಗೊಳ್ಳಲಾಗಿದೆ. ಆದರೆ, ಎರಡು ವರ್ಷಗಳಿಂದ ಈ ಕಾಮಗಾರಿ ಮುಂದುವರಿಯದಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಹಿಂದಿನ ಸರ್ಕಾರದಲ್ಲಿ ಕೆಲ ಪ್ರಮಾಣದ ಕೆಲಸ ಕೈಗೊಳ್ಳಲಾಗಿದ್ದು, ಈ ಸರ್ಕಾರ ಬಂದಾಗ ಎಲ್ಲವೂ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ.
12ನೇ ಶತಮಾನದ ಎಲ್ಲ ಶರಣರ ಸ್ಮಾರಕಗಳು ಈ ಕೆರೆಯ ಸಮೀಪದಲ್ಲಿವೆ. ಕಾರಣ ಪ್ರವಾಸಿಗರು ಕೆರೆಯನ್ನೂ ವೀಕ್ಷಿಸುವರು. ಇದರ ಅಭಿವೃದ್ಧಿಯ ಜೊತೆಗೆ ಮೂರ್ತಿಗಳನ್ನು ಸ್ಥಾಪಿಸಿದರೆ ಅದಕ್ಕೆ ಮತ್ತಷ್ಟು ಜೀವಕಳೆ ಬರಲಿದೆ ಎಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಮಾಜಿ ಸದಸ್ಯ ಶಿವರಾಜ ನರಶೆಟ್ಟಿ ಹೇಳುತ್ತಾರೆ.
‘ಕೆರೆ ಸಮಿಪದಲ್ಲಿಯೇ ಇರುವ ಅಂಬಿಗರ ಚೌಡಯ್ಯನವರ ಸ್ಮಾರಕ ಅಭಿವೃದ್ಧಿಪಡಿಸಲಾಗಿದೆ. ಅವರು ದೋಣಿ ಕಾಯಕ ಕೈಗೊಂಡಿದ್ದ ಕೆರೆಯಲ್ಲಿ ಅವರ ಮೂರ್ತಿ ಕೂಡಿಸಿದರೆ ಈ ಸ್ಥಳ ಮತ್ತಷ್ಟು ಆಕರ್ಷಣೀಯ ಆಗಬಲ್ಲದು’ ಎಂಬುದು ಟೋಕರಿ ಕೋಲಿ ಸಮಾಜದ ಮುಖಂಡ ಶಂಕರರಾವ್ ಜಮಾದಾರ ಅವರ ಅನಿಸಿಕೆ.
Quote - ಕೆರೆಯಲ್ಲಿ ಮೂರ್ತಿ ಸ್ಥಾಪನೆಯ ಕೆಲಸ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಸಂಬಂಧಿಸಿದ್ದಲ್ಲ. ನೀರಾವರಿ ಇಲಾಖೆಯಿಂದ ಯೋಜನೆ ರೂಪಿಸಲಾಗಿತ್ತು ಜಗನ್ನಾಥರೆಡ್ಡಿ ಆಯುಕ್ತ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ
Quote - ಮೂರ್ತಿ ಸ್ಥಾಪನೆ ಹಾಗೂ ಕೆರೆಯ ಸೌಂದರೀಕರಣ ಕೆಲಸಕ್ಕೆ ನೀರಾವರಿ ಇಲಾಖೆ ಅನುದಾನ ನೀಡಿತ್ತು. ಕೆಲ ಪ್ರಮಾಣದ ಕಾಮಗಾರಿಯೂ ಕೈಗೊಳ್ಳಲಾಗಿದೆ ಶಿವರಾಜ ನರಶೆಟ್ಟಿ ಮಾಜಿ ಸದಸ್ಯ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ
Quote - ಯಾವುದೇ ಕಾರಣಕ್ಕೂ ಯೋಜನೆ ಕೈಬಿಡದೆ ಪುರ್ಣಗೊಳಿಸಬೇಕು. ಬಸವಣ್ಣನವರ ಮತ್ತು ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆ ಅತ್ಯಗತ್ಯವಾಗಿದೆ ಶಂಕರರಾವ್ ಜಮಾದಾರ ಮುಖಂಡರು ಟೋಕರಿ ಕೋಲಿ ಸಮಾಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.