ADVERTISEMENT

ಬಸವಕಲ್ಯಾಣ: ಶಿಲಾದೇಗುಲವಾಗಿ ಮಾರ್ಪಟ್ಟ ಬಸವೇಶ್ವರ ದೇವಸ್ಥಾನ

ಬಸವಾದಿ ಶರಣರ ನಾಡಿನ ಮಹತ್ವದ ಸ್ಮಾರಕ ಜೀರ್ಣೋದ್ಧಾರ

ಮಾಣಿಕ ಆರ್ ಭುರೆ
Published 12 ಫೆಬ್ರುವರಿ 2026, 6:37 IST
Last Updated 12 ಫೆಬ್ರುವರಿ 2026, 6:37 IST
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಹೊಸದಾಗಿ ನಿರ್ಮಿಸಿರುವ ಮಹಾದ್ವಾರ
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಹೊಸದಾಗಿ ನಿರ್ಮಿಸಿರುವ ಮಹಾದ್ವಾರ   

ಬಸವಕಲ್ಯಾಣ: ಸಮಾನತೆ, ಸೌಹಾರ್ದತೆಗಾಗಿ ಬಸವಣ್ಣನವರ ನೇತೃತ್ವದಲ್ಲಿ ‘ಕಲ್ಯಾಣ ಕ್ರಾಂತಿ’ ಘಟಿಸಿದ್ದ ನೆಲವಿದು. ನಗರದಲ್ಲಿನ ಬಸವೇಶ್ವರ ದೇವಸ್ಥಾನವು ಜೀರ್ಣೋದ್ಧಾರದ ಬಳಿಕ ಶಿಲಾ ದೇಗುಲವಾಗಿ ಕಂಗೊಳಿಸುತ್ತಿದ್ದು, ಫೆಬ್ರುವರಿ 15 ರಂದು ಶಿವರಾತ್ರಿಗೆ ಉದ್ಘಾಟನೆ ಗೊಳ್ಳಲಿದೆ.

ಹಳೆಯ ವಾಡೆಯಂತಿದ್ದ ಈ ಕಟ್ಟಡದ ಗೋಡೆಗಳು ಹಾಳಾಗಿದ್ದವು. ಮೇಲ್ಛಾವಣಿ ಶಿಥಿಲಗೊಂಡಿತ್ತು.  ಇದರ ಜೀರ್ಣೋದ್ಧಾರಕ್ಕೆ ಯೋಜನೆ ರೂಪಿಸಿ ಕೆಲ ವರ್ಷಗಳಿಂದ ಸತತವಾಗಿ ಕಾಮಗಾರಿ ನಡೆಸಿ ಹೊಸರೂಪ ನೀಡಲಾಗಿದೆ.

ಉತ್ತರಾಭಿಮುಖವಾಗಿರುವ ಈ ಕಟ್ಟಡದ ಹಿಂಬದಿಯಲ್ಲಿ ಗರ್ಭಗೃಹ, ಅದರ ಎದುರಿಗೆ ವಿಶಾಲವಾದ ಮಂಟಪವಿದೆ. ನವೀಕರಣದ ಬಳಿಕ ಈ ಸ್ಥಳದ ಸೌಂದರ್ಯ ಸಾಕಷ್ಟು ಹೆಚ್ಚಿದೆ.

ADVERTISEMENT

ನಗರದಲ್ಲಿ 12ನೇ ಶತಮಾನದ ಅನೇಕ ಶರಣ ಸ್ಮಾರಕಗಳಿವೆ. ಈ ದೇವಸ್ಥಾನ ಹೊರತುಪಡಿಸಿ ಇನ್ನುಳಿದವುಗಳ ಜೀರ್ಣೋದ್ಧಾರ ಕಾರ್ಯ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ನಡೆದಿದೆ. ಎಲ್ಲವೂ ಶಿಲೆಗಳಿಂದ ಕಟ್ಟಲ್ಪಟ್ಟಿವೆ. ಅವುಗಳ ಮಾದರಿಯಲ್ಲಿಯೇ ಬಸವೇಶ್ವರ ದೇವಸ್ಥಾನ ಪಂಚ ಸಮಿತಿಯಿಂದ ಇದರ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.

ಚಾಲುಕ್ಯ ಶೈಲಿಯ ಕೆತ್ತನೆಯಿರುವ ಶಿಲೆಗಳಿಂದ ಈ ದೇವಸ್ಥಾನದ ಎತ್ತರದ ಮಹಾದ್ವಾರ ಮತ್ತು ಎದುರಿನ ಭಾಗವನ್ನು ನಿರ್ಮಿಸಲಾಗಿದೆ. ದ್ವಾರದ ಮೇಲೆ ಆಕರ್ಷಕ ವಿನ್ಯಾಸದ ಚಿಕ್ಕ ಗೋಪುರವೂ ಇದೆ. ಗರ್ಭಗೃಹದ ಎದುರಿನ ಮಂಟಪದ ಛಾವಣಿ, ಸುತ್ತುಗೋಡೆ ಕೆಡವಿ ಸುಂದರ ಚಿತ್ರಾವಳಿಗಳಿರುವ ಕಂಬಗಳನ್ನು ಅಳವಡಿಸಲಾಗಿದೆ.

ಗರ್ಭಗೃಹದ ಮೇಲಿರುವ ಮೊದಲಿನ ಎತ್ತರದ ಗೋಪುರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದು ಬಸವಾನುಯಾಯಿಗಳ ಮನಸ್ಸಿಗೆ ಮುದ ನೀಡಲಿದೆ. ಬಸವ ಜಯಂತಿಗೆ ಇಲ್ಲಿ ಮೂರು ದಿನಗಳ ಜಾತ್ರೆ ಆಯೋಜಿಸಲಾಗುತ್ತದೆ. ಅದಕ್ಕೂ ಮೊದಲೇ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯ ದೊರೆತಿದ್ದು ಎರಡು ತಿಂಗಳ ಬಳಿಕ ಇರುವ ಜಾತ್ರೆ ಮತ್ತಷ್ಟು ಕಳೆಗಟ್ಟಲಿದೆ.

ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಹೊಸದಾಗಿ ನಿರ್ಮಿಸಿರುವ ಒಳಾಂಗಣದ
ಭವ್ಯ ಮಹಾದ್ವಾರ ನಿರ್ಮಾಣ ಮತ್ತು ಕಟ್ಟಡದ ಜೀರ್ಣೋದ್ಧಾರ ಕಾರ್ಯದಲ್ಲಿ ಹೆಚ್ಚಾಗಿ ಶಿಲೆಗಳನ್ನು ಬಳಸಿದ್ದರಿಂದ ಅಂದಾಜು ₹3 ಕೋಟಿಯಷ್ಟು ಖರ್ಚು ತಗುಲಿದೆ
-ಬಸವರಾಜ ಕೋರಕೆ, ದೇವಸ್ಥಾನ ಸಮಿತಿ ಅಧ್ಯಕ್ಷ 
ಅಪಾರ ಜನರ ಶ್ರದ್ಧೆ ಭಕ್ತಿಯ ಕೇಂದ್ರ ಇದಾಗಿದ್ದು ಅಭಿವೃದ್ಧಿ ಕೈಗೊಂಡಿದ್ದರಿಂದ ಕಟ್ಟಡ ವೈಶಿಷ್ಟ್ಯಪೂರ್ಣವಾಗಿ ಕಾಣುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲಿದೆ
-ವಿವೇಕಾನಂದ ಹೊದಲೂರೆ ದೇವಸ್ಥಾನ ಸಮಿತಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.