ಬಸವಕಲ್ಯಾಣ: ಗಣೇಶ ಹಬ್ಬಕ್ಕಾಗಿ ಮೂರ್ತಿಗಳ ಮತ್ತು ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳ ಮಾರಾಟ ಜೋರಾಗಿರುವ ಜೊತೆಗೆ ನಗರದ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ರಾಜಮಹಲ್ ಮಾದರಿಯ ಮಂಟಪ ಸಿದ್ಧವಾಗುತ್ತಿದೆ.
ವೃತ್ತದಲ್ಲಿನ ಬಸವೇಶ್ವರರ ಮೂರ್ತಿಯ ಉತ್ತರದ ಭಾಗದಲ್ಲಿ ಎತ್ತರದ ಪೀಠ ನಿರ್ಮಿಸಿ ಥರ್ಮಾಕೋಲ್ ನಲ್ಲಿ ರಾಜಮಹಲ್‌ನ ರೂಪ ನೀಡಲಾಗುತ್ತಿದೆ. ಕಳೆದ ಸಲ ಕೋಟೆ ಮಾದರಿಯ ಆಕರ್ಷಣೆ ಇತ್ತು. ಈ ಸಲ ಅದಕ್ಕಿಂತಲೂ ಉತ್ತಮ ರೀತಿಯ ಮಂಟಪ ನಿರ್ಮಿಸಿ ವಿದ್ಯುತ್ ದೀಪಾಲಂಕಾರ ಮಾಡುವುದಕ್ಕಾಗಿ ಗಣೇಶ ಮಂಡಳಿಯವರು ವಾರದಿಂದ ಶ್ರಮಿಸುತ್ತಿದ್ದಾರೆ.
ಗೋಲಚೌಡಿ ವೀರ ಸಾವರ್ಕರ ಗಣೇಶ ಮಂಡಳದವರು ಹಾಗೂ ಇತರೆ ಕೆಲ ಮಂಡಳದವರು ಭಾನುವಾರ ಗಣೇಶ ಮೂರ್ತಿಯನ್ನು ಭವ್ಯವಾಗಿ ಸ್ವಾಗತಿಸಿ ಮೆರವಣಿಗೆಯೊಂದಿಗೆ ತಂದಿದ್ದಾರೆ. ಇತರೆ ಸ್ಥಳಗಳಲ್ಲಿಯೂ ಮಂಟಪ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.
ಮಹಾತ್ಮಾಗಾಂಧಿ ವೃತ್ತ, ಪಟೇಲ್ ಚೌಕ್ ಭವಾನಿ ಮಂದಿರ, ಈಶ್ವರ ನಗರ ಗಣೇಶ ಮಂಡಳ, ಹರಳಯ್ಯ ಚೌಕ್, ಸೀತಾ ಕಾಲೊನಿ ಹನುಮಾನ ದೇವಸ್ಥಾನ, ಸಂಗಮೇಶ್ವರ ಕಾಲೊನಿ, ಕಾಳಿ ಗಲ್ಲಿ, ಸುವರ್ಣಕಾರರ ಗಣೇಶ ಮಂಡಳ ಸದಾನಂದ ಮಠ, ರೇಣಾಗಲ್ಲಿ, ಧರ್ಮಪ್ರಕಾಶ ಗಲ್ಲಿ, ಬನಶಂಕರಿ ಓಣಿ, ಜೈಶಂಕರ ಕಾಲೊನಿ, ಶಿವಾಜಿ ಚೌಕ್, ಗೋಸಾಯಿ ಗಲ್ಲಿ, ಸುಭಾಷ ಚೌಕ್, ರಾಜಪೂತ ಗಲ್ಲಿ, ಬಿರಾದಾರ ಕಾಲೊನಿ, ಶಿವಾಜಿನಗರ, ಹಿರೇಮಠ ಕಾಲೊನಿ, ತ್ರಿಪುರಾಂತ, ದೇಶಪಾಂಡೆ ಗಲ್ಲಿ, ಕುಂಬಾರಪಾಳಿ, ವಿದ್ಯಾಶ್ರೀ ಕಾಲೊನಿ ಮತ್ತಿತರೆಡೆ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.
ಹೊರರಾಜ್ಯದ ಡಿಜೆ ತರುವುದನ್ನು ನಿರ್ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಹೇಳಿದ್ದರಿಂದ ಇತರೆ ವಾದ್ಯ ಮೇಳದ ವ್ಯವಸ್ಥೆಗೆ ಮಂಡಳದವರಿಂದ ಪ್ರಯತ್ನ ನಡೆದಿದೆ. ಹಬ್ಬದ ಸಂಬಂಧ ಈಗಾಗಲೇ ನಗರ ಠಾಣೆಯಲ್ಲಿ ಸಹ ಡಿವೈಎಸ್ಪಿ, ಸಿಪಿಐ ನೇತೃತ್ವದಲ್ಲಿ ಸಭೆ ನಡೆದಿದೆ. ಹಬ್ಬ ಶಾಂತಿಯುತವಾಗಿ ಆಚರಿಸಬೇಕು. ಸಂಭ್ರಮವಿರಲಿ ಆದರೆ ವಿನಾಕಾರಣ ಗದ್ದಲಕ್ಕೆ ಎಡೆಮಾಡಿಕೊಡಬಾರದು ಎಂದು ಮಂಡಳಗಳ ಪದಾಧಿಕಾರಿಗಳಿಗೆ ಸೂಚಿಸಲಾಗಿದೆ.
ಬಸವೇಶ್ವರ ವೃತ್ತದಲ್ಲಿ ಕೆಲ ವರ್ಷಗಳಿಂದ ವಿವಿಧ ರೀತಿಯ ಆಕರ್ಷಣೆಯೊಂದಿಗೆ ಮಂಟಪ ನಿರ್ಮಿಸುತ್ತಿದ್ದು ಈ ಸಲ ರಾಜಮಹಲ್‌ದಲ್ಲಿ ಗಣೇಶ ಪ್ರತಿಷ್ಠಾಪಿಸಲಾಗುವುದುಶಿವಕುಮಾರ ಕಟಗಿಮಠ ಗಣೇಶ ಮಂಡಳಿ ಕಾರ್ಯದರ್ಶಿ
ಈಶ್ವರ ನಗರದಲ್ಲಿನ ಗಣೇಶನಿಗೆ ಕೇದಾರನಾಥ ಮಂದಿರದ ಮಾದರಿಯ ಮಂಟಪ ಸಿದ್ಧಪಡಿಸಲಾಗುತ್ತಿದೆ. ಇತರೆ ಮಂಡಳದವರಿಂದಲೂ ವಿವಿಧ ಸಿದ್ಧತೆ ನಡೆದಿದೆಕಿರಣ ಆರ್ಯ ಗಣೇಶ ಮಂಡಳ ಪ್ರಮುಖ
ಪ್ರಮುಖವಾದ ಮಹಾತ್ಮಗಾಂಧಿ ವೃತ್ತದಲ್ಲಿ ದಸರಾ ಮತ್ತು ಗಣೇಶ ಹಬ್ಬಕ್ಕೆ ವಿಶೇಷವಾದ ಆಕರ್ಷಣೆ ಇರುತ್ತದೆ. ಗಣೇಶನಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಇರಲಿದೆಸಂದೀಪ ಬುಯ್ಯೆ ಗಣೇಶ ಮಂಡಳ ಪ್ರಮುಖ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.