ADVERTISEMENT

ಬೀದರ್ | ಮಾರ್ಚ್‌ ಒಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಿ: ಈಶ್ವರ ಬಿ.ಖಂಡ್ರೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 4:12 IST
Last Updated 6 ಜನವರಿ 2026, 4:12 IST
ಬೀದರ್ ಜಿಲ್ಲಾ ಪಂಚಾಯತ್  ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿದರು
ಬೀದರ್ ಜಿಲ್ಲಾ ಪಂಚಾಯತ್  ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿದರು   

ಬೀದರ್: ‘ವಿವಿಧ ಇಲಾಖೆಗಳು ಪ್ರಸಕ್ತ ಸಾಲಿನ ಗುರಿ ಸಾಧಿಸಲು ಎಲ್ಲ ಕಾಮಗಾರಿಗಳು ಮಾರ್ಚ್‌ ಒಳಗೆ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಮಾತನಾಡಿದ ಅವರು, ‘ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಿ ತಮಗೆ ವಹಿಸಿದ ಗುರಿ ಸಾಧಿಸಬೇಕು. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಿಯಾಶೀಲರಾಗಬೇಕು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಹಂಚಿಕೆ ಆಗಿರುವ ಅನುದಾನವನ್ನು ಸರಿಯಾಗಿ ಬಳಕೆಯಾಗಬೇಕು. ಮೈಕ್ರೋದಲ್ಲಿ ಎಲ್ಲ ಶಾಸಕರು ಪ್ರಸ್ತಾವನೆ ನೀಡಿದ್ದು, ಅಧಿಕಾರಿಗಳಿಂದ ವಿಳಂಬ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಧಿಕಾರಿಗಳು ತಕ್ಷಣವೇ ಮರುಪರಿಶೀಲಿಸಿ 5 ದಿನದೊಳಗಾಗಿ ಪ್ರಸ್ತಾವನೆಗಳನ್ನು ಕಳಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಜಿಲ್ಲೆಯಲ್ಲಿ ₹277 ಕೋಟಿ ಬೆಳೆ ಪರಿಹಾರವನ್ನು 1.92 ಲಕ್ಷ ರೈತರಿಗೆ ಅವರ ಖಾತೆಗೆ ಜಮಾ ಆಗಿವೆ. 5 ಸಾವಿರ ರೈತರಿಗೆ ₹80 ಲಕ್ಷ ವಿವಿಧ ತಾಂತ್ರಿಕ ಕಾರಣಗಳಿಂದ ಜಮಾ ಆಗಬೇಕಿದೆ. ಈ ಸಮಸ್ಯೆ ತಕ್ಷಣ ಪರಿಹರಿಸಬೇಕು’ ಎಂದರು.

‘ಈಗಾಗಲೇ ಕೆಪಿಎಸ್ ಶಾಲೆಗಳನ್ನು ಮಂಜೂರಾತಿ ಮಾಡಲಾಗಿದೆ. ಇದಕ್ಕೆ ಯೊಜನಾ ವರದಿ ಸಿದ್ಧಪಡಿಸಿ ಅನುಮೋದನೆ ಪಡೆಯಲಾಗುವುದು. ಜೆಜೆಎಂ ಕಾಮಗಾರಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಅಧಿಕಾರಿಗಳು ಸಮಸ್ಯೆಗಳನ್ನು ಪರಿಶೀಲಿಸಿ ಯಾರಿಗೂ ತೊಂದರೆ ಆಗದಂತೆ ಗುಣಮಟ್ಟದ ಕಾಮಗಾರಿಗೆ ಕ್ರಮ ವಹಿಸಬೇಕು’ ಎಂದರು.

‘ಕೆಲ ಕಾಮಗಾರಿಗಳಿಗೆ ಭೂಮಿ ಗುರುತಿಸಲು ಜಿಲ್ಲಾಡಳಿತಕ್ಕೆ ತಿಳಿಸಿದ್ದೇನೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಶೀಘ್ರವೇ 10 ಎಕರೆ ಜಮೀನು ಹಸ್ತಾಂತರಗೊಳ್ಳಬೇಕು. ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೂ ಸಹ ಭೂಮಿ ಗುರುತಿಸಲಾಗಿದೆ. ಅನೇಕ ಕಾಮಗಾರಿಗಳ ಭೂಮಿ ಗುರುತಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು’ ಎಂದರು.

‘ಜಿಲ್ಲೆಯ ಶಾಲಾ ಕೊಠಡಿಗಳ ರಿಪೇರಿಗೆ ₹10 ಕೋಟಿ ಅಗತ್ಯವಿದೆ. ಕೆಕೆಆರ್‌ಡಿಬಿ ಅನುದಾನದಡಿ ಕ್ರಮಕೈಗೊಳ್ಳಲಾಗುವುದು. 1317 ಕೊಠಡಿಗಳನ್ನು ಅವಿಷ್ಕಾರ ಯೋಜನೆಯಡಿ ರಿಪೇರಿ ಮಾಡಲಾಗುತ್ತಿದೆ’ ಎಂದು ಹೇಳಿದರು.

ಸಭೆ ಆರಂಭದಲ್ಲಿ ವಿವಿಧ ಇಲಾಖೆಯ ಯೋಜನಾ ಕಾರ್ಯಕ್ರಮಗಳ ಫಲಾನುಭವಿಗಳಿಗೆ ಸಹಾಯಧನದ ಸೌಲಭ್ಯಗಳನ್ನು ವಿತರಿಸಲಾಯಿತು.

ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್, ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಅರಣ್ಯ ಉಪ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತರಾದ ಮುಕುಲ್ ಜೈನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.