ADVERTISEMENT

ಬೇಮಳಖೇಡಾ: ಆಂಬುಲೆನ್ಸ್ ಸೇವೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 6:49 IST
Last Updated 8 ಜೂನ್ 2025, 6:49 IST
<div class="paragraphs"><p>ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡಾ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು</p></div>

ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡಾ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

   

ಚಿಟಗುಪ್ಪ (ಹುಮನಾಬಾದ್) : ಬೇಮಳಖೇಡಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಅಂಬುಲೆನ್ಸ್ ಕೊರತೆ ಉಂಟಾಗಿದ್ದು, ಸುತ್ತಮುತ್ತಲಿನ ಗ್ರಾಮದ ನಿವಾಸಿಗಳು ಚಿಕಿತ್ಸೆಗಾಗಿ ದೂರದ ಬೀದರ್ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.

ನೆರೆಯ ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇದಾಗಿದೆ. ಆದರೆ, ಈ ಆಸ್ಪತ್ರೆಯಲ್ಲಿ ಪ್ರಸ್ತುತ ಒಬ್ಬ ವೈದ್ಯರಿದ್ದು, ಹಗಲಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ರಾತ್ರಿ ಪಾಳಿಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ. ಜತೆಗೆ ತರಬೇತಿ ಹಾಗೂ ಸಭೆಗಳಿಗೆ ವೈದ್ಯರು ಹೋದರೆ ಸೇವೆ ಇರುವುದಿಲ್ಲ.‌ ಆಸ್ಪತ್ರೆಯಲ್ಲಿ ಸುಸಜ್ಜಿತ ಹೆರಿಗೆ ವಾರ್ಡ್ ಇದೆ. ತುರ್ತುಸೇವಾ ಘಟಕವೂ ಇದೆ. ಹೆರಿಗೆಗಾಗಿ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಆದರೆ, ಸಂಜೆ ನಂತರ ಬಂದರೆ ಅವರು ಬೀದರ್ ಅಥವಾ ಮನ್ನಾಏಖೆಳ್ಳಿ ಇಲ್ಲವೇ ಹುಮನಾಬಾದ್‌ಗೆ ಹೋಗಬೇಕು. ಇಂತಹ ಸಂದರ್ಭದಲ್ಲಿ ಗರ್ಭಿಣಿಯರನ್ನು ಸಾಗಿಸಲು ಅಂಬುಲೆನ್ಸ್ ಸೇವೆ ಇಲ್ಲದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT
ಆಂಬ್ಯುಲೆನ್ಸ್‌ ಇಲ್ಲದೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಣಂತಿ ಸಾವು
ಬೇಮಳಖೇಡಾ ಗ್ರಾಮದ ನಿವಾಸಿ ಮಹಾನಂದ ವೀರಪ್ಪ ಡಾಲಿ ಎಂಬುವವರು ಜೂನ್‌ 2ರಂದು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಹೆರಿಗೆ ಆಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ರಕ್ತಸ್ರಾವ ಹೆಚ್ಚಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಸಹ ರಕ್ತಸ್ರಾವ ನಿಲ್ಲಲಿಲ್ಲ. ಬೀದರ್ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಸಿಬ್ಬಂದಿಗೆ ಅಂಬುಲೆನ್ಸ್ ಕೇಳಿದರೆ ಇಲ್ಲ ಎಂದರು. ನಂತರ ಅನಿವಾರ್ಯವಾಗಿ ಖಾಸಗಿ ವಾಹನದಲ್ಲಿ ಕರೆದುಕೊಂಡು ಬೀದರ್ ನಗರಕ್ಕೆ ಹೋಗುವ ದಾರಿ ಮಧ್ಯೆದಲ್ಲಿ ಬಾಣಂತಿ ಮಹಾನಂದ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಇದ್ದಿದ್ದರೆ ಶೀಘ್ರ ಜಿಲ್ಲಾ ಆಸ್ಪತ್ರೆಗೆ ಹೋಗುತ್ತಿದ್ದೆವು. ಜೀವ ಉಳಿಯುತ್ತಿತ್ತು. ಚಿಕಿತ್ಸೆಗಾಗಿ ನಮ್ಮಂತಹ ಬಡವರೇ ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬರುತ್ತೇವೆ. ಆದರೆ ಇಲ್ಲಿ ಸೌಲಭ್ಯಗಳು ಇಲ್ಲದ ಕಾರಣ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಬೇಕು ಎಂದು ಮೃತ ಮಹಾನಂದ ಅವರ ಮಾವ ವೈಜಿನಾಥ ಆಗ್ರಹಿಸಿದ್ದಾರೆ.

ಶಾಸಕ ಭೇಟಿ :

ಬೇಮಳಖೇಡಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಅಲ್ಲಿನ ಅವ್ಯವಸ್ಥೆ ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಬಡವರು, ಮಧ್ಯಮ ವರ್ಗದವರು ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಇವರಿಗೆ ಉತ್ತಮ ಚಿಕಿತ್ಸೆ ಸಿಗಬೇಕು. ಅಲ್ಲದೆ ಬೇಮಳಖೇಡಾ ಗ್ರಾಮವು ತೆಲಂಗಾಣದ ಗಡಿಗೆ ಹೊಂದಿಕೊಂಡಿದೆ. ಹೀಗಾಗಿ ಈ ಆಸ್ಪತ್ರೆಯಲ್ಲಿ ರಾತ್ರಿ ಸಂದರ್ಭದಲ್ಲಿ ವೈದ್ಯರು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟವರೊಂದಿಗೆ ಸೂಚನೆ ನೀಡಲಾಗುವುದು ಎಂದರು.

ಬೇಮಳಖೇಡಾ ಆಸ್ಪತ್ರೆಗೆ ವಾಹನ ಚಾಲಕರನ್ನು ನೇಮಿಸಿ ಒಂದು ಅಂಬುಲೆನ್ಸ್ ಮತ್ತು ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳಿಗಾಗಿ ಅನುದಾನ ನೀಡಲಾಗುವುದು
  ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ
ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ 
ಹೆರಿಗೆ ಸಮಯದಲ್ಲಿ ರಕ್ತಸ್ರಾವದಿಂದ ಬಾಣಂತಿ ಮೃತಪಟ್ಟಿರುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ
ಡಾ.ಶಿವಕುಮಾರ್ ಸಿದ್ದೇಶ್ವರ ತಾಲ್ಲೂಕು ಆರೋಗ್ಯಾಧಿಕಾರಿ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಬೇಮಳಖೇಡಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂಬುಲೆನ್ಸ್ ವ್ಯವಸ್ಥೆ ಇದ್ದುದನ್ನು ಜಿಲ್ಲಾ ಆರೋಗ್ಯಾಧಿಕಾರಿ ಆದೇಶದ ಮೇರೆಗೆ ತಾಲ್ಲೂಕಿನ ಮನ್ನಾಏಖೆಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಿದ್ದಾರೆ. ಇದು ಯಾವ ಕಾರಣಕ್ಕಾಗಿ ಮಾಡಿದ್ದಾರೆ?. ಮನ್ನಾಏಖೆಳ್ಳಿ ಆಸ್ಪತ್ರೆಯಲ್ಲಿ ಒಟ್ಟು ಮೂರು ಅಂಬುಲೆನ್ಸ್‌ಗಳು ಸೇವೆ ಮಾಡುತ್ತಿವೆ. ಜನರ ಅನುಕೂಲಕ್ಕಾಗಿ ಅದರಲ್ಲಿ ಒಂದು ಈಚೆಗೆ ನಾನು ಕೆಕೆಆರ್‌ಡಿಬಿಯ ₹45 ಲಕ್ಷ ಅನುದಾನದಲ್ಲಿ ಹೈಟೆಕ್ ಅಂಬುಲೆನ್ಸ್ ನೀಡಿದ್ದೇನೆ. ಆದರೂ ಮತ್ತೆ ಏಕೆ ಬೇಮಳಖೇಡಾ ಅಂಬುಲೆನ್ಸ್ ಮನ್ನಾಏಖೆಳ್ಳಿಗೆ ಹಾಕಿದ್ದೀರಿ.‌ ಬೇಮಳಖೇಡಾದಲ್ಲಿ ಅಂಬುಲೆನ್ಸ್ ಸೇವೆ ಸೂಕ್ತ ಸಮಯಕ್ಕೆ ಸರಿಯಾಗಿ ಲಭ್ಯವಿಲ್ಲದ ಕಾರಣ ಮಹಾನಂದ ಎಂಬ ಬಾಣಂತಿ ಮೃತಪಟ್ಟಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಆರೋಗ್ಯ ಸಚಿವರ ಗಮನಕ್ಕೆ ತಂದು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.