ADVERTISEMENT

Bengaluru Stampede | ಕುನ್ಹ ಸಮಿತಿ ವರದಿ ಏಕಪಕ್ಷೀಯ: ಶಾಸಕ ಬೆಲ್ದಾಳೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 15:24 IST
Last Updated 18 ಜುಲೈ 2025, 15:24 IST
<div class="paragraphs"><p>ಡಾ. ಶೈಲೇಂದ್ರ ಕೆ. ಬೆಲ್ದಾಳೆ,‌ಶಾಸಕ</p><p></p></div>

ಡಾ. ಶೈಲೇಂದ್ರ ಕೆ. ಬೆಲ್ದಾಳೆ,‌ಶಾಸಕ

   

ಬೀದರ್: ಆರ್‌ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಅಮಾಯಕರು ಸಾವನ್ನಪ್ಪಿ, 71 ಮಂದಿ ಗಾಯಗೊಂಡಿರುವ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಆದರೆ, ಈ ಕುರಿತು ತನಿಖೆ ನಡೆಸಿರುವ ನ್ಯಾ.ಮೈಕಲ್ ಕುನ್ಹ ಸಮಿತಿಯು ರಾಜ್ಯ ಸರ್ಕಾರವನ್ನು ಈ ಪ್ರಕರಣದಿಂದ ಬಚಾವ್ ಮಾಡಿ ಕ್ಲೀನ್ ಚಿಟ್ ನೀಡಲು ಹೊರಟಿರುವುದು ಖಂಡನಾರ್ಹ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆದ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ತಿಳಿಸಿದ್ದಾರೆ.

ADVERTISEMENT

ಕುನ್ಹ ಸಮಿತಿ ವರದಿಯಲ್ಲಿನ ಅಂಶಗಳನ್ನು ಗಮನಿಸಿದರೆ ಕಾಲ್ತುಳಿತ ಪ್ರಕರಣಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧವೇ ಇಲ್ಲ ಎಂಬಂತೆ ಬಿಂಬಿಸಲಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರ ತಪ್ಪೇ ಇಲ್ಲ ಎಂದು ಸಾಬೀತುಪಡಿಸುವಂತಿರುವ ಈ ವರದಿ ಅಕ್ಷರಶಃ ಸರ್ಕಾರವೇ ಬರೆಸಿರುವ ವರದಿ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಜನರ ಜೀವಕ್ಕೂ ಬೆಲೆ ಕೊಡದಂತಹ ಈ ವರದಿಯನ್ನು ಕನ್ನಡಿಗರು ಒಪ್ಪುವುದಿಲ್ಲ. ಸರ್ಕಾರಕ್ಕೆ ಅಮಾಯಕರ ಸಾವು, ಕುಟುಂಬದವರ ನೋವಿನ ಶಾಪ ತಟ್ಟಲಿದೆ ಎಂದು ಶುಕ್ರವಾರ ಟೀಕಿಸಿದ್ದಾರೆ.

ಕಾಲ್ತುಳಿತ ಘಟನೆಗೆ ಆರ್‌ಸಿಬಿ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ ಸಿಎ), ಡಿಎನ್‌ಎ ಸಂಸ್ಥೆ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಏಕಪಕ್ಷೀಯವಾಗಿ ಗುರಿ ಮಾಡಲಾಗಿದೆ. ಕಾರ್ಯಕ್ರಮ ಆಯೋಜನೆಗೂ ಮುನ್ನ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ, ಪೂರ್ವಭಾವಿ ತಯಾರಿ ಮಾಡಿಕೊಂಡಿರಲಿಲ್ಲ. ಇದನ್ನು ಏಕೆ ವರದಿಯಲ್ಲಿ ಉಲ್ಲೇಖಿಸಿಲ್ಲ? ಸ್ವತಃ ಸಿಎಂ ತಮ್ಮ ‘ಎಕ್ಸ್’ ಖಾತೆಯಲ್ಲಿ ಕಾರ್ಯಕ್ರಮ ಬಗ್ಗೆ ಪೋಸ್ಟ್ ಮಾಡಿರುವುದು, ಹಿರಿಯ ಅಧಿಕಾರಿಗಳು ವಿಧಾನಸೌಧ ಮುಂಭಾಗ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಸಮಿತಿ ಗಮನಕ್ಕೆ ಬಂದಿಲ್ಲವೆ? ಎಲ್ಲ ಮಗ್ಗುಲಿನಿಂದಲೂ ಇಲ್ಲಿ ಸರ್ಕಾರವನ್ನು ರಕ್ಷಿಸುವ ಕೆಲಸ ಮಾಡಲಾಗಿದೆ. ಇದು ರಾಜ್ಯ ಸರ್ಕಾರ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಕಿಡಿಕಾರಿದ್ದಾರೆ.

ತನ್ನ ಬೆನ್ನು ತಟ್ಟಿಸಿಕೊಳ್ಳುವ ಕಾಂಗ್ರೆಸ್ ಸರ್ಕಾರದ ಪ್ರೇರಿತ ಈ ವರದಿ ಸ್ವೀಕಾರಕ್ಕೆ ಯೋಗ್ಯವಲ್ಲ. ಈ ವರದಿ ಕೈಬಿಟ್ಟು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು.
-ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಶಾಸಕ, ಬೀದರ್‌ ದಕ್ಷಿಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.