ಬೀದರ್: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಅರ್ಬನ್ ನಕ್ಸಲ್. ಹಿಂದೂ ಧರ್ಮವನ್ನು ಒಡೆಯಲೆಂದೇ ಅವರು ಜಾತಿ ಸಮೀಕ್ಷೆಗೆ ಮುಂದಾಗಿದ್ದಾರೆ’ ಎಂದು ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಟೀಕಿಸಿದರು.
ಬರುವ ಜನವರಿಯಲ್ಲಿ ಕೇಂದ್ರ ಸರ್ಕಾರ ಜನಗಣತಿ ಮಾಡಲಿದೆ. ರಾಜ್ಯ ಸರ್ಕಾರದ ಜಾತಿ ಜನಗಣತಿ ಅಗತ್ಯವಿರಲಿಲ್ಲ ಎಂದು ನಗರದಲ್ಲಿ ಭಾನುವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಈ ದೇಶ ಉಳಿಯಬೇಕಾದರೆ ಹಿಂದೂ ಸಂಸ್ಕೃತಿ ಉಳಿಯಬೇಕು. ಹಿಂದೂಗಳಾಗಿ ಬದುಕಬೇಕು. ಇಲ್ಲವಾದಲ್ಲಿ ದೇಶ ಸರ್ವನಾಶವಾಗುತ್ತದೆ. ಹಿಂದೂ ವಿರೋಧಿ ಸಿದ್ದರಾಮಯ್ಯನವರು ದೇಶವನ್ನು ಒಡೆಯಲಿಕ್ಕೆಂದೆ ಪ್ರತ್ಯೇಕ ಜಾತಿ ಸಮೀಕ್ಷೆ ಮಾಡುತ್ತಿದ್ದಾರೆ. ಎಲ್ಲಾ ಹಿಂದೂ ಧರ್ಮೀಯರು ಒಗ್ಗಟ್ಟಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಹಾಗೂ ಇತರೆ ಒಳಪಂಗಡಗಳ ಹೆಸರು ನಮೂದಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಪ್ರಭು ಚವಾಣ್, ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಮುಖಂಡರಾದ ಪ್ರಕಾಶ ಖಂಡ್ರೆ, ಗುರುನಾಥ ಜ್ಯಾಂತಿಕರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ಪಾಟೀಲ್, ಪೀರಪ್ಪ ಔರಾದೆ, ಭಾಲ್ಕಿ ಮಂಡಲ ಅಧ್ಯಕ್ಷ ವೀರಣ್ಣ ಕಾರಬಾರಿ, ಬಸವರಾಜ ಪವಾರ, ಶ್ರೀನಿವಾಸ ಚೌದ್ರಿ, ಗುರುನಾಥ ರಾಜಗೀರಾ ಇತರರಿದ್ದರು.
‘ತಮಾಷೆ ನೋಡುತ್ತಿರುವ ಸಿಎಂ’
‘ಜಾತಿ ಸಮೀಕ್ಷೆ ಹೆಸರಲ್ಲಿ ಎಲ್ಲರನ್ನೂ ಬಿಜಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಾಷೆ ನೋಡುತ್ತಿದ್ದಾರೆ’ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಯೂ ಆದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಆರೋಪಿಸಿದರು.
ಹಿಂದೂ ಧರ್ಮವನ್ನು ವ್ಯವಸ್ಥಿತವಾಗಿ ಒಡೆಯುವ ಉನ್ನಾರ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ಪಕ್ಷದವರನ್ನು ಬಿಜಿ ಮಾಡಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಕುಂತು ತಮಾಷೆ ನೋಡುತ್ತಿದ್ದಾರೆ ಟೀಕಿಸಿದರು.
ಸಿದ್ದರಾಮಯ್ಯನವರ ಮೇಲೆ ಆರೋಪಗಳು ಬಂದಾಗಲೆಲ್ಲಾ ಅದರಿಂದ ನುಣುಚಿಕೊಳ್ಳಲು ಹೊಸ ತಂತ್ರ ಮಾಡುವುದು ಅವರ ಹಳೆ ಚಾಳಿ. ಇತ್ತೀಚೆಗೆ ಧರ್ಮಸ್ಥಳದ ವಿಷಯ, ಈಗ ಚಾಮುಂಡಿ ವಿಷಯ, ಈಗ ಜಾತಿ ಸಮೀಕ್ಷೆ ಎಂದರು.
ಮೋದಿ ಜನ್ಮದಿನ; ರಕ್ತ ಸಂಗ್ರಹ
ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ಅ. 2ರ ವರೆಗೆ ಸೇವಾ ಪಕ್ವಾಡ ಎಂಬ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಕಾರ್ಯಕರ್ತರಿಂದ 75 ಯೂನಿಟ್ ರಕ್ತ ಸಂಗ್ರಹ, ಸ್ವಚ್ಛತಾ ಕಾರ್ಯಕ್ರಮ, ಸಸಿ ನೆಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.