ADVERTISEMENT

ಬಿಜೆಪಿ ಮಾಜಿ ಸಂಸದ ಭಗವಂತ ಖೂಬಾ ಮತ್ತೊಂದು ಅಕ್ರಮ ಬಯಲು: ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:30 IST
Last Updated 6 ನವೆಂಬರ್ 2025, 5:30 IST
ಭಗವಂತ ಖೂಬಾ
ಭಗವಂತ ಖೂಬಾ   

ಭಾಲ್ಕಿ: ‘ಬಿಜೆಪಿ ಮಾಜಿ ಸಂಸದ ಭಗವಂತ್ ಖೂಬಾ ಅವರಿಗೆ ಅಕ್ರಮ ಗಣಿಗಾರಿಕೆಯಲ್ಲಿ ₹25.29 ಕೋಟಿ ದಂಡದ ನಂತರ ಇದೀಗ ಬ್ರಿಮ್ಸ್ ಆಸ್ಪತ್ರೆ ಅಕ್ರಮವೂ ಹೊರಬಂದಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ್, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ರಾಜಭವನ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಆಡಳಿತಾವಧಿಯ ಅಕ್ರಮಗಳು ಒಂದರ ಹಿಂದೆ ಒಂದಾಗಿ ಬಯಲಾಗುತ್ತಿವೆ. ಈಚೆಗೆ ರಾಜ್ಯದ ಮಹಾಲೇಖಾಧಿಕಾರಿ (ಸಿಎಜಿ) ವರದಿಯ ಮೂಲಕ ಬಹಿರಂಗಗೊಂಡಿರುವ ಹೊಸ ಅಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರ ಕುಟುಂಬದ ನೇರ ಸಂಚು ಸ್ಪಷ್ಟವಾಗಿದೆ’ ಎಂದು ದೂರಿದರು.

‘ಸಿಎಜಿ ವರದಿ ಪ್ರಕಾರ, 2019 ರಿಂದ 2023ರವರೆಗೆ ನಡೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಬ್ರಿಮ್ಸ್ ಆಸ್ಪತ್ರೆಯ ಲಾಂಡ್ರಿ ಸೇವೆಯ ಟೆಂಡರ್‌ನ್ನು ಖೂಬಾ ಅವರ ಸಹೋದರನಿಗೆ ನೀಡುವ ಮೂಲಕ ಅಕ್ರಮವಾಗಿ ಸುಮಾರು ₹1.54 ಕೋಟಿ ರೂ. ಹೆಚ್ಚುವರಿ ಹಣ ಲೂಟಿ ಮಾಡಲಾಗಿದೆ. ಈ ಅಕ್ರಮ ವ್ಯವಹಾರವನ್ನು ವರದಿ (23/05/2025) ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಈಗ ಈ ಹಣವನ್ನು ಹಿಂತಿರುಗಿಸಲು ರಿಕವರಿ ಆದೇಶ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಈ ಅಕ್ರಮದಲ್ಲಿ ಬ್ರಿಮ್ಸ್ ನಿರ್ದೇಶಕ ಶಿವಕುಮಾರ ಶೆಟ್ಕಾರ್, ಬಿಜೆಪಿ ಶಾಸಕರು ಹಾಗೂ ಕೆಲವು ಸ್ಥಳೀಯ ಮುಖಂಡರು ಸಹ ಭಾಗಿಯಾಗಿರುವುದು ವರದಿಯಲ್ಲಿ ಸ್ಪಷ್ಟವಾಗಿದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

ಈಶ್ವರ ಖಂಡ್ರೆ ದೂರದೃಷ್ಟಿಯ ಬ್ರಿಮ್ಸ್ ಲೂಟಿ ಮಾಡಿದ ಬಿಜೆಪಿ:

ಆರೋಪ ಜಿಲ್ಲೆಯ ಬಡಜನರಿಗೆ, ಗ್ರಾಮೀಣ ಪ್ರದೇಶದ ರೋಗಿಗಳಿಗೆ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ದೊರಕಿಸಲು ಅಂದಿನ ಸಚಿವರು, ಇಂದಿನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ದೂರದೃಷ್ಟಿಯಿಂದ ಬ್ರಿಮ್ಸ್ ಆಸ್ಪತ್ರೆ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿತ್ತು. ಆದರೆ, ಅಧಿಕಾರಕ್ಕೆ ಬಂದ ನಂತರ, ಬಿಜೆಪಿ ಮುಖಂಡರು ಆ ಸಂಸ್ಥೆಯ ನಿಜವಾದ ಉದ್ದೇಶವನ್ನು ಮರೆತು, ಅಕ್ರಮ ಟೆಂಡರ್‌ಗಳ ಮೂಲಕ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. 

ಜನರ ಪುನರುಜ್ಜೀವನಕ್ಕಾಗಿ ಶ್ರಮಿಸುತ್ತಿರುವ ಖಂಡ್ರೆ:

ಸಚಿವ ಈಶ್ವರ ಖಂಡ್ರೆ ಅವರು ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಅಕ್ರಮಗಳನ್ನು ಸರಿಪಡಿಸಿ, ಬ್ರಿಮ್ಸ್ ಅನ್ನು ಜನರ ಸೇವೆಗೆ ಮರಳಿ ತರುವ ಕಾರ್ಯದಲ್ಲಿ ಶ್ರಮಿಸುತ್ತಿದ್ದಾರೆ.

ಜನರ ಕ್ಷಮೆ ಕೇಳಲು ಬಿಜೆಪಿಗೆ ಆಗ್ರಹ:

ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಹಾಗೂ ಅವರ ದಲ್ಲಾಳಿ ತಂಡದವರು ಬೇರೆಯವರ ನೈತಿಕತೆ ಬಗ್ಗೆ ಮಾತನಾಡುವ ಮೊದಲು ಅವರ ಪಕ್ಷದ ಮಾಜಿ ಸಂಸದನ ಅಕ್ರಮ ಗಣಿಗಾರಿಕೆ ಹಾಗೂ ಬ್ರಿಮ್ಸ್ ಟೆಂಡರ್ ಅಕ್ರಮದ ಬಗ್ಗೆ ಸ್ಪಷ್ಟನೆ ನೀಡಿ, ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.